‘ಪ್ರತಿ ಕ್ಷೇತ್ರದಲ್ಲಿ 100 ಕಿ.ಮೀ ಹೊಸ ರಸ್ತೆ’
ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಕಿ.ಮೀ. ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು. ‘ಕಲ್ಯಾಣ ಪಥ ಯೋಜನೆಗಾಗಿ ಬಜೆಟ್‌ನಲ್ಲಿ ₹ 1 ಸಾವಿರ ಕೋಟಿ ಒದಗಿಸಲಾಗುತ್ತಿದೆ. ಅತ್ಯಾಧುನಿಕ ತಾಂತ್ರಿಕತೆಯನ್ನು ಅಳವಡಿಸಿ ಈ ರಸ್ತೆ ನಿರ್ಮಿಸಲಾಗುವುದು. ರಾಜ್ಯದಾದ್ಯಂತ ಪ್ರಗತಿ ಪಥ ಯೋಜನೆಯಡಿ ₹ 7 ಸಾವಿರ ಕೋಟಿ ಮೊತ್ತದಲ್ಲಿ ರಸ್ತೆ ನಿರ್ಮಿಸಲಾಗುವುದು. ಜೊತೆಗೆ ಪ್ರಧಾನಮಂತ್ರಿ ಅವರು ಗ್ರಾಮ ಸಡಕ್ ಯೋಜನೆ–2ಗೆ ಅನುಮೋದನೆ ನೀಡಿದ್ದಾರೆ. ಹೀಗಾಗಿ ಯಾರು ಬೇಡ ಅಂದರೂ ಪ್ರತಿ ಕ್ಷೇತ್ರದಲ್ಲಿ 100 ಕಿ.ಮೀ. ಹೊಸ ರಸ್ತೆಗಳು ನಿರ್ಮಾಣಗೊಳ್ಳಲಿವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕ್ಷೇತ್ರಕ್ಕೆ ₹ 2 ಕೋಟಿ ಒದಗಿಸಲಾಗಿದೆ’ ಎಂದರು. ‘ಕಲಬುರಗಿ ನಗರದ ರಸ್ತೆಗಳ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪೈಪ್‌ಲೈನ್ ಅಳವಡಿಸಲು ಅಗೆದ ರಸ್ತೆಗಳನ್ನು ದುರಸ್ತಿ ಮಾಡುವಂತೆ ಎಲ್ ಅಂಡ್ ಟಿ ಕಂಪನಿಗೆ ಒಂದು ತಿಂಗಳ ಗಡುವು ನೀಡಲಾಗಿದೆ’ ಎಂದು ತಿಳಿಸಿದರು.