ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಕಾಯಕ, ದಾಸೋಹವೇ ಮೊದಲಾಗಲಿ

ಬಸವ ಜಯಂತಿಯಲ್ಲಿ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಲಹೆ
Last Updated 15 ಮೇ 2021, 3:50 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೊರೊನಾದಿಂದ ವಿಶ್ವವೇ ತಲ್ಲಣಿಸಿ ಹೋಗಿದೆ. ಇಂತಹ ಹೊತ್ತಿನಲ್ಲಿ ಎಲ್ಲರೂ ಕಾಯಕ ದಾಸೋಹವೇ ಮೊದಲಾಗಬೇಕು. ಶರಣರ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡರೆ ಇಂಥ ಯಾವುದೇ ವೈರಾಣು ದಾಳಿಯೂ ಮನುಕುಲದ ಬಳಿ ಸುಳಿಯುವುದಿಲ್ಲ’ ಎಂದು ಇಲ್ಲಿನ ಸುಲಫಲ ಮತ್ತು ಶ್ರೀಶೈಲ ಸಾರಂಗ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಆವರಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ, ಷಟ್‍ಸ್ಥಲ ಧ್ವಜಾರೋಹಣವನ್ನು ನೆರವೇರಿದ ಬಳಿಕ ಅವರು ಬಸವಯ ಜಯಂತಿ ಸಂದೇಶ ನೀಡಿದರು.

‘ಕಾಯಕದಿಂದ ಬಂದಿರುವ ಆದಾಯದಲ್ಲಿ ಉಂಡು, ಉಟ್ಟು ಉಳಿದಿದ್ದನ್ನು ಸಂಕಷ್ಟದಲ್ಲಿರುವವರಿಗೆ ದಾಸೋಹ ಮಾಡಬೇಕು. ಆಗಲೇ ಕಾಯಕ ದಾಸೋಹಕ್ಕೆ ಬೆಲೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಕೊರೊನಾ ಸೋಂಕಿತರು ಹಾಗೂ ಅವರನ್ನು ರಕ್ಷಿಸಲು ಹೋರಾಡುವವರಿಗೆ ನಾವು ಬೆನ್ನೆಲುಬಾಗಿ ನಿಲ್ಲಬೇಕಿದೆ’ ಎಂದರು.

‘ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಡುಗೆ ನೀಡಿದವರು ಬಸವಾದಿ ಶರಣರು. ಹನ್ನೆರಡನೇ ಶತಮಾನ ಸುವರ್ಣ ಯುಗ ಮೊದಲ ಸಂಸತ್ತು ರಚನೆ ಮಾಡಿದ್ದು ಬಸವಣ್ಣ. ದಯವೇ ಧರ್ಮದ ಮೂಲವಯ್ಯ ಎಂದು ಹೇಳುವ ಮೂಲಕ ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದವರು ಬಸವಣ್ಣ’ ಎಂದರು.

ಕೂಡಲಸಂಗಮದ ಬಸವ ಮಂಪಟದ ಪ್ರಭುಲಿಂಗ ಸ್ವಾಮೀಜಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ, ಪ್ರಮುಖರಾದ ಪ್ರಭುಲಿಂಗ ಮಹಾಗಾಂವಕರ್, ಆರ್.ಜಿ.ಶೆಟಗಾರ, ರಾಜಶೇಖರ ಯಂಕಂಚಿ, ಅಯ್ಯಣ್ಣಗೌಡ ಪಾಟೀಲ, ಉದಯಕುಮಾರ ಜೇವರ್ಗಿ, ಪ್ರಶಾಂತ ಗುಡ್ಡಾ, ಸತೀಶ ಸಜ್ಜನ, ಜಗನ್ನಾಥ ಪಟ್ಟಣಶೆಟ್ಟಿ ಇದ್ದರು.

‘ಮರದಿಂದ ನರಳಷ್ಟೇ ಅಲ್ಲ; ನೆರವೂ ಇದೆ‌’
‘12ನೇ ಶತಮಾನದಲ್ಲಿ ಬಸವಣ್ಣನವರ ಮುಂದಾಳತ್ವದಲ್ಲಿ ಜರಗಿದ ಹೋರಾಟ ಸಮಷ್ಟಿ ಪ್ರಜ್ಞೆಯ ಸಂಕೇತ. ವೈಚಾರಿಕ ಸಂಘರ್ಷ ಅಭಿವೃದ್ಧಿಗೆ ಒತ್ತು ಕೊಡುತ್ತದೆ. ಅದರಿಂದ ವ್ಯಕ್ತಿ ಮತ್ತು ಸಮೂಹದಲ್ಲಿ ಸ್ವಾಭಿಮಾನ ಮುಡಿಸುತ್ತದೆ. ಇದರಿಂದಾಗಿ ಶಿವಶರಣರು ಭೌತಿಕ ಸುಖಕ್ಕಿಂತ ಸಮೂಹದ ಸುಖ ಬಯಸಿದರು’ ಎಂದು ಟೆಂಗಳಿಯ ಡಾ.ಶಾಂತಿ ಸೊಮನಾಥ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.‌

ನಗರದ ಮಾನಸ ರೆಸಿಡೆನ್ಸಿ ಕಾಲೊನಿಯಲ್ಲಿ ಜರುಗಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿದ ಅಣ್ಣ ಬಸವಣ್ಣ. ಅವರ ಜಯಂತಿ ದಿನ ಸಸಿ ನೆಡುವುದನ್ನು ರೂಢಿಸಿಕೊಳ್ಳಿ. ಏಕಂದರೆ ಒಂದು ಗಿಡ ಕೇವಲ ನೆರಳಷ್ಟೆ ಅಲ್ಲ ವಿವಿಧ ರೀತಿಯ ನೆರವನ್ನೂ ನಮಗೆ ಕೊಡುತ್ತದೆ. ಪಕ್ಷಿಗಳಿಗೆ ಆಶ್ರಯ ಕೊಟ್ಟರೆ, ನಮಗೆ ಹೂವು, ಹಣ್ಣು ಕಾಯಿ, ಔಷಧ ಹೀಗೆ ಅನೇಕ ಜೀವರಾಶಿಗಳಿಗೆ ಜೀವ ನೀಡುವ ಗುಣ ಹೊ೦ದಿದೆ. ಇದು ಶರಣರಲ್ಲಿ ಇರುವ ಗುಣ’ ಎಂದರು.

ಉಪನ್ಯಾಸಕ ಕರಬಸಪ್ಪ ನಾಗಶಟ್ಟಿ, ಶಿವರಾಜ ಅಂಡಗಿ, ಎಂಜಿನಿಯರಗಳಾದ ಸಂಗಮೇಶ ಹೆಬ್ಬಾಳ, ಧರ್ಮರಾಜ ಹೆಬ್ಬಾಳ, ದನರಾಜ ಹೆಬ್ಬಾಳ ರೇಖಾ ಅಂಡಗಿ, ವಿಜಯಶ್ರೀ ಹೆಬ್ಬಾಳ, ರೇಣುಕಾ ನಾಗಶಟ್ಟಿ, ಶಿವಶರಣಪ್ಪ ಮುದಕನಳ್ಳಿ, ಚಂದ್ರಶೇಖರ ಮುದಕನಳ್ಳಿ, ನಾಗರಾಜ, ಗಂಗೋತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT