ಕಲಬುರಗಿ: ನಾಡಿನೆಲ್ಲೆಡೆ ದಸರಾ ಹಬ್ಬವನ್ನು ಜನ ಸಡಗರದಿಂದ ಆಚರಿಸಿದರೆ, ಜಿಲ್ಲೆಯ ಭೀಮಾನದಿ ತೀರದ 50ಕ್ಕೂ ಅಧಿಕ ಗ್ರಾಮಗಳಲ್ಲಿ ಉಂಟಾದ ನೆರೆ ಹಾವಳಿಯು ಇಲ್ಲಿನ ಜನರ ಹಬ್ಬದ ಸಂಭ್ರಮವನ್ನು ಕಸಿದಿದೆ. ಹಲವು ಗ್ರಾಮಗಳನ್ನು ಆವರಿಸಿದ ನೀರು ಇನ್ನೂ ತೆರವಾಗದ ಕಾರಣ ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲೇ ದಿನ ದೂಡುತ್ತಿದ್ದಾರೆ.

ಜಿಲ್ಲೆಯ ಜೇವರ್ಗಿ, ಅಫಜಲಪುರ ಹಾಗೂ ಚಿತ್ತಾಪುರ ತಾಲ್ಲೂಕಿನ ನದಿ ತೀರದ ಗ್ರಾಮಗಳ ಜನರು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜೇವರ್ಗಿ ತಾಲ್ಲೂಕಿನ ರದ್ದೇವಾಡಗಿ, ಕೂಡಿ, ಕೋಬಾಳ, ಮಂದರವಾಡ, ಕೋನಾಹಿಪ್ಪರಗಾ, ಕಟ್ಟಿಸಂಗಾವಿ, ಮದರಿ, ಯನಗುಂಟಿ, ನರಿಬೋಳ, ಮಲ್ಲಾ (ಕೆ), ಮಲ್ಲಾ (ಬಿ), ರಾಜವಾಳ, ಹೋತಿನಮಡು, ಹೊನ್ನಾಳ, ರಾಂಪೂರ, ಮಾಹೂರ, ಯಂಕಂಚಿ, ಕೂಡಲಗಿ, ಕಲ್ಲೂರ (ಬಿ), ಬಳ್ಳುಂಡಗಿ, ಹರವಾಳ, ಇಟಗಾ ಗ್ರಾಮಗಳು ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ದಸರಾ ಹಬ್ಬದ ಸಂಭ್ರಮ ಇಲ್ಲವಾಗಿದೆ.

ಹಬ್ಬದ ದಿನ ಪ್ರತಿಯೊಬ್ಬರ ಮನೆಯಲ್ಲಿ ಸಿಹಿಯೂಟ ಸಾಮಾನ್ಯ. ಆದರೆ, ಸಂತ್ರಸ್ತರಿಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಕನಿಷ್ಠ ಕುಡಿಯಲು ಶುದ್ಧ ನೀರು ಸಿಗದೆ, ಪ್ರವಾಹದ ಗಲೀಜು ನೀರನ್ನೇ ಕುಡಿಯುವಂತಾಗಿದೆ. ಹಬ್ಬದ ಸಂಭ್ರಮದಲ್ಲಿ ಇರಬೇಕಾದ ಮಹಿಳೆಯರು ಪ್ರವಾಹದಿಂದ ಕೊಳಚೆಯಂತೆ ಆಗಿರುವ ಮನೆಯ ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನ ಮಂದರವಾಡ ಗ್ರಾಮಕ್ಕೆ ತೆರಳಲು ಇನ್ನೂ ಸಾಧ್ಯವಾಗದೇ ಜನ ಪರದಾಡುವಂತಾಗಿದೆ. ಪ್ರವಾಹದ ನೀರು ಗ್ರಾಮ ಸುತ್ತುವರಿದು ರಸ್ತೆ ಕಾಣದಂತಾಗಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳ ಸಂತ್ರಸ್ತರು ಇಲ್ಲಿಯವರೆಗೂ ಗಲೀಜು ನೀರೇ ಕುಡಿಯುತ್ತಿದ್ದು, ಸಾಂಕ್ರಾಮಿಕ ರೋಗಗಳು ತಗಲುವ ಭೀತಿಯಲ್ಲಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಬುಧವಾರವಷ್ಟೇ ಪ್ರವಾಹದ ನೀರು ಇಳಿದಿದ್ದರಿಂದ ಜನರು ತಮ್ಮ ಮನೆಗಳಿಗೆ ತೆರಳಿ ಸ್ವಚ್ಛತಾ ಕಾರ್ಯ ನಡೆಸಿ ಹಬ್ಬಕ್ಕೆ ಅಣಿಯಾಗುತ್ತಿದ್ದರು. ಮಹಾರಾಷ್ಟ್ರದ ಜಲಾಶಯಗಳಿಂದ ಮತ್ತೆ ಭೀಮಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಗುರುವಾರ ಮಧ್ಯಾಹ್ನದ ಬಳಿಕ ಪ್ರವಾಹದ ನೀರು ಮತ್ತೆ ಮನೆಗಳಿಗೆ ಹೋಗುತ್ತಿದ್ದು, ಸಂತ್ರಸ್ತರು ಕಾಳಜಿ ಕೇಂದ್ರಗಳಿಗೆ ವಾಪಸಾದರು.

‘ಮಕ್ಕಳಿಗೆ ಹೊಸಬಟ್ಟೆ ತೊಡಿಸಿ ಬನ್ನಿ ಮುಡಿದು ಪರಸ್ಪರ ಶುಭಾಶಯ ಕೋರುತ್ತಾ ಸಂಭ್ರಮಿಸಬೇಕಿದ್ದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಹಿಂದೆಂದೂ ಕಂಡು ಕೇಳರಿಯದ ಭೀಕರ ಪ್ರವಾಹ ಉಂಟಾದ ಪರಿಣಾಮ ಸ್ವಚ್ಛತೆ ಸವಾಲಾಗಿದೆ. ಮನೆಗಳಲ್ಲಿ ದುರ್ಗಂಧ ಆವರಿಸಿದ್ದು ಹಾವು ಚೇಳುಗಳೊಂದಿಗೆ ಬದುಕು ದೂಡಬೇಕಾದ ಸ್ಥಿತಿ ಉಂಟಾಗಿದೆ. ಇದರ ಮಧ್ಯೆ ಹಬ್ಬದ ಮಾತೆಲ್ಲಿ’ ಎನ್ನುತ್ತಾರೆ ಕಡಬೂರು ಗ್ರಾಮದ ಶರಣಮ್ಮ, ರಾಜಪ್ಪ ಹೇರೂರು, ಲಕ್ಷ್ಮೀಬಾಯಿ ತಳವಾರ, ಹಾಜಿಸಾಬ್, ಸಿದ್ದಮ್ಮ, ಈಶ್ವರಿ.

ಅಫಜಲಪುರ ತಾಲ್ಲೂಕಿನ ಗಾಣಗಾಪುರ ಸುತ್ತಲಿನ ಪ್ರವಾಹ ಸಂತ್ರಸ್ತರಿಗೆ ಜಿಲ್ಲಾಡಳಿತವು ದಾನಿಗಳ ನೆರವಿನಿಂದ ಸಜ್ಜಕ, ತುಪ್ಪದ ಊಟ ನೀಡಿತು.

ಯಾದಗಿರಿ: ಕಾಳಜಿ ಕೇಂದ್ರ ಸ್ಥಗಿತ

ಯಾದಗಿರಿ: ಭೀಮಾ ನದಿಯ ಪ್ರವಾಹ ಸಂಪೂರ್ಣವಾಗಿ ಇಳಿಮುಖವಾಗಿದೆ. ಸಂತ್ರಸ್ತರಿಗಾಗಿ ಜಿಲ್ಲಾಡಳಿತದಿಂದ ತೆರೆಯಲಾಗಿದ್ದ ಬಹುತೇಕ ಕಾಳಜಿ ಕೇಂದ್ರಗಳನ್ನು ಮುಚ್ಚಲಾಗಿದೆ. ಏಳು ಕಾಳಜಿ ಕೇಂದ್ರಗಳಲ್ಲಿನ 495 ಕುಟುಂಬಗಳ 1554 ಜನರು ತಮ್ಮ ಮನೆಗಳಿಗೆ ಮರಳಿದ್ದಾರೆ. ಬುಧವಾರವೇ ಮನೆಗಳತ್ತ ಬಂದ ನೆರೆ ಸಂತ್ರಸ್ತರು ಪ್ರವಾಹದಿಂದ ಗಲೀಜಾಗಿದ್ದ ಮನೆ ಆವರಣ ದೇವಸ್ಥಾನಗಳನ್ನು ಸ್ವಚ್ಛ ಮಾಡಿಕೊಂಡರು. ಪ್ರವಾಹದಲ್ಲಿ ಮುಳುಗಿದ್ದ ಶಹಾಪುರ ತಾಲ್ಲೂಕಿನ ಹುರಸಗುಂಡಿಯ ಗ್ರಾಮಸ್ಥರು ಗುರುವಾರ ವಿಜಯದಶಮಿ ಅಂಗವಾಗಿ ಮಹಾದೇವಸ್ವಾಮಿ ಪಲ್ಲಕ್ಕಿ ಉತ್ಸವವನ್ನು ನೆರವೇರಿಸಿದರು. ‘ಹೊಲ–ಗದ್ದೆಗಳಲ್ಲಿ ಪ್ರವಾಹದ ನೀರು ಸತ್ತ ಮೀನುಗಳ ದುರ್ವಾಸನೆ ಬೀರುತ್ತಿದೆ. ಹಾವು ಚೇಳುಗಳು ಓಡಾಟವೂ ಹೆಚ್ಚಾಗಿದೆ. ಗ್ರಾಮವನ್ನು ನಾವೇ ಸ್ವಚ್ಛ ಮಾಡಿಕೊಂಡಿದ್ದು ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಿಲ್ಲ’ ಎಂದು ಹುರಸಗುಂಡಿ ನಿವಾಸಿ ಮೌನೇಶ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.