ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್: ಅರುಣ ಶಹಾಪುರ ಆರೋಪ

Published 15 ಜೂನ್ 2024, 15:40 IST
Last Updated 15 ಜೂನ್ 2024, 15:40 IST
ಅಕ್ಷರ ಗಾತ್ರ

ಕಲಬುರಗಿ: ‘ಅಧಿಕಾರ ಉಳಿಸಿಕೊಳ್ಳಲು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದವರು ಕಾಂಗ್ರೆಸ್‌ನವರು’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಆರೋಪಿಸಿದರು.

ನಗರದ ಕನ್ನಡ ಭವನದಲ್ಲಿ ನಡೆದ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಘಟನೆ ಜೂನ್ 25ರಂದು ಆಯೋಜಿಸಲು ಉದ್ದೇಶಿಸಿರುವ ‘ತುರ್ತು ಪರಿಸ್ಥಿತಿ ಕರಾಳ ದಿನ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘1971ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ರಾಜ್‌ ನಾರಾಯಣ್‌ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೋರ್ಟ್‌ ಮೆಟ್ಟಿಲೇರಿದ್ದರು’ ಎಂದು ಹೇಳಿದರು.

‘ಅಲಹಾಬಾದ್ ಹೈಕೋರ್ಟ್‌ ವಿಚಾರಣೆ ನಡೆಸಿ ಇಂದಿರಾ ಸಂಸತ್ ಸದಸ್ಯತ್ವವನ್ನು ರದ್ದು ಮಾಡಿತು. ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಅದು ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿಯಿತು. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮರುದಿನ ರಾತ್ರಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು’ ಎಂದು ಹೇಳಿದರು.

‘ಇಂದಿರಾ ಗಾಂಧಿ ಸರ್ವಾಧಿಕಾರಿಯಂತೆ ವರ್ತಿಸಿದರು. ವಿರೋಧ ಪಕ್ಷವನ್ನು ಜೈಲಿನಲ್ಲಿಟ್ಟು ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ನಾಗರಿಕರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸಲಾಯಿತು. ಸಂವಿಧಾನದ ಪೂರ್ವ ಪೀಠಿಕೆಗೂ ತಿದ್ದುಪಡಿ ತರಲಾಯಿತು. ಸಂವಿಧಾನದ ಮೇಲೆ ಇಷ್ಟೆಲ್ಲ ದಾಳಿ ಮಾಡಿದ ಕಾಂಗ್ರೆಸ್‌ನವರು ಸಂವಿಧಾನ ತಮ್ಮ ಮನೆಯ ಆಸ್ತಿ ಎಂಬಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಟೀಕಿಸಿದರು.

ಈ ಎಲ್ಲ ವಿಷಯಗಳನ್ನು ಜನರ ಮುಂದೆ ಇಡಬೇಕಾದ ಅಗತ್ಯ ಇದೆ. ಈ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲಾಗುವುದು. ಜೂನ್ 25ರಂದು ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಶಶೀಲ್‌ ಜಿ.ನಮೋಶಿ ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 400 ಸೀಟ್‌ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತಾರೆ. ಮೀಸಲಾತಿ ತೆಗೆಯುತ್ತಾರೆ ಎಂದು ಅಪಪ್ರಚಾರ ಮಾಡಲಾಯಿತು. ಈ ಅಪಪ್ರಚಾರದ ಹಿಂದೆ ಇದ್ದವರೇ ಒಬ್ಬ ವ್ಯಕ್ತಿಯ ಹಿತಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿದ್ದರು’ ಎಂದು ದೂರಿದರು.

‘ಭಾರತವನ್ನು ಪ್ರಜಾಪ್ರಭುತ್ವ ದೇಶವನ್ನಾಗಿಸಿದ ಡಾ. ಬಿ.ಆರ್‌.ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ನವರು ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂದು ದೂರಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕಿತ್ತುಕೊಳ್ಳಲಾಯಿತು. ವಿರೋಧ ಪಕ್ಷಗಳ ನಾಯಕರನ್ನು ಜೈಲಿಗಟ್ಟಲಾಯಿತು. ಇಂಥವರು ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿದರು. ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡರಾದ ನಿತೀನ್‌ ಗುತ್ತೇದಾರ, ಧರ್ಮಣ್ಣ ದೊಡ್ಡಮನಿ, ಅಮರನಾಥ ಪಾಟೀಲ, ಚನ್ನಪ್ಪ ಸುರಪುರ, ಬಿಜೆಪಿ ಎಸ್‌.ಸಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಅಂಬರಾಯ ಅಷ್ಠಗಿ, ಶರಣಪ್ಪ ಸೇರಿ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT