ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ| ವಿದ್ಯಾರ್ಥಿಗಳ ಮೇಲೆ ‘ದಂಡ’ ಪ್ರಹಾರ!

Last Updated 17 ಏಪ್ರಿಲ್ 2023, 6:27 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಇಡಿ ಪ್ರವೇಶಾತಿಗಾಗಿ ದಂಡಸಹಿತ ಪ್ರವೇಶ ಶುಲ್ಕ ಸಂಬಂಧ ವಿಶ್ವವಿದ್ಯಾಲಯ ಹೊರಡಿಸಿದ ಅಧಿಸೂಚನೆಗಳು ಕಾಲೇಜುಗಳ ಆಡಳಿತ ಮಂಡಳಿಯನ್ನು ಗೊಂದಲಕ್ಕೆ ತಳ್ಳಿದ್ದು, ದಂಡಸಹಿತ ಶುಲ್ಕಕ್ಕೆ ವಿದ್ಯಾರ್ಥಿಗಳು ನಲುಗಿದ್ದಾರೆ.

2022–23ನೇ ಶೈಕ್ಷಣಿಕ ಸಾಲಿನ ಬಿ.ಇಡಿ ಕೋರ್ಸ್‌ನ ಪ್ರವೇಶಾತಿಯನ್ನು ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್)‌ ವೆಬ್‌ಸೈಟ್‌ನಲ್ಲಿ ಆರಂಭಿಸಿದೆ. ಆರಂಭದಲ್ಲಿ ಏ.7ರಿಂದ 12ರವರೆಗೆ ದಂಡರಹಿತ ಪ್ರವೇಶ ಶುಲ್ಕ ಮತ್ತು 13 ಮತ್ತು 14ರಂದು ₹ 1,000 ದಂಡಸಹಿತ ಪ್ರವೇಶ ಶುಲ್ಕ ವಿಧಿಸಿ ಅಧಿಸೂಚನೆ
ಹೊರಡಿಸಿತ್ತು.

ತಾಂತ್ರಿಕ ಸಮಸ್ಯೆ ಉದ್ಭವಿಸಿದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿಗಳು ಯುಯುಸಿಎಂಎಸ್‌ನಲ್ಲಿ ಭರ್ತಿ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಪ್ರವೇಶಾತಿ ಅವಧಿ ಮುಂದೂಡುವಂತೆ 15 ಬಿ.ಇಡಿ ಕಾಲೇಜುಗಳು ಪ್ರಾಂಶುಪಾಲರು ಮನವಿ ಮಾಡಿದ್ದರು.

ಮನವಿ ಪುರಸ್ಕರಿಸಿದ ವಿವಿ ಕುಲಸಚಿವರು, ಏ.13ರಂದು ದಿನಾಂಕ ಮುಂದೂಡಿ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದರು. ಏ.14ರಿಂದ 18ರವರೆಗೆ ದಂಡರಹಿತ ಪ್ರವೇಶ ಶುಲ್ಕ ಮತ್ತು 19ರಿಂದ 22ರವರೆಗೆ ₹ 1,000 ದಂಡಸಹಿತ ಪ್ರವೇಶ ಶುಲ್ಕ ಅನ್ವಯ ಆಗುವುದಾಗಿ ಉಲ್ಲೇಖಿಸಿದ್ದರು.

‘ಏ.14ರಂದು ಆರಂಭ ಆಗಬೇಕಿದ್ದ ಪ್ರವೇಶಾತಿಯ ವೆಬ್‌ಸೈಟ್‌ ಏ.15ರ ಸಂಜೆ 6ರ ವೇಳೆಗೆ ಚಾಲನೆಗೊಂಡಿದೆ. ಅಧಿಸೂಚನೆಯ ಅನ್ವಯ ಏ.18ರಿಂದ ತೆಗೆದುಕೊಳ್ಳಬೇಕಿದ್ದ ₹1,000 ದಂಡಸಹಿತ ಪ್ರವೇಶ ಶುಲ್ಕವನ್ನು ಮೂರು ದಿನಗಳು ಮುಂಚಿತವಾಗಿ(ಏ.15ರಿಂದ) ಪಡೆಯುತ್ತಿದ್ದಾರೆ. ₹ 1,000 ದಂಡ ಕಟ್ಟದೆ ಇದ್ದರೆ ವೆಬ್‌ಸೈಟ್‌ನಲ್ಲಿ ದಾಖಲೆಗಳು ಸ್ವೀಕೃತವಾಗುತ್ತಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಅಲವತ್ತುಕೊಂಡರು.

‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸುಮಾರು 64 ಕಾಲೇಜುಗಳಿದ್ದು, ಪ್ರತಿ ಕಾಲೇಜಿನಲ್ಲಿ 70–80 ವಿದ್ಯಾರ್ಥಿಗಳು ಬಿ.ಇಡಿ ಕಲಿಯುತ್ತಿದ್ದಾರೆ. ತಾಂತ್ರಿಕ ದೋಷದ ನಡುವೆಯೂ ಶೇ 50ರಷ್ಟು ವಿದ್ಯಾರ್ಥಿಗಳು ದಾಖಲೆಗಳನ್ನು ಸಲ್ಲಿಸಿದ್ದಾರೆ. ತಾಂತ್ರಿಕ ಕಾರಣದಿಂದಾಗಿ ಅವಧಿ ಮುಂದೂಡಿಕೆಯ ಅಧಿಸೂಚನೆ ಹೊರಡಿಸಿದ್ದರೂ ದಂಡ ಪ್ರಹಾರ ಮಾತ್ರ ನಿಂತಿಲ್ಲ. ಇದು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಆಗುತ್ತಿದೆ’ ಎಂದು ಕಾಲೇಜಿನ ಪ್ರಾಂಶುಪಾಲರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ ಬೇರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಇಡಿ ಪ್ರವೇಶಾತಿ ಶುಲ್ಕ ಶೇ 50ರಷ್ಟು ಅಧಿಕವಾಗಿದೆ. ಈಗಿರುವ ₹ 9,465 ಶುಲ್ಕದ ಜತೆಗೆ ₹ 1,000 ದಂಡದಿಂದಾಗಿ ವಿದ್ಯಾರ್ಥಿಗಳು ತತ್ತರಿಸಿದ್ದಾರೆ. ದಂಡ ವಿನಾಯಿತಿಗಾಗಿ ಕುಲಸಚಿವರ ಭೇಟಿಗೆ ತೆರಳಿದ್ದರೂ ಕಚೇರಿ ಒಳಗೆ ಬಿಟ್ಟುಕೊಳ್ಳಲಿಲ್ಲ’ ಎಂದು ದೂರಿದರು.

‘ಮೊಬೈಲ್‌ ಕರೆ ಮೂಲಕ ಸಂಪರ್ಕಿಸಿದಾಗ, ‘ನಾನು ಆದೇಶ ಹೊರಡಿಸಿದ್ದೇನೆ. ಯುಯುಸಿಎಂಎಸ್‌ನ ನೋಡಲ್ ಅಧಿಕಾರಿಗಳನ್ನೇ ಕೇಳಿ’ ಎನ್ನುತ್ತಾರೆ. ನೋಡಲ್ ಅಧಿಕಾರಿಯನ್ನು ಕೇಳಿದರೆ, ‘ನನಗೆ ಏನು ಗೊತ್ತಿಲ್ಲ. ಇದರಲ್ಲಿ ತಾಂತ್ರಿಕ ಸಮಸ್ಯೆ ಇದೆ. ಕುಲಪತಿ, ಕುಲಸಚಿವರನ್ನು ಭೇಟಿ ಆಗಿ’ ಎನ್ನುತ್ತಾರೆ. ಈ ಇಬ್ಬರ ನಡುವೆ ದಂಡ ಪ್ರಹಾರ ಮಾತ್ರ ಮುಂದುವರೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ರಾತ್ರೋರಾತ್ರಿ ಅಧಿಸೂಚನೆ!

ಏ.13ರಂದು ಹೊರಡಿಸಿದ್ದ ದಂಡರಹಿತ ಪ್ರವೇಶಾತಿ ಶುಲ್ಕ ಅಧಿಸೂಚನೆಯನ್ನು ತಿದ್ದುಪಡಿ ಮಾಡಿಕೊಂಡು ಏ.15ರ ತಡರಾತ್ರಿ ಮತ್ತೊಂದು ಅಧಿಸೂಚನೆ ಹೊರಡಿಸಿ, ಕಾಲೇಜು ಪ್ರಾಂಶುಪಾಲರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದೆ.

‘ಏ.14ರಿಂದ ₹ 1,000 ದಂಡ ಅನ್ವಯ ಆಗಲಿದೆ ಎಂದು ಒಂದು ದಿನದ ಬಳಿಕದ ಅಧಿಸೂಚನೆಯಲ್ಲಿ ತಿಳಿಸಿದೆ. ವಿ.ವಿಯ ಆಡಳಿತ ಮಂಡಳಿ ಮನಸೋ ಇಚ್ಛೆ ಆದೇಶ ಹೊರಡಿಸಿ ವಿದ್ಯಾರ್ಥಿಗಳ ಜತೆ ಚೆಲ್ಲಾಟ ಆಡುತ್ತಿದೆ. ತನ್ನ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಲು ದಿನಕ್ಕೊಂದು ಆದೇಶ ಹೊರಡಿಸಿ ನಮ್ಮ ಮೇಲೆ ದಂಡ ಹಾಕುತ್ತಿದೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕುಲಸಚಿವರ ಗೊಂದಲದ ಹೇಳಿಕೆ!

‘ಯುಯುಸಿಎಂಎಸ್‌ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಇಲ್ಲ. ಕೇವಲ ಐದು ಕಾಲೇಜಿನವರು ನಿರ್ಲಕ್ಷ್ಯ ಹಾಗೂ ವೈಯಕ್ತಿಕ ಕಾರಣಗಳಿಗೆ ವಿದ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿದ್ದಾರೆ’ ಎಂದು ಕುಲಸಚಿವ ಬಿ. ಶರಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಅದೇ ಕುಲಸಚಿವರ ಅಧಿಸೂಚನೆಯ ಆದೇಶದಲ್ಲಿ 15 ಬಿ.ಇಡಿ ಕಾಲೇಜುಗಳ ಪ್ರಾಂಶುಪಾಲರು ಮನವಿ ಮಾಡಿಕೊಂಡಿದ್ದರು ಎಂದಿದೆ.

‘ಕೆಲವು ವಿದ್ಯಾರ್ಥಿಗಳು ಈಗಾಗಲೇ ದಂಡಸಹಿತವಾಗಿ ಪ್ರವೇಶ ಶುಲ್ಕ ಕಟ್ಟಿದ್ದಾರೆ. ಅವರ ನಂತರ ಬಂದವರಿಗೆ ದಂಡ ಇಲ್ಲದೆ ಪ್ರವೇಶ ಕೊಟ್ಟರೆ ಈಗಾಗಲೇ ದಂಡಕಟ್ಟಿದ್ದವರಿಗೆ ಅನ್ಯಾಯ ಆಗುತ್ತದೆ. ಇದು ಗಮನಕ್ಕೆ ಬಂದ ಬಳಿಕ ದಂಡಸಹಿತ ಶುಲ್ಕ ಅನ್ವಯ ಮಾಡಿದ್ದೇವೆ’ ಎನ್ನುತ್ತಾರೆ ಕುಲಸಚಿವರು.

ಏ.13ರ ಪರಿಷ್ಕೃತ ಆದೇಶದಲ್ಲಿ ದಂಡರಹಿತವಾಗಿ ಪ್ರವೇಶಾತಿ ಎಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ‘ಯುಯುಸಿಎಂಎಸ್‌ನ ನೋಡಲ್ ಅಧಿಕಾರಿ ಹೇಳಿದ ಬಳಿಕ ದಂಡಸಹಿತ ಸೇರ್ಪಡೆಯ ಮತ್ತೊಂದು ಆದೇಶವನ್ನು ಏ.15ರಂದು ಹೊರಡಿಸಿದೆ’ ಎಂದು ಹೇಳುತ್ತಾರೆ.

ಆದರೆ, ಬಿ.ಇಡಿ ಕೋರ್ಸ್‌ನ ಯಾವುದೇ ವಿದ್ಯಾರ್ಥಿಯೂ ತಮ್ಮ ಬಳಿಕ ಪ್ರವೇಶಾತಿ ಮಾಡಿಕೊಳ್ಳುವ ವಿದ್ಯಾರ್ಥಿಗೆ ದಂಡ ಹಾಕುವಂತೆಯೂ ಕೇಳಿಲ್ಲ. ಆದರೆ, ಕುಲಸಚಿರು ‘ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು’ ಎಂಬ ಸಮಜಾಯಿಷಿ ಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT