ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಬಿ.ಜಿ.ಪಾಟೀಲಗೆ ಮತ್ತೆ ವಿಜಯ ಮಾಲೆ

ಕ್ಷೇತ್ರದ ಇತಿಹಾಸದಲ್ಲಿ ಮರು ಆಯ್ಕೆಯ ದಾಖಲೆ; 149 ಮತಗಳ ಅಂತರದ ಗೆಲುವು
Last Updated 15 ಡಿಸೆಂಬರ್ 2021, 5:00 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ–ಯಾದಗಿರಿ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್‌ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಅವರು ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿ ವಿಧಾನಪರಿಷತ್ ಪ್ರವೇಶಿಸಿದ್ದಾರೆ.ಆ ಮೂಲಕ ಪುನರಾಯ್ಕೆಯಾದ ಶ್ರೇಯವೂ ಅವರಿಗೆ ಸಲ್ಲಲಿದೆ.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಬೆಳಿಗ್ಗೆ ಆರಂಭಗೊಂಡ ಮತ ಎಣಿಕೆಯು ತೀವ್ರ ತುರುಸಿನಿಂದ ಕೂಡಿತ್ತು. ಯಾರು ಗೆದ್ದರೂ ಕಡಿಮೆ ಅಂತರದಲ್ಲಿ ಗೆಲ್ಲಲಿದ್ದಾರೆ ಎಂಬ ಚುನಾವಣಾಪೂರ್ವ ಲೆಕ್ಕಾಚಾರಗಳು ನಿಜವಾದವು. ಬಿ.ಜಿ. ಪಾಟೀಲ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶಿವಾನಂದ ಪಾಟೀಲ ಮರತೂರ ಅವರಿಗಿಂತ 149 ಮತಗಳ ಅಂತರದಿಂದ ಗೆದ್ದರೂ, ಇದೊಂದು ಪ್ರಯಾಸದ ಗೆಲುವು ಎಂದೇ ವಿಶ್ಲೇಷಿಸಲಾಗುತ್ತಿದೆ.

ಒಬ್ಬ ಸಂಸದ, ಐವರು ಶಾಸಕರು, ಒಬ್ಬ ವಿಧಾನ‍ಪರಿಷತ್ ಸದಸ್ಯ ಹಾಗೂ ಅತಿ ಹೆಚ್ಚಿನ ಸಂಖ್ಯೆಯ ಬಿಜೆಪಿ ಬೆಂಬಲಿತ ಮಹಾನಗರ ಪಾಲಿಕೆ ಸದಸ್ಯರು, ನಗರಸಭೆ ಸದಸ್ಯರು, ಪಂಚಾಯಿತಿ ಸದಸ್ಯರಿದ್ದರೂ ಬಿಜೆಪಿ ಅಭ್ಯರ್ಥಿ ಕಷ್ಟಪಟ್ಟು ಗೆಲುವು ಸಾಧಿಸಬೇಕಾಗಿದ್ದರ ಬಗ್ಗೆ ಪಕ್ಷದ ಮುಖಂಡರು ಆತ್ಮಾವಲೋಕನ ಆರಂಭಿಸಿದ್ದಾರೆ.

ಪಕ್ಷದಲ್ಲಿ ಹಿರಿಯರಾದ ಬಿ.ಜಿ. ಪಾಟೀಲ ಅವರು ಗೆದ್ದರೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನಕ್ಕೆ ತಮ್ಮ ಹಕ್ಕು ಮಂಡಿಸಬಹುದು. ಇದರಿಂದ ತಮಗೆ ಅವಕಾಶ ತಪ್ಪಬಹುದು ಎಂಬ ಕಾರಣದಿಂದ ಉದ್ದೇಶಪೂರ್ವಕವಾಗಿ ಜಿಲ್ಲೆಯ ಕೆಲ ಬಿಜೆಪಿ ಶಾಸಕರು ನಿರೀಕ್ಷೆಗೆ ತಕ್ಕಂತೆ ಪಾಟೀಲ ಅವರ ಪರವಾಗಿ ಕೆಲಸ ಮಾಡಲಿಲ್ಲ ಎಂಬ ಮಾತುಗಳು ಪಕ್ಷದ ವಲಯದಿಂದಲೇ ಕೇಳಿ ಬರುತ್ತಿವೆ.

ಮತ ಎಣಿಕೆ ಸಂದರ್ಭದಲ್ಲಿ ಅಷ್ಟೇನೂ ಖುಷಿಯಾಗಿರದ ಬಿ.ಜಿ. ಪಾಟೀಲ ಅವರು ಬೆಳಿಗ್ಗೆ ಸ್ಟ್ರಾಂಗ್ ರೂಮ್ ತೆರೆಯುವ ಹೊತ್ತಿನಲ್ಲಿ ಬಂದು ಮತ್ತೆ ವಾಪಸಾದರು. ಗೆಲುವಿನ ಸಾಧ್ಯತೆ ನಿಚ್ಚಳವಾದ ಬಳಿಕವಷ್ಟೇ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮತ ಎಣಿಕೆ ಕೇಂದ್ರಕ್ಕೆ ಬಂದರು. ಆ ಬಳಿಕ ಅವರ ಪುತ್ರರಾದ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಡಾ. ಕೈಲಾಸ್ ಪಾಟೀಲ ತಂದೆಗೆ ಅಭಿನಂದಿಸಲು ಬೆಂಬಲಿಗರೊಂದಿಗೆ ಬಂದರು.

ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೋಡ್ಲಿ ಅವರು ಮತ ಎಣಿಕೆ ಮುಗಿಯುವವರಿಗೂ ಮತ ಎಣಿಕೆ ಕೇಂದ್ರದಲ್ಲಿ ಇದ್ದರು.

ಸತತ ಮೇಲುಗೈ: ಮತ ಎಣಿಕೆ ಪ್ರಕ್ರಿಯೆ ಆರಂಭವಾದಾಗಿನಿಂದ ಮುಕ್ತಾಯವಾಗುವವರೆಗೂ ಬಿ.ಜಿ. ಪಾಟೀಲ ಅವರು ಮೇಲುಗೈ ಸಾಧಿಸಿದ್ದರು. ಒಂದು ಹಂತದಲ್ಲಿ 185 ಮತಗಳ ಮುನ್ನಡೆ ಸಾಧಿಸಿದ್ದರಾದರೂ ಗೆಲುವಿನ ಸಮೀಪ ಬಂದಾಗ ಅಂತರ ಕುಸಿದು 149 ಮತಗಳಿಗೆ ಇಳಿಯಿತು.

ಎಣಿಕೆ ಕೇಂದ್ರದಲ್ಲಿ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಸಾಮಾನ್ಯ ವೀಕ್ಷಕ ಡಾ.ಪಿ‌.ಸಿ.ಜಾಫರ್, ಯಾದಗಿರಿ ಜಿಲ್ಲಾಧಿಕಾರಿ ಡಾ. ಆರ್.ರಾಗಪ್ರಿಯಾ, ಪೊಲೀಸ್‌ ಕಮಿಷನರ್‌ ಡಾ.ವೈ.ಎಸ್. ರವಿಕುಮಾರ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರಗೇಶ, ಯಾದಗಿರಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಎಸಿಪಿ ಜೆ.ಎಚ್.ಇನಾಮದಾರ, ವಿವಿಧ ಠಾಣೆಗಳ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಇದ್ದರು.

ಬಿಜೆಪಿ ಮುಖಂಡರು ಗೈರು!
ಗೆಲುವಿನ ಸವಿಯನ್ನು ಅನುಭವಿಸಲು ಬಿ.ಜಿ. ಪಾಟೀಲ ಅವರೊಂದಿಗೆ ಇರಬೇಕಿದ್ದ ಬಿಜೆಪಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಇತ್ತ ಸುಳಿಯಲಿಲ್ಲ. ವಿಧಾನಮಂಡಲದ ಅಧಿವೇಶನಕ್ಕಾಗಿ ಬೆಳಗಾವಿಗೆ ತೆರಳಿದ್ದರು.

ಸಂಸದ ಡಾ. ಉಮೇಶ ಜಾಧವ ಅವರು ದೆಹಲಿಯಲ್ಲಿ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ತೆರಳಿದ್ದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಪುತ್ರ, ಬಿಜೆಪಿ ಯುವ ಮುಖಂಡ ಚಂದು ಪಾಟೀಲ, ಡಾ. ಕೈಲಾಸ್ ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಸೇರಿದಂತೆ ಪಕ್ಷದ ಜಿಲ್ಲಾ ಮುಖಂಡರು ಇದ್ದರು.

‘ಮಾಯ’ವಾದ ಒಂದು ಮತ!
ಕಲಬುರಗಿ–ಯಾದಗಿರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಒಂದು ಮತ ‘ಮಾಯ’ವಾಗಿತ್ತು!

ಡಿ.10ರಂದು ನಡೆದ ಮತದಾನದಲ್ಲಿ 7070 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಮಂಗಳವಾರ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಮತ ಎಣಿಕೆ ಸಂದರ್ಭದಲ್ಲಿ ಎಷ್ಟೇ ಲೆಕ್ಕ ಹಾಕಿದರೂ ಒಂದು ಮತದ ಲೆಕ್ಕ ಸಿಗಲಿಲ್ಲ. ಹೀಗಾಗಿ, ಅಂತಿಮವಾಗಿ 7069 ಮತಗಳನ್ನು ಮಾತ್ರ ಎಣಿಕೆ ಮಾಡಲಾಯಿತು.

ನಂತರ ಪರಿಶೀಲಿಸಿದಾಗ ಮತ ಚಲಾಯಿಸಿದ ಮತದಾರರೊಬ್ಬರು ಮತಪತ್ರವನ್ನು ಮತಪೆಟ್ಟಿಗೆಯಲ್ಲಿ ಹಾಕುವ ಬದಲು ತಮ್ಮೊಂದಿಗೇ ಒಯ್ದಿದ್ದಾರೆ ಎಂಬ ತೀರ್ಮಾನಕ್ಕೆ ಬರಲಾಯಿತು.

ಹಣ ಬಲದ ಗೆಲುವು: ಶಿವಾನಂದ ಪಾಟೀಲ
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಬಿ.ಜಿ. ಪಾಟೀಲ ಅವರು ಕೇವಲ 149 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಷ್ಟು ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದನ್ನು ನೋಡಿದರೆ ಸರ್ಕಾರದ ಯೋಜನೆಗಳು ಮತದಾರರಿಗೆ ಹಿಡಿಸಿಲ್ಲ ಎಂಬ ಭಾವನೆ ಬಂದಂತಾಗಿದೆ ಎಂದು ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಎಂದು ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕೊನೆ ಕ್ಷಣದಲ್ಲಿ ಬಿಜೆಪಿಯವರು ಸಾಕಷ್ಟು ಹಣವನ್ನು ಖರ್ಚು ಮಾಡಿ ಮತದಾರರಿಗೆ ಆಮಿಷ ತೋರಿಸಿದ್ದರಿಂದ ಹಲವು ಮತಗಳು ಬಂದಿವೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿದ ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಮತದಾರರು ಉತ್ತಮ ಬೆಂಬಲ ನೀಡಿದರು. ಹಣ ಬಲ, ಎರಡೂ ಕಡೆ ಸರ್ಕಾರ ಇರುವ ಪ್ರಬಲ ಪಕ್ಷದ ಎದುರೂ ಕಾಂಗ್ರೆಸ್‌ ಪಕ್ಷದ ಶಕ್ತಿ ಏನು ಎಂಬುದು ಈ ಚುನಾವಣೆ ತೋರಿಸಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಸದಸ್ಯರ ಹಿತಕ್ಕಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದರು.

‘ಅಪಪ್ರಚಾರದ ಮಧ್ಯೆಯೇ ಗೆಲುವು’
ಪಂಚಾಯಿತಿಗಳಿಗೆ ಭೇಟಿ ನೀಡಿಲ್ಲ. ಸದಸ್ಯರ ಬೇಡಿಕೆಗಳಿಗೆ ಸ್ಪಂದಿಲ್ಲ ಎಂದು ಕಾಂಗ್ರೆಸ್‌ ಪಕ್ಷದವರು ನನ್ನ ವಿರುದ್ಧ ಅಪಪ್ರಚಾರ ನಡೆಸಿದರೂ ಅಂತಿಮವಾಗಿ ಗೆಲುವು ನನ್ನದಾಗಿದೆ. ಸತತ ಎರಡನೇ ಬಾರಿ ಗೆಲುವು ಸಿಕ್ಕಿದ್ದಕ್ಕೆ ಬಹಳ ಖುಷಿಯಾಗಿದೆ ಎಂದು ವಿಜೇತ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಪ್ರತಿಕ್ರಿಯಿಸಿದರು.

ಗೆಲುವಿನ ಘೋಷಣೆ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪಪ್ರಚಾರದಿಂದಾಗಿ ಗೆಲುವಿನ ಅಂತರ ಕಡಿಮೆಯಾಯಿತು.

ಇದರಿಂದ ನನಗೇನೂ ಬೇಸರವಿಲ್ಲ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಕೇರಳ ಮಾದರಿಯಲ್ಲಿ ಪಂಚಾಯಿತಿಗಳ ಅಭಿವೃದ್ಧಿಗೆ ಅನುದಾನ ಕೊಡಿಸುವುದು, ಅಧ್ಯಕ್ಷರಿಗೆ ಹೆಚ್ಚು ಅಧಿಕಾರ ಸೇರಿದಂತೆ ಹಲವು ಸಂಗತಿಗಳನ್ನು ಪರಿಷತ್‌ನಲ್ಲಿ ಪ್ರಸ್ತಾಪಿಸುತ್ತೇನೆ. ಬಿಜೆಪಿ ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದ್ದಾರೆ’ ಎಂದು ಅವರು ಹೇಳಿದರು.

ತಿರಸ್ಕೃತಗೊಳ್ಳದ ಸಂಸದರ ಮತ
‘ನಾನು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ’ ಎಂದು ಸಂಸದ ಡಾ.ಉಮೇಶ ಜಾಧವ ಅವರು ತಮ್ಮ ಫೇಸ್‌ಬುಕ್‌, ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಗೋಪ್ಯತೆ ನಿಯಮ ಉಲ್ಲಂಘನೆಗಾಗಿ ಅವರಿಗೆ ನೋಟಿಸ್‌ ನೀಡಿದ್ದಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಹೇಳಿದ್ದರು. ಆದರೆ, ಮತ ಎಣಿಕೆ ಸಂದರ್ಭದಲ್ಲಿ ಅವರ ಮತ ತಿರಸ್ಕೃತಗೊಳ್ಳಲಿಲ್ಲ.

‘ಮತಪತ್ರದಲ್ಲಿ ಅವರ ಹೆಸರು, ಗುರುತು ಇಲ್ಲ. ಹೀಗಾಗಿ ಮತ ತಿರಸ್ಕಾರ ಮಾಡಲು ಆಗುವುದಿಲ್ಲ’ ಎಂದು ಅಧಿಕಾರಿಗಳು ಹೇಳಿದರು. ಮತ ಹಾಕಿದ ವಿಚಾರ ವಿವಾದವಾಗುತ್ತಿದ್ದಂತೆ ಸಂಸದರು ತಮ್ಮ ಪೋಸ್ಟ್ ಅಳಿಸಿ ಹಾಕಿದ್ದರು.

ಅಂಕಿ ಅಂಶಗಳು

ಪಡೆದ ಮತಗಳ ವಿವರ

ಬಿ.ಜಿ. ಪಾಟೀಲ; 3452

ಶಿವಾನಂದ ಪಾಟೀಲ; 3303

ಮಲ್ಲಿಕಾರ್ಜುನ ಕೋಡ್ಲಿ; 16

ತಿರಸ್ಕೃತ ಮತಗಳು; 298

ಒಟ್ಟು; 7069

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT