ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಬಿಜೆಪಿ ಜಯಭೇರಿ; ಕಾಂಗ್ರೆಸ್ ಮೂಲೆಗುಂಪು: ನಳಿನ್‌ ಕುಮಾರ್ ಕಟೀಲ್

ಪಾಲಿಕೆಯ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ನಳಿನ್‌ ಕುಮಾರ್ ಕಟೀಲ್
Last Updated 9 ಸೆಪ್ಟೆಂಬರ್ 2021, 15:26 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆ, ವಾಡಿ, ದೊಡ್ಡಬಳ್ಳಾಪುರ ಸೇರಿದಂತೆ ಹಲವು ಕಡೆ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು, ಕಾಂಗ್ರೆಸ್‌ ಮೂಲೆಗುಂಪಾಗಿದೆ. ಈ ಬಾರಿಯ ಚುನಾವಣೆಯು ಕಾರ್ಯಕರ್ತರ ಚುನಾವಣೆಯಾಗಿತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಅಭಿಪ್ರಾಯಪಟ್ಟರು.

ನೂತನವಾಗಿ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ಬಿಜೆಪಿ ಸದಸ್ಯರಿಗೆ ಪಕ್ಷದ ವತಿಯಿಂದ ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದಶಕಗಳಿಂದ ಪ್ರಭಾವ ಹೊಂದಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಜನರು ಸೋಲಿಸಿದ್ದರು. ರಾಜ್ಯಸಭೆ ಸದಸ್ಯರಾದ ಬಳಿಕ ಅವರು ಒಮ್ಮೆಯೂ ಕಲಬುರ್ಗಿಗೆ ಭೇಟಿ ನೀಡಿಲ್ಲ. ಈ ಬಾರಿಯೂ ಬರುವುದು ಬೇಡ ಎಂಬ ಉದ್ದೇಶದಿಂದ ಜನರೇ ಕಾಂಗ್ರೆಸ್‌ಗೆ ಬಹುಮತ ನೀಡಿಲ್ಲ ಎಂದು ವ್ಯಂಗ್ಯವಾಡಿದರು.

ಪಾಲಿಕೆಗೆ ಚುನಾವಣೆ ಘೋಷಣೆಯಾದ ತಕ್ಷಣ ನಗರಕ್ಕೆ ಬಂದಿದ್ದೆ. ಈ ಬಾರಿ ನಾಯಕರಿಗಿಂತ ಕಾರ್ಯಕರ್ತರೇ ಚುನಾವಣೆ ನಡೆಸಲಿ ಎಂಬುದು ನಮ್ಮ ಅಭಿಪ್ರಾಯವಾಗಿತ್ತು. ಬಿಜೆಪಿ ಉಪಾಧ್ಯಕ್ಷ ನಿರ್ಮಲಕುಮಾರ್ ಸುರಾನಾ, ಸಂಘಟನಾ ಕಾರ್ಯದರ್ಶಿ ಅರುಣಕುಮಾರ್‌ ಅವರ ಮಾರ್ಗದರ್ಶನದಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಿದ್ದರ ಫಲ ಇಂದು ನಮ್ಮ ಮುಂದಿದೆ ಎಂದರು. ‌

ಸಂಸದ ಡಾ. ಉಮೇಶ ಜಾಧವ ಮಾತನಾಡಿ, ‘ಈ ಬಾರಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಲು ಹಲವು ಜನ ಆಕಾಂಕ್ಷಿಗಳು ಇದ್ದರು. ಟಿಕೆಟ್ ಘೋಷಣೆಯಾದ ಬಳಿಕ ಟಿಕೆಟ್ ವಂಚಿತರಾದವರು ಮುನಿಸಿಕೊಂಡು ಮನೆಯಲ್ಲೇ ಕುಳಿತಿದ್ದರು. ನಾವು ಅವರ ಮನೆಗೆ ತೆರಳಿ ಮನವಿ ಮಾಡಿಕೊಂಡ ಬಳಿಕ ಅವರೆಲ್ಲ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡರು. ಅವರ ಪಾದಕಮಲಗಳಿಗೆ ನಮಸ್ಕರಿಸುತ್ತೇನೆ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ್ ಸುರಾನಾ ಮಾತನಾಡಿ, ‘ಚುನಾವಣೆಯ ಆರಂಭದಲ್ಲೇ ಪಾಲಿಕೆಯಲ್ಲಿ 23 ಸ್ಥಾನಗಳನ್ನು ಗೆಲ್ಲುವುದಾಗಿ ಕೆಲ ಮುಖಂಡರು ಹೇಳಿಕೊಂಡಿದ್ದರು. ಅದು ಹಾಗೆಯೇ ಆಯಿತು. ಪಾಲಿಕೆ ಬಳಿಕ ಮುಂದೆ ಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಸೆಮಿ ಫೈನಲ್ ಆಗಿದ್ದು, ಅಲ್ಲಿಯೂ ನಮ್ಮ ಕಾರ್ಯಕರ್ತರ ಶ್ರಮದಿಂದ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಲಿಕೆಯಲ್ಲಿ ಕಾಂಗ್ರೆಸ್‌ನಿಂದ ಬಹುಸಂಖ್ಯಾತರು ಪ್ರವೇಶಿಸಿಲ್ಲ. ಆ ಪಕ್ಷದ ತುಷ್ಟೀಕರಣ ನೀತಿ, ಓಲೈಕೆ ರಾಜಕಾರಣದಿಂದಾಗಿ 19 ವಾರ್ಡ್‌ಳಲ್ಲಿ ಅಲ್ಪಸಂಖ್ಯಾತರ ಗೆದ್ದಿದ್ದಾರೆ. ಆದರೆ, ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಜನರು ನಮಗೆ ಬೆಂಬಲಿಸಿದ್ದಾರೆ ಎಂದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ. ಪಾಟೀಲ, ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಪಾಲಿಕೆಯ ನೂತನ ಬಿಜೆಪಿ ಸದಸ್ಯರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT