ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಅಲಂಕಾರ!

Last Updated 27 ಅಕ್ಟೋಬರ್ 2020, 13:48 IST
ಅಕ್ಷರ ಗಾತ್ರ

ಚಿತ್ತಾಪುರ: ಸೀಗಿಹುಣ್ಣಿಮೆ (ಅ. 31) ದಿನ ನಡೆಯುತ್ತಿದ್ದ ಇಲ್ಲಿನ ಐತಿಹಾಸಿಕ ನಾಗಾವಿಯ ಯಲ್ಲಮ್ಮ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವವನ್ನು, ಕೊರೊನಾ ವೈರಾಣು ಕಾರಣ ರದ್ದು ಮಾಡಲಾಗಿದೆ.

ಜಾತ್ರೆಯ ಸಂಪ್ರದಾಯದಂತೆ ದೇವಸ್ಥಾನದ ಸ್ವಚ್ಛತೆ, ಸುಣ್ಣಬಣ್ಣ ಅಲಂಕಾರ ಕೆಲಸ ಭರದಿಂದ ನಡೆಯುತ್ತಿದೆ. ದೇವಿಯ ಗರ್ಭಗುಡಿ ಒಳಗಿರುವ ಅನಗತ್ಯ ವಸ್ತುಗಳು ತೆರವು ಮಾಡಲಾಗಿದೆ. ದೇವಿಯ ಮೂರ್ತಿಗೆ ನೇರವಾಗಿ ಸೂರ್ಯ ಕಿರಣಗಳು ಬೀಳುವಂತೆ ನಿರ್ಮಿಸಿದ್ದ ಕಿಟಕಿಯಲ್ಲಿ ಅರ್ಚಕರು ವಸ್ತುಗಳನ್ನು ಇಟ್ಟು ಮುಚ್ಚಿದ್ದರು. ಅದನ್ನು ತೆರವು ಮಾಡಿ ಗರ್ಭಗುಡಿಯೊಳಗೆ ಸೂರ್ಯಕಿರಣ ಮತ್ತು ನೈಸರ್ಗಿಕ ಬೆಳಕು ಹರಡುವಂತೆ ಮಾಡಿರುವುದು ಭಕ್ತರಿಗೆ ಸಂತೋಷವುಂಟು ಮಾಡಿದೆ. ಗರ್ಭಗುಡಿಗೆ ಹೊಂದಿಕೊಂಡು ನೈಋತ್ಯ ಮೂಲೆಯಲ್ಲಿ ಇರುವ ತೀರ್ಥಕುಂಡದ ಸ್ವಚ್ಛತೆ ಮಾಡಲಾಗಿದೆ.

ಭಕ್ತರು ಊಟ ಮಾಡಿದ, ಕಾಯಿಕರ್ಪೂರ ಅರ್ಪಿಸಿದ ಅನಗತ್ಯ ತ್ಯಾಜ್ಯವನ್ನು ತೀರ್ಥಕುಂಡದಿಂದ ಹರಿಯುವ ನೀರಿನಲ್ಲಿ ಹಾಕದಂತೆ ಕ್ರಮ ಕೈಗೊಳ್ಳಲಾಗಿದೆ. ದೇವಿಯ ಗರ್ಭಗುಡಿಯ ಆವರಣದ ಪಶ್ಚಿಮಕ್ಕೆ ಇರುವ ಚಿಕ್ಕದಾದ ತಿರುಪತಿ ವೆಂಕಟೇಶ್ವರ, ವಿಘ್ನೇಶ್ವರ ಮತ್ತು ಈಶ್ವರ ಗುಡಿಗಳ ಸ್ವಚ್ಛತೆ ಭಕ್ತಜನರ ಗಮನ ಸೆಳೆಯುತ್ತಿದೆ. ದೇವಿಯ ದರ್ಶನಕ್ಕೆಂದು ಬರುತ್ತಿದ್ದ ಭಕ್ತರು ಈ ಗುಡಿಗಳಲ್ಲಿ ತಂಗಿಕೊಂಡು ಊಟ ಮಾಡಿ ಪರಿಸರ ಹಾಳು ಮಾಡುತ್ತಿದ್ದರು.

ಗುಡಿಯೊಳಗೆ ಬೇಡದ ವಸ್ತುಗಳು ಎಸೆದು ಹೋಗುತ್ತಿದ್ದರು. ಈಗ ಮೂರು ಗುಡಿಗಳು ಸ್ವಚ್ಛಗೊಂಡು ಸುಣ್ಣ ಬಣ್ಣದಿಂದ ಕಂಗೊಳಿಸುತ್ತಿವೆ. ದೇವಸ್ಥಾನ ಆವರಣದ ವಾಯವ್ಯ ಮೂಲೆಯಲ್ಲಿ ಇರುವ ದತ್ತಾತ್ರೇಯ ಗುಡಿಯಲ್ಲಿ ವಿವಿಧ ಬಗೆಯ ತ್ಯಾಜ್ಯ ಮತ್ತು ಕಸಕಡ್ಡಿ ತುಂಬಿತ್ತು. ಇಲ್ಲೊಂದು ಗುಡಿ ಇದೆ ಎಂದು ಬಹುತೇಕ ಭಕ್ತರಿಗೆ ಕಾಣುತ್ತಿರಲಿಲ್ಲ. ಈಗ ಗುಡಿ ಸ್ವಚ್ಛತೆ ಮಾಡಿಸಿ ಸುಣ್ಣ ಬಣ್ಣ ಮಾಡಲಾಗಿದೆ.

ಒಳಗೆ ಶಿಲೆಯಿಂದ ನಿರ್ಮಿಸಿದ ದತ್ತಾತ್ರೇಯ ಮೂರ್ತಿಯಿದೆ. ಹಿಂದೆ ದೇವಿಯ ದರ್ಶನಕ್ಕೆಂದು ದೇವಸ್ಥಾನಕ್ಕೆ ಬಂದಿದ್ದ ಹೈಕೋರ್ಟ್ ನ್ಯಾಯಮೂರ್ತಿ ಸಂಜುಕುಮಾರ ಹಂಚಾಟೆ ಅವರು ದತ್ತಾತ್ರೇಯ ಗುಡಿ ಬಗ್ಗೆ ಗಮನ ಸೆಳೆದು ಪುರಾತನ ಗುಡಿ ಇದು ಎಂದು ತಿಳಿಸಿದ್ದರು. ಗುಡಿಯ ಸ್ವಚ್ಛತೆಗೆ ಗಮನ ಹರಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಕಂದಾಯ ನಿರೀಕ್ಷಕ ದಶರಥ ಮಂತಟ್ಟಿ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ಪೂಜೆ, ಆರಾಧನೆ, ಉತ್ಸವ ಕಾರ್ಯಕ್ರಮ ಸರಳ ರೀತಿಯಲ್ಲಿ ನಡೆಯಲಿವೆ. ಪ್ರತಿ ವರ್ಷದಂತೆ ಆನಂದ ಪೇಂಟರ್ ಅವರು ಇತರರೊಂದಿಗೆ ಸ್ವಯಂಸೇವೆಯಾಗಿ ದೇವಸ್ಥಾನದ ಹೊರಾಂಗಣದಲ್ಲಿ ನಾಮಫಲಕ ಬರೆಯುವ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನದ ಸುತ್ತಲಿನ ಪರಿಸರದ ಸ್ವಚ್ಛತೆ ಭರದಿಂದ ನಡೆಯುತ್ತಿದೆ. ಈ ಮುಂಚೆ ಭಕ್ತರು ಬಂದು ಅಡುಗೆ ಮಾಡುತ್ತಿದ್ದ ಸ್ಥಳದ ಸ್ವಚ್ಛ ಮಾಡಲಾಗಿದೆ.

ದ್ವಾರಬಾಗಿಲದ ಎಡ ಮತ್ತು ಬಲದಲ್ಲಿ ಇರುವ ಎರಡು ತೆರೆದ ಬಾವಿಗಳ ಸುತ್ತಲಿನ ಪರಿಸರ ಶುದ್ಧಗೊಳಿಸಲಾಗಿದೆ. ಕೊರೊನಾ ವೈರಸ್ ನಿಮಿತ್ತ ಬಾವಿಯಲ್ಲಿ ಸ್ನಾನ ಮಾಡುವುದು ದೇವಸ್ಥಾನದ ಸಮಿತಿ ನಿಷೇಧಿಸಿದೆ. ದೇವಿಯ ಜಾತ್ರೆ, ಪಲ್ಲಕ್ಕಿ ಉತ್ಸವ ರದ್ದು ಮಾಡಿದರೂ ದೇವಸ್ಥಾನದ ಸ್ವಚ್ಛತೆ ಭಕ್ತರಿಗೆ ಹರ್ಷವುಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT