ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ ಬಂಡಿ ಸಮೇತ ಕಾಂಗ್ರೆಸ್‌ ಪ್ರತಿಭಟನೆ

ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹ, ತೈಲಗಳ ಬೆಲೆ ಏರಿಕೆ ವಿರುದ್ಧ ಗುಡುಗಿದ ಕಾಂಗ್ರೆಸ್‌ ಮುಖಂಡರು
Last Updated 15 ಫೆಬ್ರುವರಿ 2021, 16:10 IST
ಅಕ್ಷರ ಗಾತ್ರ

ಕಲಬುರ್ಗಿ: ತಿದ್ದುಪಡಿ ಮಾಡಿದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ತೈಲ ಬೆಲೆಗಳನ್ನು ಇಳಿಸಬೇಕು ಎಂದು ಆಗ್ರಹಿಸಿ, ಕಲಬುರ್ಗಿ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಸೋಮವಾರ ಎತ್ತಿನ ಬಂಡಿಗಳ ಮೆರವಣಿಗೆ ನಡೆಸಿದರು.

ಇಲ್ಲಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಸೇರಿದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಎತ್ತಿನ ಗಾಡಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಜಗತ್‌ ವೃತ್ತವನ್ನು ಸುತ್ತುಹಾಕಿ ಮರಳಿಜಿಲ್ಲಾಧಿಕಾರಿ ಕಚೇರಿಗೆ ಬಂದು ಅಲ್ಲಿ ಕೆಲಕಾಲ ಧರಣಿ ನಡೆಸಿದರು. ಮೆರವಣಿಗೆಯುದ್ದಕ್ಕೂ ನೂರಾರು ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ನಿರಂತರ ಘೋಷಣೆ ಕೂಗಿದರು.

‘ಕೇಂದ್ರದ ಕರಾಳ ಕಾನೂನುಗಳ ವಿರುದ್ಧ ದೆಹಲಿಯ ಗಡಿಯಲ್ಲಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ, ನಮ್ಮ ಪ್ರಧಾನಿ ಅವರ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ರೈತರ ಬೇಡಿಕೆಗೆ ಸ್ಪ‍ಂದಿಸದಿದ್ದರೆ ಸರ್ಕಾರವೇಕೆ ಇರಬೇಕು?’ ಎಂದು ನೇತೃತ್ವ ವಹಿಸಿದ್ದ ಕಾಂಗ್ರೆಸ್‌ ಮುಖಂಡ ಅಲ್ಲಮಪ್ರಭು ಪಾಟೀಲ ಕಿಡಿ ಕಾರಿದರು.

‘ಮೋದಿ ಅವರು ತಮ್ಮ ವ್ಯಾಪಾರಿ ಬುದ್ಧಿಯನ್ನು ದೇಶದ ರೈತರ ಮೇಲೆ ಪ್ರಯೋಗಿಸುತ್ತಿದ್ದಾರೆ. ಇಡೀ ದೇಶದ ಅನ್ನದಾತರನ್ನು ಗುಲಾಮರನ್ನಾಗಿ ಮಾಡಿ, ತಮಗೆ ಬೇಕಾದ ಬಂಡವಾಳಶಾಹಿ ಉದ್ಯಮಿಗಳನ್ನು ಮೇಲೆತ್ತಲು ಹುನ್ನಾರ ನಡೆಸಿದ್ದಾರೆ. ಈ ಕಾಯ್ದೆಗಳ ಬಗ್ಗೆ ಸಂಸದ್‌ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂತಲೂ ಕಲ್ಯಾಣ ಕರ್ನಾಟಕ ಪ್ರದೇಶ ನಿರ್ಲಕ್ಷ್ಯ ಮಾಡುತ್ತಿದೆ. ಕಲಬುರ್ಗಿಗೆ ಬರಬೇಕಿದ್ದ ‘ಏಮ್ಸ್’ ಅನ್ನು ಉದ್ದೇಶಪೂರ್ವಕವಾಗಿ ಹುಬ್ಬಳ್ಳಿ– ಧಾರವಾಡಕ್ಕೆ ಎತ್ತಂಗಡಿ ಮಾಡಲಾಗಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸೆಂಟರ್‌ ಅಫ್‌ ಎಕ್ಸಲನ್ಸ್‌ ಅನ್ನೂ ಬೆಂಗಳೂರಿಗೆ ಸ್ಥಳಾಂತರಿಸಲು ಹುನ್ನಾರ ನಡೆಸಿದೆ. ಹೊರ ರಿಂಗ್‍ ರಸ್ತೆ, ಹುಮನಾಬಾದ್– ಕಲಬುರ್ಗಿ– ಬಳ್ಳಾರಿ ಚತುಷ್ಪಥ ರಿಂಗ್ ರಸ್ತೆ, ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ, ನಿಮ್ಜ್‌ ಮುಂತಾದ ಯೋಜನೆಗಳ ಜಾರಿಗೆ ವಿಳಂಬ ಮಾಡುತ್ತಿದೆ’ ಎಂದು ದೂರಿದರು.

‘ಸರ್ಕಾರ ತನ್ನ ಧೋರಣೆ ಬದಲಿಸಿಕೊಳ್ಳಬೇಕು. ಈ ಭಾಗದಲ್ಲಿ ತೊಗರಿಯೇ ಜೀವನಾಧಾರವಾಗಿದೆ. ತೊಗರಿಗೆ ಬೆಂಬಲ ಬೆಲೆಯ ಮೇಲೆ ₹ 1500 ಪ್ರೋತ್ಸಾಹ ಧನ ನೀಡಬೇಕು. ತೈಲ ದರಗಳನ್ನು ತಕ್ಷಣಕ್ಕೆ ಇಳಿಕೆ ಮಾಡಬೇಕು’ ಎಂದೂ ಅವರು ಆಗ್ರಹಿಸಿದರು.

ಕಾಂಗ್ರೆಸ್‌ ದಕ್ಷಿಣ ಬ್ಲಾಕ್‌ ಅಧ್ಯಕ್ಷ ನೀಲಕಂಠರಾವ ಮೂಲಗೆ, ನಗರ ಘಟಕದ ಅಧ್ಯಕ್ಷ ಬಾಬು ಒಂಟಿ, ಮಹಿಳಾ ಘಟಕದ ಅಧ್ಯಕ್ಷೆ ಲತಾ ರವಿ ರಾಠೋಡ, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ ಪಾಟೀಲ ದಣ್ಣೂರ, ಮಾಜಿ ಮೇಯರ್‌ ಶರಣಕುಮಾರ ಮೋದಿ, ಮುಖಂಡರಾದ ಹುಲಿಗೆಪ್ಪ ಕನಕಗಿರಿ, ರಾಜಗೋಪಾಲ ರೆಡ್ಡಿ, ಲಾಲ್ ಅಹ್ಮದ್‌ ಬಾಂಬೆಶೇಠ, ಕೃಷ್ಣಾಜಿ ಕುಲಕರ್ಣಿ, ಶಿವಾನಂದ ಹೊನಗುಂಟಿ, ಮಜರ್ ಆಲಂಖಾನ್, ಪ್ರವೀಣ ಪಾಟೀಲ ಹರವಾಳ, ರಾಜೀವ ಜಾನೆ, ರವಿ ರಾಠೋಡ, ಶಾಮ ನಾಟಿಕಾರ, ಈರಣ್ಣ ಝಳಕಿ, ಲಿಂಗರಾಜ ತಾರಫೈಲ್‌, ಚಂದ್ರಿಕಾ ಪರಮೇಶ್ವರ, ಎಸ್.ಎ.ರಹೆಮಾನ್, ವಾಣಿಶ್ರೀ ಸಗರಕರ್, ಉಮಾ ಕಾಳೆ, ರೇಣುಕಾ ಸಿಂಗೆ, ಮನೀಷಾ ಚವ್ಹಾಣ, ಅಶೋಕ, ಸಂತೋಷ ಮೇಲ್ಮನಿ, ಕಾಶಿನಾಥ ಹಾದಿಮನಿ, ಚನ್ನಬಸಯ್ಯ ನಂದಿಕೋಲ, ಅಂಬರೀಶ ಧನಕರ್, ರವಿ ರಾಠೋಡ, ಎಚ್.ಎಂ. ಸೋಮಶೇಖರ, ಮಹೇಂದ್ರ ವರವಿ, ಪರಮೇಶ್ವರ ಖಾನಾಪುರ ನೇತೃತ್ವ ವಹಿಸಿದ್ದರು.

ರಾಷ್ಟ್ರಪತಿ ಅವರಿಗೆ ಬರೆದ ಮನವಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT