ಶುಕ್ರವಾರ, ನವೆಂಬರ್ 27, 2020
20 °C
ಆರ್ಥಿಕ ನಷ್ಟದಿಂದ ಸಂಕಷ್ಟದಲ್ಲಿ ಸಿಲುಕಿದ ಬದುಕು

ಕಲಬುರ್ಗಿ | ಲಾಕ್‌ಡೌನ್‌ ಜಾರಿ: ದಿಕ್ಕು ತೋಚದ ಸ್ಥಿತಿಯಲ್ಲಿ ಸರ್ಕಸ್ ಕಲಾವಿದರು

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮೈನವಿರೇಳಿಸುವಂತಹ ವೈವಿಧ್ಯಮಯ ಕಸರತ್ತು ಪ್ರದರ್ಶಿಸುತ್ತ ಊರಿನಿಂದ ಊರಿಗೆ ಸಂಚರಿಸುತ್ತಿದ್ದ ಸರ್ಕಸ್‌ ಕಲಾವಿದರನ್ನು ಲಾಕ್‌ಡೌನ್‌ ಒಂದೂವರೆ ತಿಂಗಳಿನಿಂದ ಒಂದೇ ಸ್ಥಳದಲ್ಲಿ ಯಾವುದೇ ಚಟುವಟಿಕೆಯಿಲ್ಲದೇ ಬಂಧಿಸಿಟ್ಟಿದೆ.

ಶರಣಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ಸರ್ಕಸ್ ಪ್ರದರ್ಶಿಸಲು ಮಾರ್ಚ್‌ ಮೊದಲ ವಾರದಲ್ಲಿ ಆಂಧ್ರಪ್ರದೇಶದ ವಿಜಯವಾಡದಿಂದ ಬಂದ ಜಮುನಾ ಸರ್ಕಸ್ ಕಲಾವಿದರು ಮುಂದಿನ ಊರಿಗೆ ಹೋಗಲಾಗದೇ ಮತ್ತು ಇದ್ದ ಸ್ಥಳದಲ್ಲಿ ಸರ್ಕಸ್‌ ಪ್ರದರ್ಶಿಸಲಾಗದೇ ಅತಂತ್ರರಾಗಿದ್ದಾರೆ.

ಜಮುನಾ ಸರ್ಕಸ್‌ನಲ್ಲಿ 100ಕ್ಕೂ ಹೆಚ್ಚು ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ಸದ್ಯ ಕಲಬುರ್ಗಿಯ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ 40ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ.

‘ಉತ್ತಮ ಪ್ರದರ್ಶನ ಮತ್ತು ಆದಾಯದ ನಿರೀಕ್ಷೆಯಲ್ಲಿ ಕಲಬುರ್ಗಿಗೆ ಬಂದ ನಾವು ಮಾರ್ಚ್‌ 12 ಮತ್ತು 13ರಂದು ಎರಡು ದಿನ ಪ್ರದರ್ಶನ ನೀಡಿದೆವು. ಆದರೆ, ನಿಷೇಧಾಜ್ಞೆ ಜಾರಿಯಾದ್ದರಿಂದ ಪ್ರದರ್ಶನ ಸ್ಥಗಿತಗೊಳಿಸಬೇಕಾಯಿತು. ಆಗ 50 ಮಂದಿ ಕಲಾವಿದರು ಮತ್ತು ತಂತ್ರಜ್ಞರು ತಮ್ಮೂರಿಗೆ ತೆರಳಿದರು. ನಾವು ಎಲ್ಲಿಯೂ ಹೋಗಲಾಗದೇ ಇಲ್ಲಿಯೇ ಉಳಿದೆವು’ ಎಂದು ಈ ಕಂಪನಿಯ ಮಾಲೀಕ ಚರಣಜೀತ್ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವೆಲ್ಲರೂ ಒಮ್ಮೆಲೇ ಎಲ್ಲಿಗೂ ಹೋಗಲು ಆಗುವುದಿಲ್ಲ. ಒಂದು ವೇಳೆ ಹೊರಟು ನಿಂತರೆ, 18 ಲಾರಿಗಳಲ್ಲಿ ಸರಕುಗಳನ್ನು ತುಂಬಿಕೊಳ್ಳಬೇಕು. ಗಿಳಿ, ಮೊಲ, ಒಂಟೆ, ಕುದುರೆ ಮುಂತಾದವುಗಳನ್ನು ಜೊತೆಗೆ ಒಯ್ಯಬೇಕು. ನಾವು ಹೊರಡುವ ಊರಿನಲ್ಲಿ ಉಳಿಯಲು ಮತ್ತು ಸರ್ಕಸ್ ಪ್ರದರ್ಶಿಸಲು ಜಾಗ ನಿಗದಿ ಪಡಿಸಿಕೊಳ್ಳಬೇಕು. ಅದಕ್ಕಾಗಿ ಅನುಮತಿ ಪಡೆಯಬೇಕು. ಲಾಕ್‌ಡೌನ್‌ನಲ್ಲಿ ಇದ್ಯಾವುದೂ ಸಾಧ್ಯವಾಗದ ಕಾರಣ ಇಲ್ಲೇ ಇದ್ದೇವೆ’ ಎಂದು ವಿವರಿಸಿದರು.

ಪಶ್ಚಿಮ ಬಂಗಾಳ, ಒಡಿಶಾ, ಮಣಿಪುರ, ಪಂಜಾಬ್, ಮಹಾರಾಷ್ಟ್ರದ ಕಲಾವಿದರು ಮತ್ತು ತಂತ್ರಜ್ಞರು ಇಲ್ಲೇ ಉಳಿದಿದ್ದು ಭವಿಷ್ಯದ ಬಗ್ಗೆ ಅವರಲ್ಲಿ ಆತಂಕ ಕಾಡುತ್ತಿದೆ. 

‘35 ವರ್ಷಗಳಿಂದ ಜಮುನಾ ಸರ್ಕಸ್‌ನಲ್ಲಿ ದುಡಿಯುತ್ತಿರುವ ನನಗೆ ಬೇರೆ ಕೆಲಸ ಗೊತ್ತಿಲ್ಲ. ಇಷ್ಟು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿ ಯಾವುದೇ ಪ್ರದರ್ಶನ ತೋರಲಾಗದೇ ಖಾಲಿ ಕೂತಿದ್ದೇವೆ. ಕೊರೊನಾದಿಂದ ಉಂಟಾಗಿರುವ ಆತಂಕದ ಪರಿಸ್ಥಿತಿ ನಿವಾರಣೆಯಾದರೆ ಮಾತ್ರ ಸರ್ಕಸ್ ಉದ್ಯಮ ಸೇರಿದಂತೆ ಎಲ್ಲರೂ ಬದುಕಲು ಸಾಧ್ಯ. ಇಲ್ಲದಿದ್ದರೆ, ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತೇವೆ’ ಎಂದು ಪಶ್ಚಿಮ ಬಂಗಾಳದ ಶಂಕರದೇವ್ ಕಳವಳ ವ್ಯಕ್ತಪಡಿಸಿದರು.

ಲಾಕ್‌ಡೌನ್‌ ಜಾರಿಯಾಗದೇ ಎಲ್ಲವೂ ಅಂದಕೊಂಡಂತೆ ನೆರವೇರಿದ್ದರೆ ಏಪ್ರಿಲ್‌ ಕೊನೆ ವಾರ ಜಮುನಾ ಸರ್ಕಸ್‌ನವರು ರಾಯಚೂರಿನಲ್ಲಿ ಪ್ರದರ್ಶನ ನೀಡಬೇಕಿತ್ತು. ನಂತರ ಬೆಳಗಾವಿ ಜಿಲ್ಲೆಯ ಗೋಕಾಕ್‌ಗೆ ಪ್ರಯಾಣ ಬೆಳೆಸಬೇಕಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು