ಭಾನುವಾರ, ಜನವರಿ 19, 2020
28 °C
ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ, ಗುಲಬರ್ಗಾ ವಿ.ವಿ. ವಿದ್ಯಾರ್ಥಿಗಳಿಂದ ಪ್ರತಿಭಟನೆ

ಪೌರತ್ವ (ತಿದ್ದುಪಡಿ) ಕಾಯ್ದೆ: ತಣಿಯದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಬುಧವಾರವೂ ನಗರದಲ್ಲಿ ಎರಡು ಪ್ರಮುಖ ಪ್ರತಿಭಟನೆಗಳು ನಡೆದವು.

ಸಂವಿಧಾನದ ಸಮಾನತೆ, ಜಾತ್ಯತೀತ ತತ್ವಗಳಿಗೆ ವಿರುದ್ಧವಾದ ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್ಐ) ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕುಲಪತಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.‌

ಸಿಎಫ್‌ಐ: ನಗರದ ವಿವಿಧ ಕಾಲೇಜುಗಳಿಂದ ಬಂದಿದ್ದ ಮುಸ್ಲಿಂ ಸಮುದಾಯದ ಸಾವಿರಾರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಕಾಯ್ದೆಯನ್ನು ವಿರೋಧಿಸಿದರು. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯವನ್ನೂ ಇದೇ ಸಂದರ್ಭದಲ್ಲಿ ಖಂಡಿಸಿದರು.

ಪೊಲೀಸರೊಂದಿಗೆ ವಾಗ್ವಾದ: ಪ್ರತಿಭಟನೆ ನಡೆಸಿ ತೆರಳುತ್ತಿದ್ದ ಸಂದರ್ಭದಲ್ಲಿ ಫಲಕಗಳನ್ನು ಎತ್ತಿ ಹಿಡಿಯಬಾರದು ಎಂದು ಸ್ಟೇಶನ್‌ ಬಜಾರ್‌ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಘಟನೆಯ ಮುಖಂಡರಿಗೆ ತಾಕೀತು ಮಾಡಿದರು. ಇದರಿಂದ ಕೆಲಹೊತ್ತು ವಾಗ್ವಾದ ನಡೆಯಿತು. ಮೊದಲು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಗಡೆ ಹೋಗುವಂತೆ ಸೂಚಿಸಲಾಯಿತು. ನಂತರ ವಿದ್ಯಾರ್ಥಿನಿಯರನ್ನು ಕಳಿಸಲಾಯಿತು. ಪ್ರತಿಭಟನೆ ಬಳಿಕ ಯಾವುದೇ ಘೋಷಣೆ ಕೂಗದಂತೆ, ಮೆರವಣಿಗೆ ನಡೆಸಬಾರದು ಎಂದೂ ಪೊಲೀಸರು ಸೂಚಿಸಿದರು.

ಕ್ಯಾಂಪಸ್ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಮುಖಂಡರಾದ ಡಾ.ಮೊಹಮ್ಮದ್‌ ಸಮಾಮಾ, ಶೇಖ್‌ ಜಯೀಮ್‌, ಅದ್ನಾನ್‌, ಅಲಿಂ ಇಲಾಹಿ, ಮುಬೀನ್‌, ಶಿವುಪ್ರಕಾಶ, ಉಮರ್‌ ಜುನೇದಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.‌

ಗುವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘ: ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾಯ್ದೆಗಳನ್ನು ವಿರೋಧಿಸಿ ಗುಲಬರ್ಗಾ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ವಿ.ವಿ. ಕಾರ್ಯಸೌಧದ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕೇಂದ್ರದ ಬಿಜೆಪಿ ಸರ್ಕಾರವು ಭಾರತವನ್ನು ಹಿಂದುತ್ವದ ದೇಶವನ್ನಾಗಿ ಮಾಡಲು ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತ ಮುಸ್ಲಿಮರು, ಜೈನ, ಸಿಖ್, ಬುದ್ಧ, ಪಾರ್ಸಿಗಳನ್ನು ಧರ್ಮದ ನೆಲೆಯಲ್ಲಿ ವಿಂಗಡಿಸಲು ಸಂಸತ್ತಿನಲ್ಲಿ ಕಾಯ್ದೆ ರೂಪಿಸಿ ಏಕ ಸಂಸ್ಕೃತಿಕ ಚಕ್ರಾಧಿಪತ್ರ ನಡೆಸಲು ಕುರುಡು ಹೆಜ್ಜೆ ಇಡುತ್ತಿದೆ. ಇದು ಸಂವಿಧಾನದ ಜಾತ್ಯತೀತ ನಿಲುವು ಮತ್ತು ಬಹುಸಂಸ್ಕೃತಿಯ ಹಕ್ಕುಗಳಿಗೆ ವಿರುದ್ಧವಾದ, ಅಸಾಂವಿಧಾನಿಕ ಕಾನೂನುಗಳ ಮೂಲಕ ಜನರ ಬದುಕನ್ನು ಕಿತ್ತುಕೊಳ್ಳಲು ಹೊರಟಿದೆ ಎಂದು ಟೀಕಿಸಿದರು.

ಒಕ್ಕೂಟದ ಅಧ್ಯಕ್ಷ ಬಾಬುರಾವ್‌ ಎಸ್‌.ಬೀಳಗೆ, ಉಪಾಧ್ಯಕ್ಷ ಕೆ.ಮಹೇಶ್‌, ಪ್ರಧಾನ ಕಾರ್ಯದರ್ಶಿಗಳಾದ ಚಿರಂಜೀವಿ ಬಬಲಾದಕರ, ಉಮೇಶ ಎಸ್‌.ವಾಲೀಕಾರ, ಜಂಟಿ ಕಾರ್ಯದರ್ಶಿಗಳಾದ ಸುಹಾಸ್‌ ಸೂರ್ಯನವರ, ಆಕಾಶ ಮೇಟಿ, ಖಜಾಂಚಿ ಆಕಾಶ್‌ ಕೆ.ಕಾಂಬಳೆ, ಸಂಘಟನಾ ಕಾರ್ಯದರ್ಶಿ ಮರೆಪ್ಪ ತಳಕೇರಿ, ಆಕಾಶ್‌ ಸಿಂಗೇಕರ್‌, ಮಹಿಳಾ ಹೋರಾಟಗಾರ್ತಿ ಕೆ.ನೀಲಾ, ಲವಿತ್ರ ವಸ್ತ್ರದ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು