ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪಾಸಣೆ ಇಲ್ಲದೇ ಪ್ರವೇಶಿಸಿದ ಮಹಾರಾಷ್ಟ್ರ ವಾಹನಗಳು

ಮಾಶಾಳ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಕೊರತೆ; ನಿಯಮ ಉಲ್ಲಂಘಿಸಿ ದಿನವಿಡೀ ಸಂಚಾರ
Last Updated 2 ಆಗಸ್ಟ್ 2021, 2:26 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಮಾಶಾಳ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ಮಹಾರಾಷ್ಟ್ರದಿಂದ ಬರುವ ವಾಹನಗಳು ಯಾವುದೇ ತಪಾಸಣೆ ಇಲ್ಲದ ಸರಾಗವಾಗಿ ಸಂಚರಿಸಿದವು. ಚೆಕ್‌‍ಪೋಸ್ಟ್‌ನಲ್ಲಿ ಒಬ್ಬ ಕಾನ್‌ಸ್ಟೆಬಲ್‌ ಬಿಟ್ಟರೆ ಬೇರಾರೂ ಇರಲಿಲ್ಲ. ಇದರಿಂದ ಇಡೀ ದಿನ ಆರ್‌ಟಿಪಿಸಿಆರ್‌, ಲಸಿಕೆ, ಥರ್ಮಲ್‌ ಸ್ಕ್ರೀನಿಂಗ್‌ ಕೂಡ ಮಾಡಲಾಗಲಿಲ್ಲ.

ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿತ್ತು.ಇಬ್ಬರು ಪಿಎಸ್‌ಐ, ನಾಲ್ವರು ಕಾನ್‌ಸ್ಟೆಬಲ್‌ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ತಂಡ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಕೈಗೊಂಡಿತ್ತು.

ಆದರೆ, ಭಾನುವಾರ ಮಾಶಾಳ, ಅರ್ಜುಣಗಿ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಇಲ್ಲದೆ ಸಂಚಾರ ಯಥಾಪ್ರಕಾರ ನಡೆಯಿತು. ಬಳೂರ್ಗಿ ಚೆಕ್‌ಪೋಸ್ಟ್‌ನಲ್ಲಿ ಮಾತ್ರ ಪಿಎಸ್‌ಐ ನಿಯೋಜನೆಗೊಂಡಿದ್ದರಿಂದ ವಾಹನ ತಡೆದು ತಪಾಸಣೆ ನಡೆಸಿದರು.

ಮಾಶಾಳ ಚೆಕ್‌ಪೋಸ್ಟ್‌ನಿಂದ ಮಹಾರಾಷ್ಟ್ರದ ಅಕ್ಕಲಕೋಟ, ನಾಗಣಸೂರ, ತೋಳನೂರ, ದುಧನಿ ಹೀಗೆ ವಿವಿಧ 10 ಕಡೆಗಳಿಮದ ವಾಹನಗಳು ತಾಲ್ಲೂಕಿನ ಗಡಿ ಒಳಗೆ ಬರುತ್ತಿವೆ. ಇಲ್ಲಿದ್ದ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ವಾಹನ ತಪಾಸಣೆಗೆ ಪರದಾಡಬೇಕಾಯಿತು. ಸರ್ಕಾರಿ ಬಸ್‌ ಹೊರತುಪಡಿಸಿ ಕಾರ್‌, ಬೈಕ್‌, ಖಾಸಗಿ ಬಸ್‌, ಟೆಂಪೊ ಸೇರಿದಂತೆ ಎಲ್ಲ ವಾಹನಗಳ ಸಂಚಾರ ಕಂಡುಬಂತು.

ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಕೂಡ ಇರಲಿಲ್ಲ. ಇದರಿಂದ ಯಾರಿಂದಲೂ ಲಸಿಕೆ ಅಥವಾ ಆರ್‌ಟಿಪಿಸಿಆರ್‌ ತಪಾಸಣೆ ಮಾಡಲಿಲ್ಲ.

‘ಚೆಕ್‌ಪೋಸ್ಟ್‌ನಲ್ಲಿ ರಾತ್ರಿ ವೇಳೆಯಲ್ಲಿ ಮಲಗಲು ಸಾಧ್ಯವಾಗುತ್ತಿಲ್ಲ. ಹಳೆಯ ಬಸ್ ಶೆಲ್ಟರ್‌ನಲ್ಲಿ ಚೆಕ್‌ಪೋಸ್ಟ್‌ ಮಾಡಿದ್ದಾರೆ. ಇದರ ಗೋಡೆಗಳೂ ಬಿರುಕು ಬಿಟ್ಟಿವೆ. ಹುಳ– ಹುಪ್ಪಟೆಗಳ ಪೀಡೆ ಹೆಚ್ಚಾಗಿದೆ. ಇಲ್ಲಿ ಪೊಲೀಸರು ಕೆಲಸ ಮಾಡುವುದಾದರೂ ಹೇಗೆ?’ ಎಂದು ಗ್ರಾಮಸ್ಥರು ‘ಪ್ರಜಾವಣಿ’ಗೆ ಪ್ರತಿಕ್ರಿಯಿಸಿದರು.

ಅರ್ಜುಣಗಿ ಚೆಕ್‌ಪೋಸ್ಟ್‌ನಲ್ಲೂ ಬಿಗಿ ಬಂದೋಬಸ್ತ್‌ ಇಲ್ಲದೇ ವಾಹನಗಳು ಗಡಿ ದಾಟಿ ಬಂದವು.

---------

ಅಡ್ಡದಾರಿಯಲ್ಲಿ ನಡೆದು ಬಂದ ಜನ

ಆಳಂದ: ತಾಲ್ಲೂಕಿನ ಖಜೂರಿ, ಹಿರೋಳ್ಳಿ ಚೆಕ್‌ಪೋಸ್ಟ್‌ಗಳಲ್ಲಿ ಭಾನುವಾರ ಕೂಡ ಮಹಾರಾಷ್ಟ್ರದಿಂದ ಬರುವವರಿಗೆ ಆರ್‌ಟಿಪಿಸಿಆರ್‌ ತಪಾಸಣೆ ಮಾಡಲಾಯಿತು. ಆದರೆ, ಬೆಳಿಗ್ಗೆ ಮಹಾರಾಷ್ಟ್ರಕ್ಕೆ ಹೋಗಿ ಮರಳಿ ಬಂದ ಸ್ಥಳೀಯರನ್ನು ಹಾಗೇ ಬಿಡಲಾಯಿತು. ವಾಹನ ಸಂಚಾರ ಕಡಿಮೆಯಾಗಿದ್ದು ಕಂಡಿತು.

ಎರಡೂ ರಾಜ್ಯಗಳ ಸರ್ಕಾರಿ ಬಸ್‌ಗಳು ಗಡಿ ಗ್ರಾಮದವರೆಗೆ ಮಾತ್ರ ಸಂಚರಿಸಿ, ಮರಳುತ್ತಿರುವುದು ಮುಂದುವರಿದಿದೆ.

ಇನ್ನೊಂದೆಡೆ, ಆಳಂದ ಹಾಗೂ ಅಫಜಲಪುರ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಅಡ್ಡದಾರಿಗಳ ಮೂಲಕ ಹಲವಾರು ಜನ ಓಡಾಡುತ್ತಿರುವುದು ಕಂಡುಬಂತು. ಬೆಳಿಗ್ಗೆ ಮಹಾರಾಷ್ಟ್ರಕ್ಕೆ ಹೋಗಿ ಸಂಜೆ ಮರಳುತ್ತಿರುವ ಜನರ ಗುಂಪು ಅಲ್ಲಲ್ಲಿ ಕಂಡುಬಂತು. ಆದರೆ, ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT