ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಹಸಿರು ಸಂಪತ್ತಿಗೆ ಜೀವ ತುಂಬುವ ಸಸಿಗಳು

ರೈತರಿಗೆ ರಿಯಾಯಿತಿ ದರದಲ್ಲಿ ವಿವಿಧ ತಳಿಯ ಗಿಡಗಳ ಮಾರಾಟ; ನರೇಗಾ ಯೋಜನೆಯಲ್ಲಿ ಸಸಿಗಳ ಉಚಿತ ವಿತರಣೆ
Last Updated 27 ಜೂನ್ 2022, 4:44 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ ನಿಧಾನವಾಗಿ ಕಂಡು ಬರುತ್ತಿರುವ ‘ಹಸಿರೀಕರಣ’ಕ್ಕೆ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಸಸ್ಯಗಳದ್ದು ಪ್ರಮುಖ ಪಾತ್ರವಿದೆ. ಎರಡೂ ಇಲಾಖೆಗಳ ಸಸ್ಯ ಕ್ಷೇತ್ರದಲ್ಲಿ (ನರ್ಸರಿ) ವೈವಿಧ್ಯಮಯ ಸಸಿಗಳಿದ್ದು, ಪರಿಸರ ಪ್ರಿಯರನ್ನು ಆಕರ್ಷಿಸುತ್ತಿವೆ.

ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಿವಿಧ ತಳಿಯ ಸಸಿಗಳು ಈ ನರ್ಸರಿಗಳಲ್ಲಿ ದೊರೆಯುತ್ತವೆ. ಅವುಗಳನ್ನು ತಂದು ರೈತರು, ಸಾರ್ವಜನಿಕರಿಗೆ ಜಮೀನು, ತೋಟ, ಮನೆ, ಕಚೇರಿ ಆವರಣದಲ್ಲಿ ಅಲ್ಲದೇ ಅವಕಾಶ ಇರುವ ಕಡೆಗಳೆಲ್ಲಿ ಆಪ್ತವಾಗಿ ಬೆಳೆಸುತ್ತಿದ್ದಾರೆ.

ಲಿಂಬು, ಕರಿಬೇವು, ಶ್ರೀಗಂಧ, ರಕ್ತಚಂದನ, ಬೇವು, ಆಲದ, ಮಹಗಾನಿ, ಬಿದಿರು, ಸಾಗುವಾನಿ ಸಸಿಗಳು ಅರಣ್ಯ ಇಲಾಖೆಯಲ್ಲಿ ದೊರೆಯುತ್ತವೆ. ಜಮೀನಿನ ಬದುಗಳಲ್ಲಿ, ಶಾಲಾ– ಕಾಲೇಜು, ಸಂಘ ಸಂಸ್ಥೆಗಳ ಆವರಣದಲ್ಲಿ ಮತ್ತು ನರೇಗಾ ಯೋಜನೆಯಡಿ ಸಸಿಗಳನ್ನು ಇಲಾಖೆಯು ಪ್ರೋತ್ಸಾಹಿಸುತ್ತದೆ. ಗ್ರಾಮ ಪಂಚಾಯಿತಿ ಪಿಡಿಒ ಅವರ ಒಪ್ಪಿಗೆ ಪತ್ರ ಮತ್ತು ಜಮೀನಿನ ಪಹಣಿ ನೀಡಿದಲ್ಲಿ ರೈತರಿಗೆ 400 ಗಿಡಗಳನ್ನು ಉಚಿತವಾಗಿ ನೀಡಲಾಗುತ್ತದೆ.

‘ರಸ್ತೆಗಳ ಎರಡೂ ಬದಿಗಳಲ್ಲಿ ಬೇವು, ನೇರಳೆ, ಆಲದ, ಬಸರಿ, ಚಳ್ಳೆ ಗಿಡಗಳನ್ನು ನೆಟ್ಟು ಪೋಷಿಸಲು ಅರಣ್ಯ ಇಲಾಖೆ ಆದ್ಯತೆ ನೀಡುತ್ತಿದೆ. ಪ್ರತಿ ವರ್ಷ ಜೂನ್‌ನಿಂದ ಆಗಸ್ಟ್‌ವರೆಗೆ ಈ ಕಾರ್ಯ ನಡೆಯುತ್ತದೆ. ಒಂದು ವೇಳೆ ಮಳೆ ಬಾರದಿದ್ದರೆ, ಸಿಬ್ಬಂದಿಯೇ ಗಿಡಗಳಿಗೆ ನೀರುಣಿಸುತ್ತಾರೆ’ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್‌.ಭಾವಿಕಟ್ಟಿ ತಿಳಿಸಿದರು.

ವಾಣಿಜ್ಯ ಉದ್ದೇಶಕ್ಕೆ ಹೆಚ್ಚಿನ ಆದ್ಯತೆ ನೀಡುವ ತೋಟಗಾರಿಕೆ ಇಲಾಖೆಯಲ್ಲಿ ಮಾವು, ಲಿಂಬೆ, ಕರಿಬೇವು, ತೆಂಗು, ಸೀಬೆ, ಸೀತಾಫಲ ಸಸಿಗಳ ಜೊತೆ ಅಲಂಕಾರಿಕ ಗಿಡಗಳು ಸಿಗುತ್ತವೆ.

‘ಜಿಲ್ಲೆಯಲ್ಲಿ ಕಳೆದ ವರ್ಷ 2.48 ಲಕ್ಷ ಸಸಿಗಳು ಮಾರಾಟವಾಗಿದ್ದು, ಈ ವರ್ಷವೂ 2 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಮಾರುವ ಗುರಿಯಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಎಚ್‌.ಎಸ್‌.ಪ್ರಭುರಾಜ ತಿಳಿಸಿದರು.

ಗಿಡ ಬೆಳೆಸಲು ಪೂರಕ ವಾತಾವರಣ

ಚಿಂಚೋಳಿ: ತಾಲ್ಲೂಕಿನಲ್ಲಿ ಅರಣ್ಯ ಮತ್ತು ತೋಟಗಾರಿಕೆ ಬೆಳೆಗಳ ಬೇಸಾಯಕ್ಕೆ ಪೂರಕ ವಾತಾವರಣವಿದೆ. ಹಸಿರು ವಲಯ ಅಭಿವೃದ್ಧಿ ಜೊತೆಗೆ ಕೃಷಿಕರಿಗೆ ಆದಾಯ ತಂದುಕೊಡಲು ಎರಡೂ ಇಲಾಖೆಗಳು ಶ್ರಮಿಸುತ್ತಿವೆ.

ಚಿಂಚೋಳಿಯ ಪ್ರಾದೇಶಿಕ ಅರಣ್ಯ ವಲಯದಲ್ಲಿ ಚಿಕ್ಕಲಿಂಗದಳ್ಳಿ ಸಸ್ಯ ಕ್ಷೇತ್ರದಲ್ಲಿ ಈ ವರ್ಷ 52,400 ಸಸಿಗಳನ್ನು ಬೆಳೆಸಲಾಗಿದೆ. ವನ್ಯಜೀವಿಧಾಮದಲ್ಲಿ ಚಿಂದಾನೂರ ಮತ್ತು ಲಿಂಗಾನಗರ ಹೀಗೆ ಎರಡು ಸಸ್ಯಕ್ಷೇತ್ರಗಳಿದ್ದು, ಇಲ್ಲಿ 97,500 ಸಸಿಗಳನ್ನು ಬೆಳೆಸಲಾಗಿದೆ. ಇದರಲ್ಲಿ 70ರಿಂದ 75 ಸಾವಿರ ಸಸಿಗಳನ್ನು ಮಾರಾಟ ಮಾಡಲು ಹಾಗೂ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ರೈತರಿಗೆ ನೀಡುವ ಗುರಿ ಇದೆ. ಉಳಿದ ಗಿಡಗಳನ್ನು ಕಾಡಿನಲ್ಲಿ ನೆಡಲಾಗುತ್ತದೆ.

ಸಾಮಾಜಿಕ ಅರಣ್ಯ ವಲಯದಲ್ಲಿ ಚಿಂಚೋಳಿ ಮತ್ತು ತಾಜಲಾಪುರ ನರ್ಸರಿ ಮೂಲಕ 1.25 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. 40 ಸಾವಿರ ಸಸಿಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಸ್ತೆ ಬದಿ ನೆಡಲು ಹಾಗೂ 45 ಸಾವಿರ ಸಸಿಗಳನ್ನು ರೈತರ ಹೊಲದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೆಡಲು ಗುರಿ ಹೊಂದಲಾಗಿದೆ.

ಸಸಿಗೆ ಪ್ರೋತ್ಸಾಹ ಧನ

ಚಿತ್ತಾಪುರ: ಅರಣ್ಯ ಇಲಾಖೆಯು ಚಿತ್ತಾಪುರ ಮತ್ತು ಮಾಡಬೂಳ ಸಸ್ಯ ಕ್ಷೇತ್ರಗಳಿಂದ 2022-23ನೇ ಸಾಲಿನಡಿ ಒಟ್ಟು 88 ಸಾವಿರ ಸಸಿ ವಿತರಣೆಯ ಗುರಿ ಹೊಂದಿದೆ.

ಚಿತ್ತಾಪುರ ನರ್ಸರಿ ಕೇಂದ್ರದಲ್ಲಿ 45 ಸಾವಿರ ಸಸಿ, ಮಾಡಬೂಳ ನರ್ಸರಿ ಕೇಂದ್ರದಲ್ಲಿ 33 ಸಾವಿರ ಸಸಿ ಬೆಳೆಸಲಾಗಿದೆ. ರೈತರು ಹಾಗೂ ಸಾರ್ವಜನಿಕರಿಗೆ ಸಸಿ ವಿತರಣೆ ಮಾಡಲಾಗುತ್ತಿದೆ.

ನರ್ಸರಿ ಕೇಂದ್ರದಲ್ಲಿ ಜಾಫಲ, ಬಿದಿರು, ಮಹಾಗನಿ, ಹೊಂಗೆ, ಕರಿಬೇವು, ಸಾಗವಾನಿ, ಶ್ರೀಗಂಧ, ಮಾವು, ನೇರಳೆ, ಹುಣಸೆ, ಸೀತಾಫಲ, ಲಿಂಬು ಸೇರಿ ವಿವಿಧ ಸಸಿಗಳನ್ನು ಬೆಳೆಸಲಾಗಿದೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ರೈತರು ತಮ್ಮ ಜಮೀನಿನ ಪಹಣಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯೊಂದಿಗೆ ₹10 ಪಾವತಿಸಿ ಹೆಸರು ನೋಂದಣಿ ಮಾಡಿಕೊಂಡರೆ ₹1 ಮತ್ತು ₹ 2 ರಿಯಾಯಿತಿ ದರದಲ್ಲಿ ಸಸಿ ನೀಡಲಾಗುತ್ತಿದೆ.

‘ಸಸಿ ವಿತರಿಸಿದ ಒಂದು ವರ್ಷದ ನಂತರ ಜೂನ್ ತಿಂಗಳಲ್ಲಿ ಸಮೀಕ್ಷೆ ಮಾಡಲಾಗುತ್ತದೆ. ಬದುಕುಳಿದ ಪ್ರತಿ ಸಸಿಗೆ ಮೊದಲ ವರ್ಷ ಪ್ರೋತ್ಸಾಹ ಧನವಾಗಿ ₹35, ಎರಡನೇ ವರ್ಷ ₹40, ಮೂರನೇ ವರ್ಷ ₹50 ನೀಡಲಾಗುತ್ತದೆ. ಮೂರು ವರ್ಷಗಳಲ್ಲಿ ಸಸಿಯೊಂದಕ್ಕೆ ₹125 ಪ್ರೋತ್ಸಾಹ ಧನವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ’ ಎಂದು ಪ್ರಾದೇಶಿಕ ಅರಣ್ಯಾಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.

‘ತೋಟಗಾರಿಕೆ ಇಲಾಖೆಯಲ್ಲಿ ಮಾರಿದರೆ ಅನುಕೂಲ’

ಅಫಜಲಪುರ: ತಾಲ್ಲೂಕಿನ ಗುಡೂರು ಗ್ರಾಮದ ತೋಟಗಾರಿಕೆ ಇಲಾಖೆಯ ನರ್ಸರಿ ಕಾರ್ಯಾಲಯದ ಆವರಣದಲ್ಲಿನ ಸಸ್ಯಕ್ಷೇತ್ರದಲ್ಲಿ ವಿವಿಧ ಸಸಿಗಳನ್ನು ಬೆಳೆಯಲಾಗುತ್ತಿದೆ.

ನರ್ಸರಿಯಲ್ಲಿ ತೆಂಗು, ನುಗ್ಗೆಕಾಯಿ, ಲಿಂಬು ಮತ್ತು ಕರಿಬೇವು ಸಸಿಗಳನ್ನು ಬೆಳೆಸಲಾಗಿದೆ. ಲಿಂಬು ಗಿಡಕ್ಕೆ ₹10, ಕರಿಬೇವು ₹8 ಹಾಗೂ ತೆಂಗು ₹70 ರಂತೆ ರೈತರಿಗೆ ನೀಡಲಾಗುತ್ತದೆ. ಪೇರು ಮತ್ತು ಸೀತಾಫಲ ಸಸಿಗಳನ್ನೂ ಬೆಳೆಸಲಾಗುತ್ತಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸುರೇಂದ್ರ ಹೊನ್ನಪ್ಪ ಗೋಳ ತಿಳಿಸಿದರು.

‘ನರ್ಸರಿಗಳಿಂದ ಗಿಡಗಳನ್ನು ತರಬೇಕಾದರೆ ಸಾರಿಗೆ ವೆಚ್ಚ ಅಧಿಕವಾಗುತ್ತಿದೆ. ಸಸಿಗಳನ್ನು ತಾಲ್ಲೂಕಿನ ತೋಟಗಾರಿಕೆ ಕಚೇರಿಯಲ್ಲಿಟ್ಟು ಮಾರಿದರೆ ಅನುಕೂಲ ಆಗುತ್ತದೆ’ ಎಂದು ರೈತರಾದ ಶಾಮಸುಂದರ ಮಠಪತಿ ಹಾಗೂ ರಮೇಶ್ ಪಾಟೀಲ ತಿಳಿಸಿದರು.

ಸಂಘ ಸಂಸ್ಥೆಗಳ ಸಹಕಾರ

ಆಳಂದ: ತಾಲ್ಲೂಕಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಕೊರಳ್ಳಿ ಅಮರ್ಜಾ ಅಣೆಕಟ್ಟೆ ಮತ್ತು ಬಬಲೇಶ್ವರ
ಗ್ರಾಮದಲ್ಲಿನ ಹೊರವಲಯದ ನರ್ಸರಿಗಳಲ್ಲಿ ಪ್ರಸಕ್ತ ವರ್ಷ 1.24 ಲಕ್ಷ ವಿವಿಧ ತಳಿಯ ಸಸಿಗಳನ್ನು ಬೆಳೆಸಲಾಗಿದೆ. ಬೇವು, ಹೊಂಗೆ, ಶ್ರೀಗಂಧ, ನೇರಳೆ, ಬಾದಾಮಿ, ಬಿಲ್ವಪತ್ರೆ, ಮಹಾಗಣಿ, ಬಿದಿರು, ಮಾವು, ನಿಂಬೆ, ಪೇರಲ, ಚಿಕ್ಕು ಸಸಿಗಳು ಇವೆ.

ಈಗಾಗಲೇ ರೈತರಿಗೆ 45 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶಿವಕುಮಾರ ತಿಳಿಸಿದರು.

ತಾಲ್ಲೂಕಿನ ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯ ಆವರಣ, ಮಾದನ ಹಿಪ್ಪರಿಗಿ, ನಿಂಬರ್ಗಾ, ಜವಳಗಾ ಗ್ರಾಮದ ಸ್ಮಶಾನ ಭೂಮಿ ಆವರಣ ದಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ಸಸಿ ನೆಡಲಾಗಿದೆ. ಜಿಡಗಾ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಠದ ಆವರಣ, ಸಂಪರ್ಕ ರಸ್ತೆಗಳ ಬದಿಗೆ 5 ಸಾವಿರಕ್ಕೂ ಹೆಚ್ಚು ಸಸಿ ನೆಟ್ಟು ಪೋಷಿಸಲಾಗುತ್ತಿದೆ.

ಝಳಕಿ, ಯಳಸಂಗಿ, ದರ್ಗಾ ಶಿರೂರು ಮತ್ತಿತರ ಗ್ರಾಮಗಳಲ್ಲಿ ಕೆಲ ಸಂಘ ಸಂಸ್ಥೆಗಳ ಸಹಕಾರದಿಂದ ಸಾವಿರಾರು ಸಸಿ
ನೆಡಲಾಗಿದೆ.

ಪ್ರಾದೇಶಿಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ತಾಲ್ಲೂಕಿನ ಕಡಗಂಚಿ ಗ್ರಾಮದ ಹೊರವಲಯದಲ್ಲಿ ನರ್ಸರಿ ಇದೆ. ಇಲ್ಲಿ 41,800 ಸಸಿಗಳನ್ನು ಪ್ರಸಕ್ತ ವರ್ಷ ಬೆಳೆಸಲಾಗಿದೆ. ಇಲ್ಲಿಯ ಸಸಿಗಳು ಕೇವಲ ರೈತರಿಗೆ ಮಾತ್ರ ವಿತರಿಸಲಾಗುತ್ತಿದೆ. ಜುಲೈ ಮೊದಲ ವಾರದಲ್ಲಿ ರೈತರು ಹೊಲಗದ್ದೆಗಳಲ್ಲಿ ಬೆಳೆಯಲು ವಿವಿಧ ತಳಿಯ ಸಸಿಗಳು ಲಭ್ಯ ಇವೆ ಎಂದು ವಲಯ ಅರಣ್ಯಾಧಿಕಾರಿ ಜಗನ್ನಾಥ ಕೋರಳ್ಳಿ ತಿಳಿಸಿದರು.

ರೈತರ ಮಕ್ಕಳಿಗೆ ತರಬೇತಿ

ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿಯಲ್ಲಿ ರೈತ ಮಕ್ಕಳ ತೋಟಗಾರಿಕಾ ತರಬೇತಿ ಕೇಂದ್ರ ಹಾಗೂ ತೋಟಗಾರಿಕಾ ಕ್ಷೇತ್ರವಿದ್ದು, (ರಾಜ್ಯ ವಲಯ) ಪ್ರತಿ ವರ್ಷ 48 ರೈತರ ಮಕ್ಕಳಿಗೆ ತೋಟಗಾರಿಕಾ ಬೆಳೆಗಳ ಕುರಿತು ತರಬೇತಿ ನೀಡಲಾಗುತ್ತದೆ. ಈ ಕ್ಷೇತ್ರವು 108 ಎಕರೆ ವಿಸ್ತಾರ ಹೊಂದಿದ್ದು, ದಶಹರಿ(ದಶೆರಿ) ಮಾವು, ಸೀಬೆ, ನಿಂಬೆ, ಕರಿಬೇವು, ನುಗ್ಗೆ ಸೇರಿದಂತೆ 66,551 ಸಸಿಗಳನ್ನು ಬೆಳೆಸಲಾಗಿದೆ.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ರಾಜ್ಯ ಕೃಷಿ ಮತ್ತು ತೋಟಗಾರಿಕಾ ವಿವಿಗಳ ಸಹಯೋಗದಲ್ಲಿ ರೈತರಿಗೆ ಪ್ರಾತ್ಯಕ್ಷಿಕೆ ತೋರಿಸಲು ಪ್ರಸಕ್ತ ವರ್ಷ 12 ಎಕರೆಯಲ್ಲಿ ವಿವಿಧ ಹಣ್ಣಿನ ಸಸಿಗಳನ್ನು ನೆಡಲಾಗಿದೆ. 4 ಎಕರೆಯಲ್ಲಿ ಮಾವು (ಅರ್ಕಾ ಉದಯ, ಅರ್ಕಾ ಸುಪ್ರಭಾತ, ಕೇಸರ, ದಶಹರಿ), 3 ಎಕರೆಯಲ್ಲಿ ಸೀಬೆ (ಲಕ್ನೋ-49, ಅರ್ಕಾ ಕಿರಣ) 3 ಎಕರೆಯಲ್ಲಿ ಗೇರು (ಸುಪ್ರಭಾತ, ವಿ-4, ವಿ-7) 1 ಎಕರೆಯಲ್ಲಿ ಸೀತಾಫಲ (ಬಾಲನಗರ), 1 ಎಕರೆಯಲ್ಲಿಸೆಲೆಕ್ಷನ್-5 ತಳಿಯ ಹುಣಸೆ ಸಸಿಗಳನ್ನು ಬೆಳೆಸಲಾಗುತ್ತಿದೆ.

ಅರಣ್ಯ ಇಲಾಖೆ ಅಂಕಿ ಅಂಶ

₹3 – ಒಂದು ಗಿಡದ ದರ

25 ಸಾವಿರ – ಮಾರಾಟಕ್ಕೆ ಸಿದ್ಧವಿರುವ ಗಿಡಗಳು

2.80 ಲಕ್ಷ – ನರೇಗಾ ಯೋಜನೆಗೆ ಬೆಳೆಸಿದ ಗಿಡಗಳು

201 ಕಿ.ಮೀ – ರಸ್ತೆ ಮಾರ್ಗದ ಬದಿಯಲ್ಲಿ ಗಿಡ ಬೆಳೆಸುವ ಗುರಿ

66,330 – 201 ಕಿ.ಮೀ, ರಸ್ತೆ ಬದಿಯಲ್ಲಿ ನೆಡಲಾಗುವ ಗಿಡಗಳು

ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರಗಳು

ಕೆಸರಟಗಿ, ಭಂಕೂರ (ಕಲಬುರಗಿ)

ಮಾಡಬೂಳ (ಚಿತ್ತಾಪುರ)

ಗುಂಡೇಪಲ್ಲಿ, ದುಗನೂರ (ಸೇಡಂ)

ಮಾವನೂರು, ಚಿಗರಳ್ಳಿ (ಜೇವರ್ಗಿ)

ಬಡದಾಳ, ರೇವನೂರ (ಅಫಜಲಪುರ)

ತಾಜಲಾಪುರ, ಚಿಕ್ಕಲಿಂಗದಹಳ್ಳಿ, ಲಿಂಗಾನಗರ, ಚಿಂದಾನೂರ (ಚಿಂಚೋಳಿ)

ಬಬಲಾದ, ಕೋರಳ್ಳಿ, ಕಡಗಂಚಿ (ಆಳಂದ)

ತೋಟಗಾರಿಕೆ ಇಲಾಖೆಯ ಸಸ್ಯ ಕ್ಷೇತ್ರಗಳು

ಐವಾನ್‌ ಇ ಶಾಹಿ (ಕಲಬುರಗಿ)

ಕೆಸರಟಗಿ (ಕಲಬುರಗಿ)

ಬಡೇಪುರ (ಕಲಬುರಗಿ)

ಮಾಲಗತ್ತಿ (ಕಲಬುರಗಿ)

ಚಂದ್ರಂಪಳ್ಳಿ (ಚಿಂಚೋಳಿ)

ಹಳ್ಳಿಸಲಗರ (ಆಳಂದ)

ಗೋಳಾ (ಕೆ) (ಚಿತ್ತಾಪುರ)

ಗುಡೂರು (ಅಫಜಲಪುರ)

ತೋಟಗಾರಿಕೆ ಇಲಾಖೆಯ ನರ್ಸರಿ, ದರಪಟ್ಟಿ

ಸಸಿ;ದರ (₹ ಗಿಡವೊಂದಕ್ಕೆ)

ಮಾವು;34–36

ಸೀಬೆ;25–30

ಕರಿಬೇವು;12–15

ಲಿಂಬೆ;11–15

ಸೀತಾಫಲ;32–40

ತೆಂಗು–75–80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT