ಬುಧವಾರ, ಆಗಸ್ಟ್ 10, 2022
25 °C
ಆರ್‌.ಡಿ. ಪಾಟೀಲ ಸಹಕಾರ; ಬ್ಲೂಟೂತ್ ಬಳಸಿ ಪಾಸಾಗಲು ₹ 25 ಲಕ್ಷಕ್ಕೆ ಡೀಲ್ ಮಾಡಿಕೊಂಡ ಮಾಜಿ ಸೈನಿಕ

ಪಿಎಸ್‌ಐ ಪರೀಕ್ಷೆ: ಪ್ರಥಮ ರ‍್ಯಾಂಕ್ ಗಳಿಸಿದ್ದ ಮಾನೆ ಈಗ ಸಿಐಡಿ ಅತಿಥಿ!

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಪಿಎಸ್‌ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲ ಪತ್ರಿಕೆಯ 50 ಅಂಕಗಳ ಪೈಕಿ ಕೇವಲ 13 ಅಂಕ ಪಡೆದಿದ್ದ ಮಾಜಿ ಸೈನಿಕ ವಿಶ್ವನಾಥ ಮಾನೆ (38), ಎರಡನೇ ಪತ್ರಿಕೆಯಲ್ಲಿ ಮಾತ್ರ ಯಾರೂ ಊಹಿಸದಷ್ಟು ಭಾರಿ ಪ್ರಮಾಣದ ಅಂದರೆ 150 ಅಂಕಗಳಿಗೆ 131 ಅಂಕ ಪಡೆದು ಆಯ್ಕೆಯಾದ ಸಂಗತಿಯೇ ಸಿಐಡಿ ಅಧಿಕಾರಿಗಳಿಗೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ!

ಕಲಬುರಗಿಯ ನೊಬೆಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗಿದ್ದ ವಿಶ್ವನಾಥ ಮಾನೆ ಬ್ಲೂಟೂತ್ ಉಪಕರಣ ಬಳಸಿ ಎರಡನೇ ಪತ್ರಿಕೆಯನ್ನು ಅತ್ಯುತ್ತಮವಾಗಿ ಬರೆದು ಇಡೀ ರಾಜ್ಯಕ್ಕೇ ಮಾಜಿ ಸೈನಿಕರ ಕೋಟಾದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ.‌ ಎರಡೂ ಉತ್ತರ ಪತ್ರಿಕೆಗಳನ್ನು ತಾಳೆ ಹಾಕಿ ನೋಡಿದ ಸಿಐಡಿ ಅಧಿಕಾರಿಗಳು ಮೊದಲ ಪತ್ರಿಕೆಯಲ್ಲಿ ಅತಿ ಕಡಿಮೆ ಅಂಕ ಪಡೆದು, ಎರಡನೇ ಪತ್ರಿಕೆಯಲ್ಲಿ 131 ಅಂಕ ಪಡೆಯಲು ಹೇಗೆ ಸಾಧ್ಯ ಎಂಬ ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ, ವಿಶ್ವನಾಥ ಮಾನೆ ಬೆನ್ನು ಬಿದ್ದಿದ್ದ ಅಧಿಕಾರಿಗಳು ಸೋಮವಾರ ಕಲಬುರಗಿಯ ಅಗ್ನಿಶಾಮಕ ದಳದ ಆವರಣದಲ್ಲಿ ಬಂಧಿಸಿದರು.

ಸೇನೆಯಲ್ಲಿ 17 ವರ್ಷ ಸೇವೆ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದ ನಿವಾಸಿ ವಿಶ್ವನಾಥ ಮಾನೆ ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದ. ಜಮ್ಮು ಮತ್ತು ಕಾಶ್ಮೀರ ಲೇಹ್, ಲಡಾಕ್ ಸೇರಿದಂತೆ ಹಲವು ಸೂಕ್ಷ್ಮ ಸ್ಥಳಗಳಲ್ಲಿ ಸೇನಾ ವಾಹನಗಳ ಚಾಲಕನಾಗಿ ಕೆಲಸ ಮಾಡಿದ್ದ. 2020ರಲ್ಲಿ ಸೇನೆಯಿಂದ ನಿವೃತ್ತಿ ಪಡೆದಿದ್ದ ವಿಶ್ವನಾಥ 2021ರಲ್ಲಿ ಕಲಬುರಗಿಯ ರಾಜ್ಯ ವಿಪತ್ತು ನಿರ್ವಹಣಾ ಪಡೆಯಲ್ಲಿ (ಎಸ್‌ಡಿಆರ್‌ಎಫ್‌) ಎಎಸ್‌ಐ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ.

‘ಹೇಗಾದರೂ ಮಾಡಿ ಪಿಎಸ್‌ಐ ಹುದ್ದೆ ಪಡೆಯಬೇಕು ಎಂದು ಬಯಸಿದ್ದ ವಿಶ್ವನಾಥ ಆರ್‌.ಡಿ. ಪಾಟೀಲ ‘ಕೈಚಳಕ’ದ ಬಗ್ಗೆ ಮಾಹಿತಿ ಪಡೆದಿದ್ದ. ಪರೀಕ್ಷೆಗೂ ಮುನ್ನ ಆರ್‌.ಡಿ. ಪಾಟೀಲ ಭೇಟಿ ಮಾಡಿ ಪರೀಕ್ಷೆಯಲ್ಲಿ ಪಾಸು ಮಾಡಿಸಲು ಡೀಲ್ ಕುದುರಿಸಿಕೊಂಡಿದ್ದ. ಇದಕ್ಕಾಗಿ ₹ 25 ಲಕ್ಷ ಹಣವನ್ನು ಸಂದಾಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ‌’ ಎಂದು ಮೂಲಗಳು ತಿಳಿಸಿವೆ. 

ಪೈಪೋಟಿ ಕಡಿಮೆ: ಮಾಜಿ ಸೈನಿಕ ಕೋಟಾದಲ್ಲಿ ಸಾಮಾನ್ಯ ವರ್ಗದಲ್ಲಿರುವಷ್ಟು ಪೈಪೋಟಿ ಇರುವುದಿಲ್ಲ. ಹೀಗಾಗಿ, 131ಕ್ಕಿಂತ ಸುಮಾರು 15ರಿಂದ 20 ಅಂಕ ಕಡಿಮೆ ಪಡೆದರೂ ನಿರಾಯಾಸವಾಗಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗುತ್ತಿದ್ದ. ಆದರೆ, ದುರಾಸೆಗೆ ಬಿದ್ದ ವಿಶ್ವನಾಥ ಮಾನೆ ಇದೀಗ ಸಿಐಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆ.

ಹಲವು ದಿನಗಳಿಂದ ಬೆನ್ನುಬಿದ್ದಿದ್ದ ಸಿಐಡಿ

ಪಿಎಸ್‌ಐ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಆಳವಾಗಿ ಅಧ್ಯಯನ ನಡೆಸಿದ್ದ ಸಿಐಡಿ ಅಧಿಕಾರಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದ್ದರು. ಅದರ ಭಾಗವಾಗಿಯೇ ಮಾಜಿ ಸೈನಿಕರ ಕೋಟಾದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದ ವಿಶ್ವನಾಥ ಮಾನೆ ಹಿನ್ನೆಲೆ ಜಾಲಾಡಿದ್ದರು. ಆದರೂ, ಯಾವುದೇ ಗುಮಾನಿ ಬರದಂತೆ ವರ್ತಿಸಿದ್ದರು.

ಸಮಗ್ರ ಮಾಹಿತಿ ಸಂಗ್ರಹಿಸಿದ ಬಳಿಕ ಸಿಐಡಿ ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ, ವೀರೇಂದ್ರ ಕುಮಾರ್, ಪ್ರಕಾಶ್ ರಾಠೋಡ, ಎಎಸ್‌ಐ ಕುಮಾರವ್ಯಾಸ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು