ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ‘ಕೂಡಿ ಬಾಳಲು’ ಕಲಿಸಿದ ಕೊರೊನಾ!

ಲಾಕ್‌ಡೌನ್‌ನಿಂದ ತುಂಬು ಕುಟುಂಬದ ಮೌಲ್ಯಗಳ ಅರಿವು; ಪರಸ್ಪರ ಹೊಂದಾಣಿಕೆಯೂ ವೃದ್ಧಿ
ಅಕ್ಷರ ಗಾತ್ರ

ಕಲಬುರ್ಗಿ: ‘ಕೊರೊನಾ ಯಾರಿಗೆ ಏನು ಕಲಿಸಿದೆಯೋ ಗೊತ್ತಿಲ್ಲ. ನಮಗೆ ಮಡದಿ–ಮಕ್ಕಳೊಂದಿಗೆ ಮನೆಯಲ್ಲಿ ಸಂತಸದಿಂದ ಇರುವುದನ್ನು ಕಲಿಸಿದೆ’ ಇದು ನಗರದ ಶಾ ಬಜಾರ್ ನಿವಾಸಿ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಪ್ರವೀಣಕುಮಾರ ಮೋದಿ ಅವರ ಅಭಿಪ್ರಾಯ.

ಕೋವಿಡ್–19 ಕಾರಣ ಲಾಕ್‌ಡೌನ್‌ ಜಾರಿಯಾಗಿರುವ ಪರಿಣಾಮ ನಿತ್ಯವೂ ಕೆಲಸ, ವ್ಯಾಪಾರ, ವ್ಯವಹಾರ ಎಂದು ಓಡಾಡಿಕೊಂಡಿದ್ದ ಬಹುತೇಕ ‘ಬ್ಯೂಸಿ’ ಜನ ಇಂದು ಮನೆಯಲ್ಲಿದ್ದಾರೆ.

ಬೆಂಗಳೂರು, ಪೂನಾ, ಮುಂಬೈ, ಹೈದರಾಬಾದ್‌ಗಳಂಥ ಮಹಾನಗರಗಳಲ್ಲಿ ಐಟಿ, ಬಿಟಿ ಮತ್ತಿತರ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ಬಹುತೇಕ ಉದ್ಯೋಗಿಗಳು ನಗರ ಹಾಗೂ ತಮ್ಮ ಊರುಗಳಿಗೆ ಬಂದು ಗೂಡು ಸೇರಿಕೊಂಡಿದ್ದಾರೆ.

ಲಾಕ್‌ಡೌನ್‌ಗಿಂತ ಮುಂಚಿನ ತಮ್ಮ ‘ರಿಯಲ್‌ ಎಸ್ಟೇಟ್‌’ ವ್ಯವಹಾರ ನೆನಪಿಸಿಕೊಂಡ ಪ್ರವೀಣಕುಮಾರ, ‘ನಾನು ಬೆಳಿಗ್ಗೆ 7ಕ್ಕೆ ಜಿಲ್ಲೆಯ ವಿವಿಧೆಡೆ ಇರುವ ಸೈಟ್‌ಗಳತ್ತ ಹೊರಟುಬಿಡುತ್ತಿದ್ದೆ. ನಂತರ ಬ್ಲೂಪ್ರಿಂಟ್ ತಯಾರಿ, ಅಪ್ರೂವಲ್‌, ರಿಜಿಸ್ಟ್ರೇಷನ್, ಸಾಮಗ್ರಿಗಳ ಪೂರೈಕೆ, ಕಾರ್ಮಿಕರ ವೇತನ... ಹೀಗೆ ಸಂಜೆ 8ರವರೆಗೆ ಬ್ಯೂಸಿ ಆಗಿರುತ್ತಿದ್ದೆ. ಸಂಜೆ 8ರ ನಂತರ ಬೇಸರ ಕಳೆಯಲು ಸ್ನೇಹಿತರೊಂದಿಗೆ ಕ್ಲಬ್‌ನಲ್ಲಿ ಹರಟೆ ಹೊಡೆದು ಮನೆಗೆ ಹೋಗುವಷ್ಟರಲ್ಲಿ 9.30 ಆಗಿರುತ್ತಿತ್ತು. ನಾನು ಬೆಳಿಗ್ಗೆ ಮನೆ ಬಿಟ್ಟು ಹೊರಡುವಾಗ ಮಲಗಿಕೊಂಡಿದ್ದ ಮಕ್ಕಳು ರಾತ್ರಿ ಮನೆಗೆ ಮರಳುವಷ್ಟರಲ್ಲಿ ಹಾಸಿಗೆ ಸೇರಿರುತ್ತಿದ್ದರು. ನಾನು ನನ್ನ ಮಕ್ಕಳೊಂದಿಗೆ ಮಾತನಾಡಿದ್ದು, ಆಟವಾಡಿದ್ದು ಬಹಳ ಕಡಿಮೆ’ ಎಂದು ಭಾವುಕರಾದರು.‌

‘ಲಾಕ್‌ಡೌನ್‌ ಜಾರಿ ಆರಂಭದಲ್ಲಿ ಬೋರ್ ಆಯಿತು. ನಿತ್ಯದ ಜಂಜಾಟವೇ ಒಳ್ಳೆಯದೆನಿಸಿತು. ನಂತರ ಮನೆ, ಮಡದಿ, ಮಕ್ಕಳತ್ತ ವೈಯಕ್ತಿಕ ಗಮನ ನೀಡಲು ಆರಂಭಿಸಿದೆ. ಆಗಲೇ ನನಗೆ, ನನ್ನ ಮಡದಿ ಅದ್ಭುತವಾಗಿ ಪುರಿ–ಖೀರ್ ಮಾಡುತ್ತಾಳೆ ಎಂದು ಅರಿವಾಯಿತು. ಮಕ್ಕಳಾದ ಅನನ್ಯಾ, ಅನ್ವಿತಾ, ಭಾಸ್ಕರ್‌ಗೆ ಅಬಾಕಸ್‌ನೊಂದಿಗೆ ನಲಿಯುತ್ತ ಗಣಿತ ಕಲಿಯುವುದು ತುಂಬಾ ಇಷ್ಟ ಎಂದು ಗೊತ್ತಾಯಿತು. ನಮ್ಮ ‘ಜಿಮ್ಮಿ’ (ನಾಯಿ) ಕೂಡ ನನ್ನನ್ನು ಮಿಸ್‌ ಮಾಡಿಕೊಳ್ಳುತ್ತಿದ್ದ ಎಂದನ್ನಿಸಿತು’ ಎಂದರು ಮೋದಿ.

ಶಾ ಬಜಾರ್‌ ನಿವಾಸಿ, ಗೃಹಿಣಿ ವೀಣಾ ಪ್ರಶಾಂತಕುಮಾರ, ‘ಪ್ರತಿ ವರ್ಷ ರಜೆಯಲ್ಲಿ ಸಮ್ಮರ್‌ ಕ್ಯಾಂಪ್‌, ಟ್ಯೂಷನ್‌ ಕ್ಲಾಸ್‌ಗಳಿಗೆ ತೆರಳುತ್ತಿದ್ದ ಮಕ್ಕಳು ಮನೆಯಲ್ಲಿಯೇ ಉಳಿದು ಚೌಕಾಬಾರಾ, ಹಾವು–ಏಣಿಯಂಥ ಆಟ ಕಲಿಯುತ್ತಿದ್ದಾರೆ. ಮನೆ ಮುಂದಿನ ತೋಟದಲ್ಲಿನ ಸಸಿಗಳಿಗೆ ನೀರೆರೆದು ಜತನದಿಂದ ಬೆಳೆಸುತ್ತಿದ್ದಾರೆ. ಅವರ ಸಂಭ್ರಮಕ್ಕೆ ಪಾರವೇ ಇಲ್ಲ. ಈ ಬಾರಿ ಪರೀಕ್ಷೆ ಇಲ್ಲದೇ ಪಾಸ್ ಆಗಿರುವುದಲ್ಲದೇ, ಒಂದು ತಿಂಗಳು ಹೆಚ್ಚುವರಿ ರಜೆ ಸಿಕ್ಕಿರುವುದು ಅವರ ಸಂತಸವನ್ನು ಇಮ್ಮಡಿಸಿದೆ’ ಎಂದರು.

ಬೆಂಗಳೂರಿನ ಐಟಿ ಕಂಪನಿಯೊಂದರ ಉದ್ಯೋಗಿ ಪ್ರಸನ್‌ ಕೋಲಾರ ನಗರದ ವೆಂಕಟೇಶ್ವರ ಕಾಲೊನಿಯಲ್ಲಿರುವ ತಮ್ಮ ಮನೆಗೆ ಬಂದು ನೆಲೆಸಿದ್ದಾರೆ. ಅವರು ಹೇಳುವಂತೆ, ‘ಈಗ ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ನೆಂಟರು, ನೆರೆಹೊರೆಯವರು ಎಲ್ಲರೊಂದಿಗೆ ಮಾತನಾಡಲು, ಒಬ್ಬರೊನ್ನೊಬ್ಬರು ಅರಿತುಕೊಳ್ಳಲು ಸಾಕಷ್ಟು ಸಮಯ ಲಭಿಸಿದೆ. ಬಾಲ್ಯದಲ್ಲಿ ಅಜ್ಜಿ ಮನೆಗೆ ಹೋಗಿ ತುಂಬು ಕುಟುಂಬದಲ್ಲಿ ಉಂಡುಟ್ಟ ಸವಿನೆನಪುಗಳು ಮರುಕಳಿಸುತ್ತಿವೆ. ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದಿರುವ ನನ್ನ ಮಕ್ಕಳು ದಕ್ಷ, ವೇದ, ಸಿದ್ಧಾಂತಗೆ ತುಂಬು ಕುಟುಂಬದಲ್ಲಿರುವುದು ಹೊಸ ಅನುಭವವೇ. ಅಜ್ಜಿ, ಅಮ್ಮ, ಚಿಕ್ಕಮ್ಮ, ಅತ್ತೆ ಸೇರಿ ಮಾಡುವ ಹಪ್ಪಳ, ಸಂಡಿಗೆಗಳನ್ನು ರುಚಿಸಿ ಅವರು ಎಂಜಾಯ್ ಮಾಡುತ್ತಿದ್ದಾರೆ. ಅಪ್ಪಿ–ತಪ್ಪಿಯೂ ನಮಗೆ ಬೆಂಗಳೂರು ನೆನಪಾಗುತ್ತಿಲ್ಲ!’.

ಮುಂದೇನು? ಎಂಬ ಆತಂಕವಂತೂ ಇದೆ
ಲಾಕ್‌ಡೌನ್ ಪರಿಣಾಮ ವ್ಯಾಪಾರ, ವ್ಯವಹಾರ, ಉದ್ದಿಮೆಗಳು ಮುಂಚಿನ ಸ್ಥಿತಿಗೆ ಬರಲು ಬಹಳ ಸಮಯ ಬೇಕು. ಈ ನಿಟ್ಟಿನಲ್ಲಿ ನಮ್ಮ ಕೆಲಸಕ್ಕೆ ಕುತ್ತು ಬಂದರೂ ಬರಬಹುದು. ಹೀಗಾಗಿ, ಮುಂದೇನು? ಎಂಬ ಆತಂಕ ಇದೆ. ಆತಂಕದ ನಡುವೆಯೂ ನಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದೇವೆ ಎಂಬ ನೆಮ್ಮದಿಯೂ ಇದೆ ಎಂಬುದು ಪ್ರವೀಣ ಮತ್ತು ಪ್ರಸನ್‌ ಇಬ್ಬರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT