ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮಿಶ್ರ ಸರ್ಕಾರದಿಂದಲೇ ಜೆಡಿಎಸ್‌ಗೆ ಪೆಟ್ಟು: ವೈಎಸ್‌ವಿ ದತ್ತ

Last Updated 27 ಅಕ್ಟೋಬರ್ 2020, 16:07 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಮ್ಮಿಶ್ರ ಸರ್ಕಾರಗಳನ್ನು ರಚನೆ ಮಾಡಿದ್ದರಿಂದಲೇ ಜೆಡಿಸ್‌ ಪಕ್ಷ ದೊಡ್ಡ ಪೆಟ್ಟು ತಿಂದಿದೆ. ಕಾಂಗ್ರೆಸ್‌, ಬಿಜೆಪಿ ವ್ಯವಸ್ಥಿತವಾಗಿ ಜೆಡಿಎಸ್‌ ಅನ್ನು ತುಳಿದಿವೆ’ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತ ಆತ್ಮವಿಮರ್ಶೆ ಮಾಡಿಕೊಂಡರು.

‘ಸಮ್ಮಿಶ್ರ ಸರ್ಕಾರದ ಹೆಸರಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ಜತೆಗೆ ಹೋಗಿದ್ದೇ ತಪ್ಪು. ಸಮ್ಮಿಶ್ರ ಸರ್ಕಾರಗಳಿಂದ ಜೆಡಿಎಸ್‌ಗೆ ದೊಡ್ಡ ಹೊಡೆತ ಬಿತ್ತು. ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡಿವೆ. ಬಿಜೆಪಿ ಜತೆ ಸೇರಿ 20 ತಿಂಗಳು ಮತ್ತು ಕಾಂಗ್ರೆಸ್‌ ಜತೆಗಿನ 10 ತಿಂಗಳು ಸರ್ಕಾರ ನಡೆಸಿದ್ದು ಎರಡೂ ತಪ್ಪು ನಿರ್ಣಯಗಳು. ಇದಕ್ಕೂ ಮುನ್ನ ನಮ್ಮ ಪಕ್ಷ ಬಲಿಷ್ಠವಾಗಿತ್ತು. ಸಮ್ಮಿಶ್ರ ಸರ್ಕಾರಗಳಿಂದಾಗಿಯೇ ಹಾಳಾಯಿತು’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೂಡ ನಮ್ಮ ಪಕ್ಷ ಪ್ರಬಲವಾಗಿತ್ತು. ಸಮ್ಮಿಶ್ರ ಸರ್ಕಾರಗಳ ರಚನೆಗೆ ಕೈ ಹಾಕದಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಎಷ್ಟೇ ಸ್ಥಾನಗಳನ್ನು ಗೆದ್ದರೂ ಪ್ರತಿ ಪಕ್ಷವಾಗಿ ಹೋರಾಟ ಮಾಡಬಹುದಾಗಿತ್ತು’ ಎಂದರು.

‘ಈ ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಇದಕ್ಕಾಗಿ ಯುವಕರ ಪಡೆ ಕಟ್ಟಲಾಗುತ್ತಿದೆ. ಮೇಲಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಕೆಗೆ ಒತ್ತು ಕೊಡಲಾಗುತ್ತಿದೆ’ ಎಂದರು.

ಹೊರ ಗುತ್ತಿಗೆ ನೌಕರರ ಸೇವಾ ಭದ್ರತೆಗೆ ಶ್ರಮ: ‘ಇಂಧನ ಇಲಾಖೆಯಲ್ಲಿ 20 ವರ್ಷಗಳಿಂದ ದುಡಿಯುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಇಲ್ಲ. ಹೀಗಾಗಿ ಆ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕೋರಿದ್ದಾರೆ’ ಎಂದು ದತ್ತ ತಿಳಿಸಿದರು.

‘ಜೆಸ್ಕಾಂ, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಎಲ್ಲ ವಿದ್ಯುತ್ ಕಂಪನಿಗಳಿಂದ ಗುತ್ತಿಗೆ ನೌಕರರ ಮಾಹಿತಿ ಕೋರಲಾಗಿದೆ. ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳು ಇಂಧನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಜೆಸ್ಕಾಂ ಸೇರಿ ಕೆಲವರು ಕೊಟ್ಟಿಲ್ಲ. ಹೀಗಾಗಿ ಖುದ್ದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ, ಮಾಹಿತಿ ಸಂಗ್ರಹಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT