ಬುಧವಾರ, ಡಿಸೆಂಬರ್ 8, 2021
21 °C

ಕಲಬುರಗಿ: ಸವಾಲು,ಟೀಕೆ ಸರಳವಾಗಿ ಎದುರಿಸಿ –ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯನ್ನು ವ್ಯವಸ್ಥಿತವಾಗಿ ಕಟ್ಟುವಾಗ ಕೆಳ ಸಮುದಾಯದಿಂದ ಬರುವ ಆಡಳಿತಾಧಿಕಾರಿಯೊಬ್ಬರು ವೃತ್ತಿ ಬದುಕಿನಲ್ಲಿ ಸಾಕಷ್ಟು ಸವಾಲು ಹಾಗೂ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸವಾಲುಗಳನ್ನು ಪ್ರೊ.ತೇಜಸ್ವಿ ಕಟ್ಟೀಮನಿ ಅವರು ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಯಶಸ್ವಿಯಾಗಿ ಎದುರಿಸಿದ್ದಾರೆ‘ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಧಾರವಾಡದ ಮನೋಹರ ಗ್ರಂಥಮಾಲಾ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರೊ.ತೇಜಸ್ವಿ ಕಟ್ಟೀಮನಿಯವರ ಆತ್ಮಚರಿತ್ರೆ ‘ಜಂಗ್ಲಿ ಕುಲಪತಿಯ ಜಂಗೀ ಕತೆ’ ಕೃತಿ ಲೋಕಾರ್ಪಣೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಾ.ತೇಜಸ್ವಿ ಕಟ್ಟೀಮನಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದವರಾಗಿದ್ದು, ಅವರು ಮಧ್ಯಪ್ರದೇಶದ ಅಮರಕಂಟಕದ ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸುವಾಗ ಅಲ್ಲಿ ಅವರು ಎದುರಿಸಿದ ಸವಾಲು ಹಾಗೂ ಅಲ್ಲಿನ ಬುಡಕಟ್ಟು ಸಮುದಾಯದವರಿಗೆ ಮಾಡಿದ ಕಾರ್ಯವನ್ನು ತಮ್ಮ ಆತ್ಮಚರಿತ್ರೆಯಲ್ಲಿ ವಿವರಿಸಿರುವುದು ಹೆಮ್ಮೆಯ ವಿಷಯ. ಟೀಕೆಗಳಿಗೆ ಅಳಕದೇ ಜವಾಬ್ದಾರಿಯುತವಾಗಿ ಅವುಗಳನ್ನು ಎದುರಿಸಿದ್ದಾರೆ’ ಎಂದರು.

ಕೃತಿ ಕುರಿತು ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ವಿಕ್ರಮ್‌ ವಿಸಾಜಿ, ‘ತೇಜಸ್ವಿ ಕಟ್ಟೀಮನಿಯವರು ಸರಳ ಕೆಲಸಗಳ ಮಾರ್ಗಾನ್ವೇಷಕರಾಗಿದ್ದಾರೆ. ನೂರಾರು ಸಮಸ್ಯೆಗಳ ನಡುವೆಯೂ ಹೆಚ್ಚು ಕ್ರೀಯಾಶೀಲವಾಗಿ ಆಡಳಿತ ಮಾಡಬಹುದು ಎನ್ನುವುದನ್ನು ತಮ್ಮ ಬರಹದ ಮೂಲಕ ತೋರಿಸಿಕೊಟ್ಟಿದ್ದಾರೆ‘ ಎಂದು ಬಣ್ಣಿಸಿದರು.

‘ಜಂಗ್ಲಿ ಕುಲಪತಿಯ ಜಂಗೀಕತೆ’ ಕೃತಿಯು ಕುಲಪತಿಯಾಗಿ ಗುತ್ತಿನಿಂದ ಬರೆದಿದ್ದಲ್ಲ. ಅದು ಮಾನವೀಯತೆಯ ನೆಲೆಗಟ್ಟಿನಲ್ಲಿ ರೂಪಗೊಂಡಿದೆ. ಕೃತಿಯಲ್ಲಿ ಆದಿವಾಸಿ ಜನರು ಎದುರಿಸುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ನೈತಿಕ ಸವಾಲುಗಳನ್ನು ಅನಾವರಣಗೊಂಡಿದೆ’ ಎಂದರು.

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಡೀನ್‌ ಪ್ರೊ.ಎಂ.ವಿ.ಅಳಗವಾಡಿ, ‘ಕೃತಿಯು ಆದಿವಾಸಿಗಳ ಅಸ್ಮಿತೆಯನ್ನು ಕಟ್ಟಿಕೊಡುತ್ತದೆ. ಜೊತೆಗೆ ಸರಳವಾದ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ವಿವರಿಸುತ್ತದೆ’ ಎಂದರು.

 ಅಧ್ಯಕ್ಷತೆ ವಹಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ, ’ಜಂಗ್ಲಿ ಮತ್ತು ಜಂಗಿ ಪದಗಳು ವಿಶಿಷ್ಟವಾದವು. ಜಂಗಿ ಎಂದರೆ ಗೆದ್ದವನು ಎಂದು ಅರ್ಥ. ಪ್ರೊ.ತೇಜಸ್ವಿ ಕಟ್ಟಿಮನಿ ಅವರು ಕುಲಪತಿ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ ಗೆದ್ದವರು ಎಂಬುದು ಈ ಕೃತಿಯ ವೈಶಿಷ್ಟ್ಯವಾಗಿದೆ’ ಎಂದರು.

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಡೋಣೂರ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ, ಡಾ.ರೇಷ್ಮಾ ನದಾಫ್‌ ಕೃತಿ ಕುರಿತು ಮಾತನಾಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ. ಪೋತೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿದ್ಧಾರ್ಥ ತಂಡದವರು ಕ್ರಾಂತಿಗೀತೆ ಹಾಡಿದರು. ಡಾ.ಎಂ.ಬಿ.ಕಟ್ಟಿ ನಿರೂಪಿಸಿದರು. ಡಾ.ಶಿವಾನಂದ ಕೋಳಿ ವಂದಿಸಿದರು.

***

ನಾವು ವೃತ್ತಿ ಬದುಕಿನಲ್ಲಿ ಮಾಡುವ ಜವಾಬ್ದಾರಿಯುತವಾದ ಸಣ್ಣ ಸಣ್ಣ ಕೆಲಸಗಳೇ ನಮ್ಮ ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸುತ್ತವೆ. ಅದೇ ರೀತಿಯಲ್ಲಿ ನನ್ನೂರಿನ ನೆನಪು ಹಾಗೂ ಅಂಬೇಡ್ಕರ್‌ ಕೃತಿಗಳ ಓದು ನನ್ನ ಬದುಕನ್ನು ವ್ಯವಸ್ಥಿತವಾಗಿ ಸೃಷ್ಟಿಸಿತು
-ಪ್ರೊ.ತೇಜಸ್ವಿ ಕಟ್ಟೀಮನಿ, ಕುಲಪತಿ, ಆಂಧ್ರ ಪ್ರದೇಶದ ಕೇಂದ್ರೀಯ ಆದಿವಾಸಿ ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.