ಮಂಗಳವಾರ, ಅಕ್ಟೋಬರ್ 27, 2020
22 °C
ಅತಿವೃಷ್ಟಿ ಹಾನಿಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಖಂಡರ ಕಿಡಿ

ಮಾನವೀಯತೆ ತೋರದ ಉಸ್ತುವಾರಿ ಸಚಿವ: ಕಾಂಗ್ರೆಸ್‌ ಮುಖಂಡ ಬಿ.ಆರ್‌. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಧಾರಾಕಾರ ಮಳೆಯಿಂದ ಜಿಲ್ಲೆಯ ಜನ ತತ್ತರಿಸಿದ್ದಾರೆ. ಆದರೆ, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕನಿಷ್ಠ ಮಾನವೀಯತೆ ಕೂಡ ತೋರಿಲ್ಲ. ಸಚಿವರು ಕಾಣೆಯಾಗಿದ್ದಾರೆ ಎಂದು ನಾವು ಪೊಲೀಸರಿಗೆ ದೂರು ನೀಡುವ ಪರಿಸ್ಥಿತಿ ಬಂದಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಆರ್‌. ಪಾಟೀಲ ಕಿಡಿ ಕಾರಿದರು.

‘ಕೇವಲ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯು ಎರಡನೇ ಬಾರಿಗೆ ಅತಿವೃಷ್ಟಿ, ಪ್ರವಾಹಕ್ಕೆ ಸಿಕ್ಕು ನಲುಗಿದೆ. ಕೆಲವೇ ದಿನಗಳ ಹಿಂದೆ ಮಳೆಯಿಂದಾಗಿ ಶೇ 60ರಷ್ಟು ತೊಗರಿ ಬೆಳೆ ನಾಶವಾಗಿತ್ತು. ಈಗ ಮತ್ತೆ ಅನಿರೀಕ್ಷಿತವಾಗಿ ಪ್ರವಾಹ ನುಗ್ಗಿದೆ. ತೊಗರಿ, ಕಬ್ಬು, ಹೆಸರು ಸೇರಿದಂತೆ ಎಲ್ಲ ಬೆಳೆಗಳೂ ನೂರಕ್ಕೆ ನೂರರಷ್ಟು ನಾಶವಾಗಿವೆ. ಜನರು ಸಾಯುವ ಸ್ಥಿತಿಯಲ್ಲಿದ್ದಾರೆ. ತಕ್ಷಣಕ್ಕೆ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಗೋವಿಂದ ಕಾರಜೋಳ ಇನ್ನೂ ಬಾಯಿ ಬಿಟ್ಟಿಲ್ಲ. ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅವರು ಯೋಗ್ಯರಿಲ್ಲ. ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಈ ಬಾರಿ ಶೇ 80ರಷ್ಟು ತೊಗರಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಹೇಳುತ್ತಿದೆ. ಆದರೆ, ಒಂದೇ ಒಂದು ಕಾಳು ಕೂಡ ಈ ಬಾರಿ ಕೈಗೆ ಸಿಗದ ಹಾಗೆ ಬೆಳೆ ನಾಶವಾಗಿದೆ. ರೈತರು ಕಂಗಾಲಾಗಿದ್ದಾರೆ. ತಕ್ಷಣಕ್ಕೆ ಬೆಳೆ ಹಾನಿ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು, ಪರಿಹಾರಧನ ಹಾಗೂ ವಿಮೆ ಹಣವನ್ನು ಶೀಘ್ರ ನೀಡಬೇಕು’ ಎಂದೂ ಅವರು ಆಗ್ರಹಿಸಿದರು.

‘ಜಿಲ್ಲೆಯ ವಿಮೆಯನ್ನು ಅದಾನಿ ಕಂಪನಿಗೆ ವಹಿಸಿ ಕೊಡಲಾಗಿದೆ. ಕಳೆದ ವರ್ಷ ಜಿಲ್ಲೆಯೊಂದರಿಂದಲೇ ಅವರ ಕಂಪನಿ ₹ 400 ಕೋಟಿ ಲಾಭ ಮಾಡಿಕೊಂಡಿದೆ. ಸಾಲದ್ದಕ್ಕೆ ಸರ್ಕಾರಗಳೇ ಈ ವಿಮೆ ಕಂಪನಿಗಳಿಗೆ ಮುಂಗಡ ಹಣ ನೀಡುತ್ತಿವೆ. ಆದರೆ, ರೈತರಿಗೆ ಮಾತ್ರ ಪುಡಿಗಾಸಿನ ಪರಿಹಾರ ಕೊಡಲು ಆಗುತ್ತಿಲ್ಲ. ಇಂಥ ಕಂಪನಿಗಳನ್ನು ದೂರ ಇಟ್ಟು ಸರ್ಕಾರ ರೈತರ ನೆರವಿಗೆ ಧಾವಿಸಬೇಕು’ ಎಂದರು.

‘ಅಮರ್ಜಾ ಅಣೆಕಟ್ಟೆಯಲ್ಲಿ 1.5 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಆದರೆ, ಈಗಾಗಲೇ 1.5 ಟಿಎಂಸಿ ಅಡಿ ನೀರನ್ನು ಹೊರಕ್ಕೆ ಬಿಡಲಾಗಿದೆ. ಅಂದರೆ, ನದಿ ಪಾತ್ರದ ಎಲ್ಲ ಗ್ರಾಮಗಳೂ ಆತಂಕದಲ್ಲಿವೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ನೀರು ಪೂರೈಸಲು ಕಟ್ಟಿದ ಜಾಕ್‌ವೆಲ್‌ನಿಂದ ಕೂಡ ಹೆಚ್ಚುವರಿ ನೀರು ಹೊರಚಿಮ್ಮಿ ಕೊರಳ್ಳಿ ಗ್ರಾಮಕ್ಕೆ ನುಗ್ಗಿತ್ತಿದೆ. ಅಲ್ಲಿ ತಡೆಗೋಡೆ ನಿರ್ಮಿಸಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಸಿಮೆಂಟ್‌ ಚೀಲ ಇಟ್ಟು ಗ್ರಾಮದೊಳಗೆ ನೀರು ನುಗ್ಗದಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಈಗಾಗಲೇ ಹಲವು ಕೆರೆಗಳು ಒಡೆದು ಹಾನಿಯಾಗಿದೆ. ಇನ್ನೂ ಹಲವು ಅಪಾಯದ ಹಂತದಲ್ಲಿವೆ. ಹಲವು ಮನೆಗಳು ನೆಲಸಮವಾಗಿವೆ. ಪರಿಹಾರ ನೀಡಲು ರಾಜ್ಯ ಸರ್ಕಾರದ ಬಳಿಯಂತೂ ಬಿಡಿಗಾಸಿಲ್ಲ. ಕೇಂದ್ರದಿಂದ ಹಣ ತಂದು ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಬೇಕು. ಕೇವಲ ಎರಡು ವಿಮಾನಗಳ ಖರೀದಿಗೆ ₹ 8,400 ಕೋಟಿ ವ್ಯಯಿಸುವ ಕೇಂದ್ರ ಸರ್ಕಾರ, ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರೆ ಜನ ಯಾವತ್ತೂ ಕ್ಷಮಿಸುವುದಿಲ್ಲ’ ಎಂದೂ ದೂರಿದರು.

‘ಕಾಂಗ್ರೆಸ್‌ ಶಾಸಕರು ಹಾಗೂ ಮುಖಂಡರೇ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಜನರಿಗೆ ಸ್ಪಂದಿಸುತ್ತೇವೆ. ಹಾನಿಯ ವರದಿ ತಯಾರಿಸಿ ಕೊಡುತ್ತೇವೆ. ಆದರೆ, ರಾಜ್ಯ ಸರ್ಕಾರ ಮಾತ್ರವಲ್ಲ; ಕೇಂದ್ರದಿಂದ ಕೂಡ ತಜ್ಞರ ತಂಡ ಬಂದು ಈ ಹಾನಿ ಸಮೀಕ್ಷೆ ನಡೆಸಬೇಕು’ ಎಂದು ಬಿ.ಆರ್. ಪಾಟೀಲ ಒತ್ತಾಯಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡ ಅಲ್ಲಮಪ್ರಭು ಪಾಟೀಲ ಇದ್ದರು.

ಇನ್ನೊಂದು ವಿಪತ್ತು ನಿರ್ವಹಣಾ ತಂಡ ಅಗತ್ಯ

ಕಲಬುರ್ಗಿ: ‘ಜಿಲ್ಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌) ಒಂದೇ ಇದೆ. ಸದ್ಯದ ಪರಿಸ್ಥಿತಿ ನಿಯಂತ್ರಣಕ್ಕೆ ಇನ್ನೊಂದು ತಂಡವನ್ನು ಕೂಡಲೇ ಕಳಿಸಿಕೊಡಬೇಕು’ ಎಂದು ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಆಗ್ರಹಿಸಿದರು.

‘ಮಳಖೇಡದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ನೀರು ನುಗ್ಗಿ ಸಿಕ್ಕಿಕೊಂಡಿದ್ದ ಇಬ್ಬರು ಮಕ್ಕಳು, ಇಬ್ಬರು ಶಿಕ್ಷಕಿಯರನ್ನು ರಕ್ಷಿಸಲು ಗುರುವಾರ ನಸುಕಿನ 5 ಗಂಟೆಯವರೆಗೆ ಕಸರತ್ತು ಮಾಡಬೇಕಾಯಿತು. ಜಿಲ್ಲೆಯಲ್ಲಿ ಈಗಾಗಲೇ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಪರಿಸ್ಥಿತಿ ಇನ್ನೂ ಕೈ ಮೀರುವ ಮೊದಲು ರಕ್ಷಣಾ ಕಾರ್ಯ ಚುರುಕುಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಕುರಿತು ಮಾಡಿದ ಟ್ವೀಟ್‌ನಲ್ಲಿ ಅಂಧ್ರ, ತಮಿಳುನಾಡು ಹೆಸರಿಸಿದ್ದಾರೆ. ಕರ್ನಾಟಕದ ಹೆಸರೇ ಇಲ್ಲ. ನಮ್ಮದು ಒಂದು ರಾಜ್ಯವಿದೆ ಎಂಬ ಅರಿವು ಅವರಿಗಿಲ್ಲವೇನೋ. ರಾಜ್ಯದಿಂದ ಆಯ್ಕೆಯಾದ ಸಂಸದರಲ್ಲಿ ಯಾರಿಗೂ ಮೋದಿ ಅವರ ಬಳಿ ಮಾತನಾಡಿ ಪರಿಹಾರ ತರುವಷ್ಟು ತಾಕತ್ತಿಲ್ಲ’ ಎಂದೂ ದೂರಿದರು.

‘ಈಗ ಹಾಳಾದ ತೊಗರಿ ತೆಗೆದು ಕಡಲೆ ಹಾಕಬೇಕಾಗುತ್ತದೆ. ಆದರೆ, ರಾಜ್ಯ ಸರ್ಕಾರ ಅಗತ್ಯದಷ್ಟು ಕಡಲೆ ಬಿತ್ತನೆ ಬೀಜವನ್ನೇ ಪೂರೈಸಿಲ್ಲ. ನೊಂದ ರೈತರಿಗೆ ಬೀಜಗಳನ್ನೂ ಪೂರೈಸಲಾಗದಿದ್ದರೆ ಇವರು ಯಾವ ಕರ್ಮಕ್ಕೆ ಸರ್ಕಾರ ನಡೆಸುತ್ತಿದ್ದಾರೆ? ಸಾಲ ಮಾಡಿಯಾದರೂ ರೈತರಿಗೆ ಬೀಜ, ಗೊಬ್ಬರ, ಪರಿಹಾರ, ವಿಮೆ ಹಣ ನೀಡಬೇಕು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು