ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ಸ್ಥಳೀಯ ಅಭಿವೃದ್ಧಿ ಪ್ರಶ್ನೆಗೆ ಬಿಜೆಪಿಯ ಮುಖಂಡ ವಿಷಯಾಂತರ

Published 12 ಏಪ್ರಿಲ್ 2024, 10:15 IST
Last Updated 12 ಏಪ್ರಿಲ್ 2024, 10:15 IST
ಅಕ್ಷರ ಗಾತ್ರ

ಕಲಬುರಗಿ: ಲೋಕಸಭಾ ಚುನಾವಣಾ ಪ್ರಚಾರದ ಕುರಿತು ಮಾಹಿತಿ ಹಂಚಿಕೊಳ್ಳಲು ಶುಕ್ರವಾರ ನಗರದಲ್ಲಿ ಬಿಜೆಪಿ ಮುಖಂಡರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಂದ ಎದುರಾದ ಕಲಬುರಗಿಗೆ ಕೇಂದ್ರ ಸರ್ಕಾರ ನೀಡಿದ ಕೊಡುಗೆಗಳ ಪ್ರಶ್ನೆಗಳಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರವಾಲ್ ಅವರು ಉತ್ತರ ನೀಡದೆ ವಿಚಲಿತರಾಗಿ ವಿಷಯಾಂತರ ಮಾಡಿ, 10 ವರ್ಷಗಳ ಹಿಂದಿನ ಯುಪಿಎ ಸರ್ಕಾರದತ್ತ ಬೆರಳು ತೋರಿಸಿದರು.

‘ಸೋಲುವ ಭಯದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಪುತ್ರ ಯತೀಂದ್ರ, ಸಚಿವರು ಯಾರೂ ಚುನಾವಣೆಗೆ ಸ್ಪರ್ಧಿಸಿಲ್ಲ’ ಎಂದರು.

ಅಗರವಾಲ್ ಮಾತು ಮುಗಿಸಿದಂತೆ ಪತ್ರಕರ್ತರು, ‘ಘೋಷಣೆಯಾಗಿದ್ದ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಏನಾಯಿತು? ಕೋಲಿ ಸಮುದಾಯದ ಎಸ್‌ಟಿ ಭರವಸೆ ಎಲ್ಲಿಗೆ ಬಂತು? ಜಿಲ್ಲೆಗೆ ಬಿಜೆಪಿಯ ಕೊಡುಗೆ ಏನು? ಜನರು ಏಕೆ ನಿಮಗೆ ಮತ ಹಾಕಬೇಕು ಎಂದು ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಿದ್ದಾರೆ’ ಎಂದು ಕೇಳಿದರು.

ಸುಧಾರಿಸಿಕೊಂಡ ಅಗರವಾಲ್, ‘ನಮ್ಮ ಬಗ್ಗೆ ಪ್ರಶ್ನೆ ಎತ್ತುವವರಿಗೆ ನಾಚಿಕೆಯಾಗಬೇಕು. ಕಲಬುರಗಿಯ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಕಲಬುರಗಿಯಿಂದ ರಾಷ್ಟ್ರ ಮಟ್ಟಕ್ಕೆ ಬೆಳೆದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಮಹಾನ್ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಏನು ಕೊಟ್ಟಿದ್ದಾರಾ? ಯುಪಿಎ ಸರ್ಕಾರದ 10 ವರ್ಷಗಳಲ್ಲಿ ರೈಲ್ವೆ ಅಭಿವೃದ್ಧಿಗಾಗಿ ಮಾಡಿದ್ದ ಖರ್ಚಿಗಿಂತ ಅತಿಹೆಚ್ಚು ಹಣ ಮತ್ತು ಕೆಲಸವನ್ನು ಬಿಜೆಪಿ ಮಾಡಿದೆ. ರಾಜ್ಯಕ್ಕೂ ಹೆಚ್ಚಿನ ತೆರಿಗೆ ಪಾಲು ನೀಡಿದೆ’ ಎಂದು ವಿಷಯಾಂತರ ಮಾಡಿದರು.

ರಾಷ್ಟ್ರದ ಮಟ್ಟದ್ದು ಬಿಟ್ಟು ಜಿಲ್ಲೆಯ ಕೊಡುಗೆ ಬಗ್ಗೆ ಮಾತನಾಡಿ ಎಂದಾಗ, ‘ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರ ಆರಂಭಿಸುವ ಪ್ರಕ್ರಿಯೆ ನಿಂತಿಲ್ಲ. ಕೋಲಿ ಸಮುದಾಯದ ಎಸ್‌ಟಿ ಸಂರಕ್ಷಣೆಗಾಗಿ ಈಗಾಗಲೇ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರ ಜೊತೆ ಮಾತುಕತೆ ನಡೆಸಿ, ಮತ್ತೆ ವರದಿ ಸಲ್ಲಿಸಲಾಗಿದೆ’ ಎಂದು ಷ್ಪಷ್ಟನೆ ನೀಡಿದರು.

‘ಜೂನ್‌ನಲ್ಲೇ ಬರ ವರದಿ ಸಲ್ಲಿಸಬೇಕಿತ್ತು’: ‘ಮುಂಗಾರು ಮಳೆಯು ಜೂನ್‌ನಲ್ಲಿ ಅರ್ಧದಷ್ಟು ಕೈಕೊಟ್ಟು, ಜುಲೈ ತಿಂಗಳಲ್ಲಿಯೂ ಬರಲಿಲ್ಲ. ಹೀಗಾಗಿ, ರಾಜ್ಯ ಸರ್ಕಾರವು ಜೂನ್‌ ತಿಂಗಳಲ್ಲೇ ಬರ ಪರಿಹಾರದ ವರದಿ ಸಲ್ಲಿಸಬೇಕಿತ್ತು’ ಎಂದು ಅಗರವಾಲ್ ಹೇಳಿದರು.

‘ರಾಜ್ಯ ಸರ್ಕಾರವು ಬರಗಾಲದ ಅಂಕಿ ಅಂಶಗಳ ವಿವರವಾದ ವರದಿ ನೀಡಲಿಲ್ಲ. ಈಗ, ಬರಗಾಲ ಮತ್ತು ರೈತರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರವು ರೈತರಿಗೆ ನೀಡುತ್ತಿದ್ದ ₹4,000 ಕಿಸಾನ್ ಸಮ್ಮಾನ ನಿಧಿ ನಿಲ್ಲಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಸಂಸದ ಡಾ.ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಬಿ.ಜಿ ಪಾಟೀಲ, ಶಾಸಕ ಬಸವರಾಜ ಮತ್ತಿಮಡು, ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ರಘುನಾಥ ಮಲ್ಕಾಪುರೆ, ನಿತಿನ್ ಗುತ್ತೇದಾರ, ಗುರುನಾಥ್ ಜಾಂತಿಕರ, ಶೋಭಾ ಭಾಣಿ, ಶಶಿಕಲಾ ಟೆಂಗಳಿ, ವೆಂಕಟ ಪ್ರಸಾದ್, ಸಂತೋಷ್ ಹಾದಿಮನಿ, ಬಾಬುರಾವ್ ಹಾಗರಗುಂಡಗಿ, ನಾಗರಾಜ್ ಮಹಾಗಾಂವಕರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT