ಕಲಬುರಗಿ: ‘ಸಾಹಿತ್ಯ ಲೋಕದಲ್ಲಿ ನಮ್ಮನ್ನು ನಾವು ಪ್ರತಿನಿಧಿಸಿಕೊಳ್ಳದ ಹೊರತು ಮಹಿಳೆಯರಿಗೆ ಸಮಾನತೆ ಬರುವುದಿಲ್ಲ’ ಎಂದು ರಂಗಕರ್ಮಿ ಜಯಲಕ್ಷ್ಮಿ ಪಾಟೀಲ ಹೇಳಿದರು.
ಇಲ್ಲಿನ ಕನ್ನಡ ಭವನದಲ್ಲಿ ಶನಿವಾರ ಬಹುರೂಪಿ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಸಂಧ್ಯಾ ಹೊನಗುಂಟಿಕರ್ ಅವರ ‘ಹೆಸರು ಕಳೆದುಕೊಂಡ ಊರು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಯಾವುದೇ ಸಾಹಿತ್ಯ ಕಾರ್ಯಕ್ರಮ ನಡೆದರೂ ಎಲ್ಲರೂ ಪುರುಷರು ಬರೆದ ಕೃತಿಗಳು, ಅವರ ಹೆಸರುಗಳನ್ನೇ ಪ್ರಸ್ತಾಪ ಮಾಡುತ್ತಾರೆ. ಮಹಿಳಾ ಸಾಹಿತಿಗಳ ಹೆಸರು ಪ್ರಸ್ತಾಪ ಮಾಡುವುದಿಲ್ಲ. ಎಷ್ಟು ಅಂತ ನಾವೂ ಬಾಯಿ ಬಿಟ್ಟು ಕೇಳಬೇಕು. ಮುಂದೆ ಹೀಗೆ ಆಗಬಾರದು. ಸದಾ ನೆನಪಿನಲ್ಲಿ ಉಳಿಯುವಂತಹ ವೈದೇಹಿ, ವೀಣಾ ಶಾಂತೇಶ್ವರ, ಎಂ.ಕೆ. ಇಂದಿರಾ ಅವರಂತಹ ಮಹಿಳಾ ಧ್ರುವತಾರೆಗಳು ಇದ್ದಾರೆ’ ಎಂದರು.
‘ಮಹಿಳೆಯರನ್ನು 2ನೇ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತದೆ. ಮಹಿಳೆಯರ ಸಾಹಿತ್ಯ 4ನೇ ದರ್ಜೆಗೆ ಹೋಗುತ್ತೋ ಮತ್ತೊಂದಕ್ಕೆ ಹೋಗುತ್ತೋ ಗೊತ್ತಿಲ್ಲ. ನಮಗೆ ಎಲ್ಲ ಸಾಹಿತಿಗಳ ಬಗ್ಗೆ ಅಪಾರ ಗೌರವ ಇದೆ. ಆದರೆ, ಪುರುಷ ವರ್ಸಸ್ ಮಹಿಳಾ ಸಾಹಿತ್ಯ ಆಗಬಾರದು ಎಂಬುವುದು ನನ್ನ ಅಭಿಪ್ರಾಯ’ ಎಂದು ಹೇಳಿದರು.
‘ಇಲ್ಲಿನವರ ಬರವಣೆಗೆ ಬಹಳ ಅದ್ಭುತವಾಗಿದೆ. ಬೆಂಗಳೂರಿನಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಕಲಬುರಗಿ ಕವಿಗಳ ಕಾವ್ಯ ವಾಚನ, ಗಾಯನ ಮಾಡಿದ್ದು ಎಲ್ಲಿಲ್ಲದ ತೃಪ್ತಿ ತಂದು ಕೊಟ್ಟಿತ್ತು. ಹೀಗಾಗಿ, ಉತ್ತರ ಕರ್ನಾಟಕ ಭಾಗದವರು ಮತ್ತೆ ಮತ್ತೆ ಬರೆಯಬೇಕು. ಕೇಂದ್ರದ ಮಟ್ಟಕ್ಕೆ ತಲುಪಿಸುವ ಪ್ರಯತ್ನದಲ್ಲಿ ಬರೆಯಬೇಕು. ನಿಮ್ಮ ಬರಹಗಳಿಗೆ ಜಿ.ಎನ್. ಮೋಹನ್ ಅಂಥವರು ಬೆಂಬಲ ಕೊಡುತ್ತಾರೆ’ ಎಂದರು.
ಬಹುರೂಪಿ ಸಂಸ್ಥಾಪಕ ಜಿ.ಎನ್. ಮೋಹನ್ ಮಾತನಾಡಿ, ‘ಕೆಲವರು ಪುಸ್ತಕ ಎಂದರೆ ಬೆಳ್ಳುಳ್ಳಿ ಕಬಾಬ್ ಎಂದುಕೊಂಡಿದ್ದಾರೆ. ಈ ಕಡೆಯಿಂದ ಸುಮ್ಮನೆ ಸ್ಕ್ರಿಪ್ಟ್ ತೆಗೆದು ಬಿಸಾಕಿದರೆ ಆ ಕಡೆ ಮುದ್ರಣ ಆಗುತ್ತೆ ಎಂದು ತಿಳಿದಿದ್ದಾರೆ. ಗುಣಮಟ್ಟದ ಪುಸ್ತಕ ಹೊರ ಬರಬೇಕಾದರೆ ನಾನಾ ರೀತಿಯ ಹಂತದಲ್ಲಿ ಪರೀಕ್ಷೆಗೆ ಒಳಪಡಬೇಕು. ತಿದ್ದುಪಡಿಯಾಗಿ ಸಾಹಿತ್ಯ ರಂಗದಲ್ಲಿ ನಾನಾ ಹಂತಗಳಲ್ಲಿ ಸ್ಪರ್ಶವಾಗಬೇಕು. ಆ ಸ್ಪರ್ಶ ಬಹುರೂಪಿಯಲ್ಲಿ ಸಿಗುತ್ತದೆ’ ಎಂದರು.
ಕೃತಿ ಕುರಿತು ಮಾತನಾಡಿದ ಪತ್ರಕರ್ತೆ, ಮಾಧ್ಯಮ ಅಕಾಡೆಮಿ ಸದಸ್ಯೆ ರಶ್ಮಿ ಎಸ್, ‘ಒದುಗರಿಗೆ ಒಳ ನೋಟು ಕೊಡುವಂತಹ ಕಥೆಗಳನ್ನು ಈ ಪುಸ್ತಕ ಒಳಗೊಂಡಿದೆ’ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಚಿತ್ರಶೇಖರ ಕಂಠಿ, ಲೇಖಕ ಅಪ್ಪರಾವ ಅಕ್ಕೋಣೆ, ಲೇಖಕಿ ಸಂಧ್ಯಾ ಹೊನಗುಂಟಿಕರ್ ಉಪಸ್ಥಿತರಿದ್ದರು. ದೂರದರ್ಶನದ ನಿವೃತ್ತ ಅಧಿಕಾರಿ ಸದಾನಂದ ಪೆರ್ಲ ನಿರೂಪಿಸಿದರು. ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಸ್ವಾಗತಿಸಿದರು.
- ‘ಯಜಮಾನರ ಗರ್ಲ್ ಫ್ರೆಂಡ್ ನೋಡಲು ಬಂದೆ’ ‘
ಯಾದಗಿರಿಯಲ್ಲಿ ಜನಿಸಿದ್ದರೂ ಒಂದು ಬಾರಿಯೂ ಅಲ್ಲಿಗೆ ಹೋಗಲಿಲ್ಲ. ಆದರೆ ಕಲಬುರಗಿಗೆ ಬಹಳ ಅಟ್ಯಾಚ್‌ಮೆಂಟ್ ಇದೆ. ನಮ್ಮ ಯಜಮಾನರು ಪದವಿ ಓದಿದಿದ್ದು ಇಲ್ಲಿಯೇ. ಅವರು ತಮ್ಮ ಗರ್ಲ್ ಫ್ರೆಂಡ್‌ನ ಆಗಾಗ ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಯಜಮಾನರ ಗರ್ಲ್ ಫ್ರೆಂಡ್ ನೋಡಬಹುದು ಅಂಥ ಇಲ್ಲಿಗೆ ಬಂದೆ’ ಎಂದು ಜಯಲಕ್ಷ್ಮಿ ಪಾಟೀಲ ಅವರು ಹಾಸ್ಯ ದಾಟಿಯಲ್ಲಿ ಹೇಳಿದರು. ‘ಯಜಮಾನರನ್ನು ಕಟ್ಟಿಕೊಂಡು ನಾನು ಸುಖವಾಗಿದ್ದೇನೆ. ಪಾಪ ಅವರ ಗರ್ಲ್ ಫ್ರೆಂಡ್ ಎಲ್ಲಿಯೇ ಇದ್ದರು ಚೆನ್ನಾಗಿ ಇರಲಿ. ಅವರನ್ನು ನೋಡುವ ಆಸೆ ಈಡೇರಿಲಿಲ್ಲ’ ಎಂದು ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.