ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಿ: ಅಫಜಲಪುರ ಶಾಸಕ ಎಂ.ವೈ. ಪಾಟೀಲ

ಶಾಸಕ ಎಂ.ವೈ. ಪಾಟೀಲ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ
Last Updated 31 ಡಿಸೆಂಬರ್ 2021, 6:10 IST
ಅಕ್ಷರ ಗಾತ್ರ

ಕಲಬುರಗಿ: ಪಂಚಾಯತ್‌ರಾಜ್ ಎಂಜಿನಿಯರಿಂಗ್, ಸಮಾಜ ಕಲ್ಯಾಣ ಇಲಾಖೆ, ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ, ಕೆಕೆಆರ್‌ಡಿಬಿ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವಿಳಂಬ ಮಾಡದೇ ತಕ್ಷಣ ಪೂರ್ಣಗೊಳಿಸಬೇಕು ಎಂದು ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕಲಬುರಗಿ ತಾಲ್ಲೂಕಿನ ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಕುರಿತ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕರಿಗೆ ಮಾಹಿತಿ ನೀಡಿದ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿ, ‘2021–22ನೇ ಸಾಲಿನಲ್ಲಿ ಹಾಗರಗುಂಡಗಿ ಗ್ರಾಮದಿಂದ ತಾಡತೆಗನೂರ ರಸ್ತೆ ಕಾಮಗಾರಿಯ ಅಂದಾಜು ಪತ್ರಿಕೆ ಮಾಡಲಾಗಿದ್ದು, ಹಿಟ್ಟನಹಳ್ಳಿ ಗ್ರಾಮದಿಂದ ₹ 60 ಲ‌ಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ, ₹ 90 ಲಕ್ಷ ವೆಚ್ಚದ ನಡುವಿನಹಳ್ಳಿ ರಸ್ತೆ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಸ್ತೆಗಳ ಸುಧಾರಣೆಗೆ ₹ 50 ಲಕ್ಷ ಇದೆ. ಪ್ಯಾಕೇಜ್‌ಗೆ ಅನುಗುಣವಾಗಿ ಕಾಮಗಾರಿಗಳನ್ನು ಮಾಡಿರುವುದಾಗಿ’ ತಿಳಿಸಿದರು.

ಸೋಮನಾಥಹಳ್ಳಿ ಕಾಮಗಾರಿ ಪ್ರಗತಿಯಲ್ಲಿದೆ. 2021–22ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ, ಅವರಾದ ಸಿ.ಸಿ. ರಸ್ತೆ ಕಾಮಗಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ 4 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಮಗ್ರ ಶಿಕ್ಷಣ ಯೋಜನೆಯಡಿ ಫರಹತಾಬಾದ್‌ನಲ್ಲಿ ಎರಡು ಶೌಚಾಲಯ ಕಾಮಗಾರಿಗಳು ಇವೆ. ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲು ಎರಡು ಎಕರೆ, ಸಾಧ್ಯವಾಗದಿದ್ದರೆ ಒಂದು ಎಕರೆಯನ್ನಾದರೂ ಒದಗಿಸಬೇಕು ಎಂದು ಮನವಿ
ಮಾಡಿದರು.

ಎಂಜಿನಿಯರ್‌ಗೆ ನೋಟಿಸ್: ಖಣದಾಳದಲ್ಲಿ 2015–16ನೇ ಸಾಲಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಐದು ವರ್ಷಗಳಾದರೂ ಮುಕ್ತಾಯವಾಗದ್ದನ್ನು ಗಮನಿಸಿದ ಶಾಸಕ ಎಂ.ವೈ. ಪಾಟೀಲ, ಇದಕ್ಕೆ ಕಾರಣರಾದ ಲೋಕೋಪಯೋಗಿ ಇಲಾಖೆ ಎಇಇಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿದರು.

ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಕ್ಷೇತ್ರದಲ್ಲಿ ಒಟ್ಟು ಐದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಡಣಿ–ಕವಲಗಾದಲ್ಲಿ ಎರಡು ತಿಂಗಳಲ್ಲಿ ಕೆಲಸ ಮುಕ್ತಾಯಗೊಳ್ಳಲಿದೆ. ₹ 25.80 ಲಕ್ಷ ವೆಚ್ಚದ ಹಸನಾಪುರ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದೆ ಎಂದರು.

ಕೋವಿಡ್‌ನಿಂದ ಮೃತಪಟ್ಟ ಫರಹತಾಬಾದ್ ಹಾಗೂ ಖಣದಾಳದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಶಾಸಕ ಎಂ.ವೈ. ಪಾಟೀಲ ಅವರು ತಲಾ ₹ 1 ಲಕ್ಷ ಮೊತ್ತದ ಪರಿಹಾರದ ಚೆಕ್‌ಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT