ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ–ಲಿಂಗಾಯತರನ್ನು ಮತ ಬ್ಯಾಂಕ್‌ನಂತೆ ಬಿಜೆಪಿ ಬಳಕೆ: ಶರಣ ಪ್ರಕಾಶ ಪಾಟೀಲ

Last Updated 27 ಜುಲೈ 2021, 9:42 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯದ ಪ್ರಬಲ ವೀರಶೈವ– ಲಿಂಗಾಯತ ಸಮುದಾಯದವರನ್ನು ಬಿಜೆಪಿಯು ಕೇವಲ ಮತ ಬ್ಯಾಂಕ್‌ನಂತೆ ಬಳಸಿಕೊಂಡಿದೆ’ ಎಂದು ಮಾಜಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಆರೋಪಿಸಿದರು.

ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದಿ.ವೀರೇಂದ್ರ ಪಾಟೀಲ ಮತ್ತು ಎನ್‌. ಧರ್ಮಸಿಂಗ್ ಪುತ್ಥಳಿ ಸ್ಥಾಪಿಸುವಂತೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಪತ್ರ ಸಲ್ಲಿಸಿ, ಬಳಿಕ ಮಾಧ್ಯಮಗಳ ಜತೆ ಅವರು ಮಾತನಾಡಿದರು.

‘ಬಿಜೆಪಿಯ ತತ್ವ ಮತ್ತು ಸಿದ್ಧಾಂತಗಳು ಬಸವಣ್ಣನ ತತ್ವಗಳಿಗೆ ವಿರುದ್ಧವಾಗಿವೆ. ಸಹಜವಾಗಿಯೇ ಹೈಕಮಾಂಡ್‌ನ ವರಿಷ್ಠರು ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಪಕ್ಷ ಕಟ್ಟಿ ಬೆಳೆಸಿದ್ದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಷ್ಮಾ ಸ್ವರಾಜ್ ಅವರನ್ನು ಈ ಹಿಂದೆ ಪಕ್ಷದಿಂದ ದೂರವಿಟ್ಟು ಕಡೆಗಣಿಸಿದ್ದರು. ಈಗ ಯಡಿಯೂರಪ್ಪ ಅವರ ಸರದಿ. ಅವರನ್ನು ಅಪಮಾನ ಮಾಡಿ ಮುಖ್ಯಮಂತ್ರಿ ಪಟ್ಟ ಕಿತ್ತುಕೊಳ್ಳಲಾಗಿದೆ’ ಎಂದು ದೂರಿದರು.

‘ಬಿಜೆಪಿಯಲ್ಲಿ ಆಂತರಿಕ ವ್ಯವಹಾರವಿದ್ದು, ಅನೈತಿಕ ಮಾರ್ಗದಿಂದ ರಾಜ್ಯದ ಸರ್ಕಾರ ರಚಿಸಿತ್ತು. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಶಾಸಕರನ್ನು ಯಡಿಯೂರಪ್ಪ ಮೂಲಕ ಹಣಕೊಟ್ಟು ಖರೀದಿ ಮಾಡಿ ಅಧಿಕಾರಕ್ಕೆ ಬಂದರು. ಈಗ ಯಡಿಯೂರಪ್ಪ ಅವರ ಅವಶ್ಯಕತೆ ಮುಗಿದಿದ್ದು, ಅಧಿಕಾರದಿಂದ ಅವರನ್ನು ದೂರ ಇರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನತೆ ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

ಕಲಬುರ್ಗಿ ಜಿಲ್ಲೆಯವರೇ ಆದ ದಿ.ವೀರೇಂದ್ರ ಪಾಟೀಲ ಮತ್ತು ಎನ್‌. ಧರ್ಮಸಿಂಗ್ ಅವರು ತಳ ಮಟ್ಟದಿಂದ ಬೆಳೆದು ಮುಖ್ಯಮಂತ್ರಿಯಾದರು. ತಮ್ಮ ಅಧಿಕಾರದ ಅವಧಿಯಲ್ಲಿ ಈ ಭಾಗಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಹೀಗಾಗಿ, ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಇಬ್ಬರ ಪುತ್ಥಳಿ ಸ್ಥಾಪಿಸಬೇಕು. ಈ ಹಿಂದೆಯೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ‘ ಎಂದು ತಿಳಿಸಿದರು.

ಮನವಿ ಸಲ್ಲಿಕೆಯ ವೇಳೆ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಶಾಸಕರಾದ ಎಂ.ವೈ. ಪಾಟೀಲ, ಖನೀಜ್ ಫಾತಿಮಾ, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣಪ್ಪ ಕಮಕನೂರು, ದಕ್ಷಿಣ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನೀಲಕಂಠರಾವ ಮೂಲಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT