ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಯಕರ್ತರು ಜನಸೇವೆಯಲ್ಲಿ ತೊಡಗಿಸಿಕೊಳ್ಳಿ’

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷೆ ಡಿ.ಕೆ. ಅರುಣಾ ಭಾಗಿ
Last Updated 7 ಜುಲೈ 2021, 8:56 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೋವಿಡ್ ಸಂಕಟದ ಸಂದರ್ಭದಲ್ಲಿಯೂ ಬಿಜೆಪಿ ಕಾರ್ಯಕರ್ತರು ಸಾಕಷ್ಟು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ದೇಶದಾದ್ಯಂತ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು. ಆ ಸೇವಾ ಮನೋಭಾವವನ್ನು ಕಾರ್ಯಕರ್ತರು ಮುಂದುವರೆಸಿಕೊಂಡು ಹೋಗಬೇಕು’ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷೆ, ರಾಜ್ಯ ಸಹ ಪ್ರಭಾರಿ ಡಿ.ಕೆ. ಅರುಣಾ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಮೊದಲ ಗ್ರಾಮಾಂತರ ಜಿಲ್ಲಾ ಘಟಕದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ಪಕ್ಷದ ಅಧ್ಯಕ್ಷರ ಸೂಚನೆಯಂತೆ ಸೇವಾ ಸಂಘಟನೆ ಅಭಿಯಾನದ ಮೂಲಕ ಲಕ್ಷಾಂತರ ಕಾರ್ಯಕರ್ತರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಕಡು ಬಡವರಿಗೆ ದಿನಸಿ ಕಿಟ್ ನೀಡುವುದು, ಆಸ್ಪತ್ರೆಗಳಲ್ಲಿ ಬೆಡ್‌ ಹೊಂದಿಸಿಕೊಡುವುದು, ಅಗತ್ಯವಿರುವ ಔಷಧಿ ಚುಚ್ಚುಮದ್ದುಗಳನ್ನು ಒದಗಿಸಲು ಶ್ರಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದು ಹೇಳಿದರು.

‘ಜನಸಂಘದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದು ದೇಶದಲ್ಲಿ ಎರಡು ಧ್ವಜ, ಎರಡು ಸಂವಿಧಾನ, ಎರಡು ಆಡಳಿತ ಇರಬಾರದು ಎಂದು ಬಯಸಿದ್ದರು. ಅವರ ಆಶಯ 370 ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರು ನೆರವೇರಿಸಿದ್ದಾರೆ. ಮುಖರ್ಜಿ ಅವರ ಜನ್ಮದಿನವಾದ ಜುಲೈ 6ರಂದು ದೇಶದಾದ್ಯಂತ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ಬರೀ ಸಸಿ ನೆಡುವುದಷ್ಟೇ ಅಲ್ಲದೇ 10ರಿಂದ 20 ಸಸಿಗಳನ್ನು ದತ್ತು ತೆಗೆದುಕೊಂಡು ಅವು ಸರಿಯಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸೃಷ್ಟಿಸಿದ ಸಾಕಷ್ಟು ಆರ್ಥಿಕ ಹಿಂಜರಿತದ ಮಧ್ಯೆಯೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ದೀಪಾವಳಿಯವರೆಗೂ 80 ಕೋಟಿ ಬಡವರಿಗೆ ಉಚಿತ ಪಡಿತರ ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದರು.

ಪಕ್ಷದ ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ‘ಬಿಜೆಪಿಯು ಎಲ್ಲ ಜನತೆಗೂ ಉಚಿತವಾಗಿ ಲಸಿಕೆ ನೀಡುವ ಮೂಲಕ ಕೊರೊನಾ ಮುಕ್ತ ಮಾಡುವ ಸಂಕಲ್ಪಕ್ಕೆ ಬದ್ಧವಾಗಿದೆ. ಕಾಂಗ್ರೆಸ್‌ ಮೊದಲಿನಿಂದಲೂ ಲಸಿಕೆಯ ಬಗ್ಗೆ ಜನರಿಗೆ ಹೆದರಿಸುತ್ತಲೇ ಇದೆ. ಇದೀಗ ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ’ ಎಂದು ಹೇಳಿದರು.
ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ. ಅವಿನಾಶ ಜಾಧವ, ವಿಧಾನಪರಿಷತ್ ಸದಸ್ಯ ಸುನೀಲ ವಲ್ಯಾಪುರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ದ್ವಿದಳ ಧಾನ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಲಿಂಗರೆಡ್ಡಿ ಭಾಸರೆಡ್ಡಿ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಶಿವ ಅಷ್ಠಗಿ ಹಾಗೂ ಪಕ್ಷದ ಜಿಲ್ಲಾ ಮುಖಂಡರು ಇದ್ದರು.

‘ತೈಲ ಬೆಲೆ ಹೆಚ್ಚಳಕ್ಕೆ ಕಾಂಗ್ರೆಸ್‌ ನೀತಿ ಕಾರಣ’

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಹೆಚ್ಚಾಗಲು ಕಾಂಗ್ರೆಸ್‌ನ ನೀತಿಗಳೇ ಕಾರಣ. ಬೆಲೆಯನ್ನು ಇಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿಲ್ಲ. ಆಯಾ ರಾಜ್ಯ ಸರ್ಕಾರಗಳು ತಾವು ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿರುವ ಸುಂಕವನ್ನು ಕಡಿಮೆ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಡಿ.ಕೆ. ಅರುಣಾ ಒತ್ತಾಯಿಸಿದರು.

ತಾಲ್ಲೂಕಿನ ಅವರಾದ (ಬಿ) ಗ್ರಾಮದ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT