ಶುಕ್ರವಾರ, ಆಗಸ್ಟ್ 12, 2022
20 °C
ಶಿವರಾಮ ನಾಯಕ ತಾಂಡಾದ ತೇಜು ನಾಯಕ ಸಾಧನೆ

ಚಿಂಚೋಳಿ: ಬರಡು ಭೂಮಿಯಲ್ಲಿ ಪಪ್ಪಾಯ ಬೆಳೆದ ರೈತ

ಜಗನ್ನಾಥ ಡಿ.ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಶಿವರಾಮ ನಾಯಕ ತಾಂಡಾದ ಯುವ ರೈತ ತೇಜು ನಾಯಕ ಬರಡು ಭೂಮಿಯಲ್ಲಿ ಮಲ್ಚಿಂಗ್ ಪೇಪರ್ ಅಳವಡಿಸಿ ಪಪ್ಪಾಯ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದು ಹೆಕ್ಟೇರ್‌ನಲ್ಲಿ ಪಪ್ಪಾಯ ಬೆಳೆದ ಅವರು 10 ತಿಂಗಳಲ್ಲಿ ₹ 2.5 ಲಕ್ಷ ನಿವ್ವಳ ಆದಾಯ ಗಳಿಸಿದ್ದಾರೆ. ಲಾಕಡೌನ್‌ನಲ್ಲಿ ನಿರ್ವಹಣೆಗೆ ತೊಂದರೆಯಾದರೂ ಕೂಡ 45 ಟನ್ ಪಪ್ಪಾಯ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಇದರೊಂದಿಗೆ 20 ಗುಂಟೆ ಶೇಡ್ ನೆಟ್‌ನಲ್ಲಿ ಟೊಮೆಟೊ ಬೆಳೆದು ಎರಡು ದಿನಕ್ಕೊಮ್ಮೆ ₹10 ಸಾವಿರ ಆದಾಯ ಪಡೆಯುತ್ತಿದ್ದಾರೆ. ಟೊಮೆಟೊ 5 ತಿಂಗಳ ಬೆಳೆಯಾಗಿದ್ದು, ಮೂರು ದಿನಗಳಿಂದ ಹಣ್ಣು ಮಾರಾಟ ಮಾಡಲಾಗುತ್ತಿದೆ. ಆರಂಭದಲ್ಲಿ 2 ದಿನಗಳಲ್ಲಿ 25 ಕ್ಯಾನ್ (7.5 ಕ್ವಿಂಟಲ್) ಇಳುವರಿ ಪಡೆದಿದ್ದಾರೆ. ಸದ್ಯ ಪ್ರತಿ ಕ್ಯಾನ್‌ಗೆ ₹800 ದರ ಲಭಿಸಿದೆ. ಮನ್ನಾಎಖ್ಖೆಳ್ಳಿಯ ವ್ಯಾಪಾರಿ ಬಂದು ತೋಟದಿಂದಲೇ ಹಣ್ಣು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತೇಜುನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪಪ್ಪಾಯ ಬೇಸಾಯಕ್ಕೆ ತೋಟಗಾರಿಕಾ ಇಲಾಖೆ ಕಳೆದ ವರ್ಷ ₹75 ಸಾವಿರ ಪ್ರೋತ್ಸಾಹ ಧನ ನೀಡಿದೆ. ಟೊಮೆಟೊ ಬೇಸಾಯಕ್ಕೆ ಶೇಡ್‌ನೆಟ್ ಸ್ಥಾಪನೆಗೆ ತೋಟಗಾರಿಕೆ ಇಲಾಖೆಗೆ ರೈತರ ವಂತಿಗೆಯಾಗಿ ₹1 ಲಕ್ಷ ಕಟ್ಟಿದ್ದೇನೆ. ಇಲಾಖೆಯವರು ನನಗೆ 20 ಗುಂಟೆ ವಿಸ್ತಾರದ ಶೇಡ್‌ನೆಟ್ ನಿರ್ಮಿಸಿಕೊಟ್ಟಿದ್ದಾರೆ. ಇದರಿಂದ ಆದಾಯ ಆರಂಭವಾಗಿದ್ದು ಖುಷಿ ತಂದಿದೆ ಎಂದರು.

ತೇಜುನಾಯಕ ಅವರ ಜಮೀನು ಕಲ್ಲುಗಳಿಂದ ಕೂಡಿದ ಜಮೀನಾಗಿದೆ. ಇಲ್ಲಿ ಗುರೆಳ್ಳೂ ಬೆಳೆಯುತ್ತಿರಲಿಲ್ಲ. ಹೀಗಾಗಿ ಬೀಳು ಹಾಕಿದ್ದರು.

ನಾನು ಹೊಲಕ್ಕೆ ಈರುಳ್ಳಿ ಬೆಳೆಗೆ ರೋಗ ತಪಾಸಣೆಗೆ ಹೋದಾಗ ಬೀಳು ಭೂಮಿ ನೋಡಿ ಸಲಹೆ ಕೊಟ್ಟಿದ್ದೇನೆ. ಅದರಂತೆ ರೈತ ಶ್ರಮಪಟ್ಟು ಬರಡು ಭೂಮಿ ಉಳುಮೆ ಮಾಡಿ ಹದಗೊಳಿಸಿ ಪಪ್ಪಾಯ ಹಾಗೂ ಟೊಮೆಟೊ ಬೆಳೆದಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಬರಡು ಭೂಮಿಯಿಂದಲೇ ಆದಾಯ ಪಡೆದದ್ದು ಮಾದರಿಯಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಜೀಮುದ್ದಿನ್.

ಪಪ್ಪಾಯದಿಂದ ಈಗಾಗಲೇ ಆದಾಯ ಪಡೆದಿದ್ದು, ಸದ್ಯ ಟೊಮೆಟೊದಿಂದ ಆದಾಯ ಪ್ರಾರಂಭವಾಗಿದೆ. ಇದು ಮೂರು ತಿಂಗಳು ಮುಂದುವರಿಯಲಿದೆ. ನಿರೀಕ್ಷೆಯಂತೆ ಉತ್ತಮ ಇಳುವರಿ ಬಂದರೆ ₹5 ಲಕ್ಷ ಆದಾಯ ಬರಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು