ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಗೆ ಅರ್ಧದಷ್ಟು ಮಂದಿ ಗೈರು

393 ಫಲಾನುಭವಿಗಲಿಗೆ ಕೋವಿಶೀಲ್ಡ್‌ ಚುಚ್ಚುಮದ್ದು ನೀಡಿಕೆ
Last Updated 17 ಜನವರಿ 2021, 0:53 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಶನಿವಾರ ಆರಂಭವಾದ ಮೊದಲ ಹಂತದ ಕೊರೊನಾ ಲಸಿಕೆ ಕಾರ್ಯಕ್ರಮದಲ್ಲಿ ಅರ್ಧದಷ್ಟು ಮಾತ್ರ ಸಾಧನೆ ಸಾಧ್ಯವಾಯಿತು. ಮೊದಲ ದಿನ 800 ಕೊರೊನಾ ಸೇನಾನಿಗಳಿಗೆ ಲಸಿಕೆ ಹಾಕಲು ಜಿಲ್ಲಾಡಳಿತ ಗುರಿ ಇಟ್ಟುಕೊಂಡಿತ್ತು. ಇವರಲ್ಲಿ 778 ಮಂದಿ ಲಸಿಕೆ ಪಡೆಯಲು ಅರ್ಹರಾಗಿದ್ದರು. ಆದರೆ, ಇಡೀ ದಿನ ಕೇವಲ 393 ಮಂದಿ ಮಾತ್ರ ಲಸಿಕೆ ಪಡೆದರು.

‘ಮುಂಚಿತವಾಗಿಯೇ ಹೆಸರು ನೋಂದಣಿ ಮಾಡಿ ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಹಲವರು ಗೈರಾದರು. ಲಸಿಕಾ ತಂಡ ಮೊಬೈಲ್‌ ಕರೆ ಮಾಡಿದಾಗ ಕೆಲವರು ‘ರಾಂಗ್‌ ನಂಬರ್’ ಎಂದು ಹೇಳಿ ಜಾರಿಕೊಂಡರೆ, ಮತ್ತೆ ಕೆಲವರು ‘ಸ್ವಿಚ್‌ಆಫ್‌’ ಮಾಡಿದ್ದರು. ಜಿಮ್ಸ್ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ಹಲವರು ರಜೆ ಪಡೆದು ಬೇರೆ ಊರುಗಳಿಗೆ ಹೋಗಿದ್ದಾಗಿ ಹೇಳಿದರು. ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಶೇ 50.51ರಷ್ಟು ಮಂದಿ ಮಾತ್ರ ಲಸಿಕೆ ಪಡೆದರು’ ಎಂಬುದು ಮೂಲಗಳ ಮಾಹಿತಿ.

ಇಲ್ಲಿನ ಗುಲಬರ್ಗಾ ವೈದ್ಯಕೀಯ ಮಹಾವಿದ್ಯಾಲಯ (ಜಿಮ್ಸ್‌), ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಸೇಡಂ, ಜೇವರ್ಗಿಯಲ್ಲಿನ ತಾಲ್ಲೂಕು ಆಸ್ಪತ್ರೆಗಳು ಹಾಗೂ ಅಫಜಲಪುರ ತಾಲ್ಲೂಕಿನ ಗೊಬ್ಬೂರ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏಕಕಾಲಕ್ಕೆ ಲಸಿಕೆ ಹಾಕುವ ಕಾರ್ಯ ನಡೆಯಿತು. ಪ್ರತಿ ಆರೋಗ್ಯ ಕೇಂದ್ರದಲ್ಲೂ ತಲಾ 100 ಸಿಬ್ಬಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಇದರಲ್ಲಿ ಜೇವರ್ಗಿ ತಾಲ್ಲೂಕು ಅಸ್ಪತ್ರೆಯಲ್ಲಿ ಅತಿ ಹೆಚ್ಚು ಅಂದರೆ; 80 ಮಂದಿ ಚುಚ್ಚುಮದ್ದು ಪಡೆದರು. ಚಿತ್ತಾಪುರ ತಾಲ್ಲೂಕು ಅಸ್ಪತ್ರೆಯಲ್ಲಿ ಅತಿ ಕಡಿಮೆ ಅಂದರೆ; 30 ಮಂದಿ ಮಾತ್ರ ಹಾಜರಾದರು.

‘ಕೋವಿಶೀಲ್ಡ್‌ನ ಅಡ್ಡಪರಿಣಾಮಗಳು ಇಲ್ಲ ಎಂದು ಮುಂಚಿತವಾಗಿಯೇ ಪ್ರಚಾರ ಮಾಡಲಾಗಿದೆ. ಆದರೂ ಮೊದಲನೇ ದಿನ ಸಹಜವಾಗಿ ಭಯ ಇರುತ್ತದೆ. ಹಾಗಾಗಿ, ಅರ್ಧದಷ್ಟು ಸೇನಾನಿಗಳು ದೂರ ಉಳಿದಿದ್ದಾರೆ. ಸೋಮವಾರಕ್ಕೆ ನೋಂದಣಿ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಹೆಚ್ಚಿನ ಜನ ಲಸಿಕೆ ಪಡೆಯುವ ಸಾಧ್ಯತೆ ಇದೆ’ ಎಂದು ಜಿಮ್ಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅನಂತರಾಜ ಮೊದಲ ಫಲಾನುಭವಿ: ಇಲ್ಲಿನ ಜಿಮ್ಸ್ ಆಸ್ಪತ್ರೆಯ ಡಿ– ದರ್ಜೆ ನೌಕರ ಅನಂತರಾಜ ಅವರಿಗೆ ಜಿಲ್ಲೆಯಲ್ಲಿಯೇ ಮೊದಲ ಲಸಿಕೆ ನೀಡಲಾಯಿತು. ಸ್ಟಾಫ್‌ನರ್ಸ್‌ ಫಕೀರಪ್ಪ ಅವರು ಅನಂತರಾಜ ಅವರಿಗೆ ಚುಚ್ಚುಮದ್ದು ನೀಡಿದರು.

ಕೋವಿಶೀಲ್ಡ್‌ ನೀಡುವ ಸಲುವಾಗಿಯೇ ತೆರೆದ ವಿಶೇಷ ವಿಭಾಗದಲ್ಲಿ ಅನಂತರಾಜ ಅವರು ಮೊದಲು ತಮ್ಮ ಗುರುತಿನ ಚೀಟಿ ತೋರಿಸಿ ನೋಂದಣಿ ಮಾಡಿಕೊಂಡರು. ನಂತರ ವೆಬ್‌ಸೈಟ್‌ನಲ್ಲಿ ಅವರ ದಾಖಲೆಗಳನ್ನು ಅಪ್‌ಲೋಡ್‌ ಮಾಡಲಾಯಿತು. ಅದರ ಪಕ್ಕದಲ್ಲೇ ಇರುವ ಲಸಿಕೆ ನೀಡುವ ಕೊಠಡಿಯಲ್ಲಿ ಸಿದ್ಧತೆಯಲ್ಲಿದ್ದ ಸ್ಟಾಫ್‌ನರ್ಸ್‌; ಅನಂತರಾಜ ಅವರ ಎಡ ತೋಳಿಗೆ ಚುಚ್ಚುಮದ್ದು ನೀಡಿದರು. ಅಲ್ಲಿಂದ ವಿಶ್ರಾಂತಿ ಕೊಠಡಿಗೆ ಕಳುಹಿಸಲಾಯಿತು.

ಇವರ ಹಿಂದೆಯೇ ನೋಂದಣಿ ಮಾಡಿಕೊಂಡ ಜಿಮ್ಸ್ ಮಹಿಳಾ ಡಿ– ದರ್ಜೆ ಸಿಬ್ಬಂದಿಯಾದ ಅಂಜಲಿ ಅಪ್ಪಣ್ಣ ಬಂಡಗಾರ ಅವರಿಗೆ ಚುಚ್ಚುಮದ್ದು ನೀಡಲಾಯಿತು. ಅರ್ಧ ತಾಸಿನ ನಂತರವು ಇಬ್ಬರೂ ಫಲಾನುಭವಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿಲ್ಲ. ಇದರ ಜತೆಜತೆಗೇ ಮತ್ತಷ್ಟು ಫಲಾನುಭವಿಗಳಿಗೆ ಲಸಿಕೆ ನೀಡುವುದನ್ನು ಮುಂದುವರಿಸಲಾಯಿತು.

ಇದಕ್ಕೂ ಮುನ್ನ ಜಿಮ್ಸ್‌ ಮೆಡಿಕಲ್‌ ಕಾಲೇಜಿನ ಒಳಾವರಣದಲ್ಲಿ ಹಾಕಿದ್ದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ನೇರ ಪ್ರಸಾರ ಮಾಡಲಾಯಿತು. ಸಂಸದ ಡಾ.ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಉಪಾಧ್ಯಕ್ಷೆ ಶೋಬಾ ಸಿದ್ದು ಸಿರಸಗಿ ಇದ್ದರು.

ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ. ರಾಜಾ, ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಕವಿತಾ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬಾರಾಯ ರುದ್ರವಾಡಿ ಅವರು ಲಸಿಕೆ ನೀಡುವ ಸಿಬ್ಬಂದಿಗೆ ಖುದ್ದು ಮಾರ್ಗದರ್ಶನ ಮಾಡಿದರು.

ಕೊರೊನಾ ವಾರ್‌ ರೂಮ್‌ನ ಉಸ್ತುವಾರಿ ಬಲರಾಮ ಲಮಾಣಿ, ಐಎಎಸ್‌ ಪ್ರೊಬೇಷನರಿ ಅಧಿಕಾರಿ ಡಾ.ಆಕಾಶ ಶಂಕರ, ಡಾ.ಅನಿಲ ತಾಳಿಕೋಟೆ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಪ್ರಭುಲಿಂಗ ಮಾನಕರ, ಕಂಟ್ರೋಲ್‌ ರೂಮ್‌ ವಿಶೇಷಾಧಿಕಾರಿ ಡಾ.ಎಂ.ಕೆ. ಪಾಟೀಲ ಇದ್ದರು.

ನಾಲ್ವರಿಗೆ ಜ್ವರ; ಚಿಕಿತ್ಸೆ
ಕಲಬುರ್ಗಿ:
ಕೊರೊನಾ ಚುಚ್ಚುಮದ್ದು ಪಡೆದ ನಂತರ ಚಿಂಚೋಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೂವರು ಹಾಗೂ ಆಳಂದ ತಾಲ್ಲೂಕು ಆಸ್ಪತ್ರೆಯಲ್ಲಿ ಒಬ್ಬರಿಗೆ 15 ನಿಮಿಗಳ ನಂತರ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡಿತು. ಸ್ಥಳದಲ್ಲಿದ್ದ ವೈದ್ಯರು ಅವರಿಗೆ ಗ್ಲೂಕೋಸ್‌ ಹಾಗೂ ಮಾತ್ರೆ ನೀಡಿ ಬಳಿಕ ಜ್ವರ ಇಳಿಯಿತು.

ಚಿಂಚೋಳಿ ಆಸ್ಪತ್ರೆಯಲ್ಲಿ ಸಣ್ಣ ಜ್ವರ ಕಾಣಿಸಿಕೊಂಡ ಮೂವರ ಪೈಕಿ ಇಬ್ಬರಿಗೆ ಮಾತ್ರೆ ಕೊಟ್ಟ ನಂತರ ಜ್ವರ ಇಳಿದಿದ್ದು, ಅವರನ್ನು ಮನೆಗೆ ಕಳುಹಿಸಲಾಯಿತು. ಮತ್ತೊಬ್ಬ ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಂಡು ನಿಗಾ ವಹಿಸಲಾಗಿದೆ. ಅಪಾಯ ಏನೂ ಇಲ್ಲ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಆಳಂದದಲ್ಲಿ ಅಡ್ಡ ಪರಿಣಾಮ ಉಂಟಾದ ವ್ಯಕ್ತಿಗೆ ಗ್ಲೂಕೋಸ್‌ ನೀಡಿದ ಬಳಿಕ, ಅರ್ಧ ಗಂಟೆ ನಂತರ ಮನೆಗೆ ತೆರಳಿದರು. ಉಳಿದವರಾರಿಗೂ ಅಡ್ಡಪರಿಣಾಮಗಳಾಗಿಲ್ಲ ಎಂದು ವೈದ್ಯಾಧಿಕಾರಿ ಸ್ಪಷ್ಟಪಡಿಸಿದರು.

ಭಯ ಬಿಟ್ಟು ಲಸಿಕೆ ಪಡೆಯಿರಿ: ಸಂಸದ
ಕಲಬುರ್ಗಿ:
‘ಕೋವಿಶೀಲ್ಡ್‌ ಲಸಿಕೆ ಪಡೆಯುವುದರಿಂದ ಸಣ್ಣ– ಪುಟ್ಟ ಅಡ್ಡಪರಿಣಾಮಗಳು ಆಗಬಹುದು. ಆದರೆ, ಯಾರೂ ಭಯಪಡಿವ ಅಗತ್ಯವಿಲ್ಲ. ಈ ಅಭಿಯಾನ ನೂರಕ್ಕೆ ನೂರರಷ್ಟು ಯಶಸ್ವಿಯಾಗುತ್ತದೆ’ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.

ಲಸಿಕಾ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದ ಅವರು, ‘ಲಸಿಕೆ ತಯಾರಿಸಲು ಶ್ರಮಿಸಿದ ಎಲ್ಲ ವಿಜ್ಞಾನಿಗಳು, ವೈದ್ಯರು ಹಾಗೂ ಲಸಿಕೆ ಶೀಘ್ರವೇ ಲಭ್ಯವಾಗುವಂತೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲುತ್ತವೆ. ಲಸಿಕೆಗಾಗಿ ಜಿಲ್ಲೆಯ ಜನ ಕಾಯುತ್ತಿದ್ದರು. ಕೆಲವೇ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ’ ಎಂದರು.

ನಾಳೆ ನಾಲ್ಕು ಹೆಚ್ಚುವರಿ ಕೌಂಟರ್‌
ಕಲಬುರ್ಗಿಯ ಜಿಮ್ಸ್‌ ಕಾಲೇಜಿನಲ್ಲಿ ಕೋವಿಶೀಲ್ಡ್‌ ನೀಡುವ ಸಂಬಂಧ ಶನಿವಾರ ಒಂದೇ ಕೌಂಟರ್‌ ತೆರೆಯಲಾಗಿತ್ತು. ಆದರೆ, ಸೋಮವಾರ (ಜ. 18) ಒಂದೇ ದಿನ 400 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದರಿಂದ ನಾಲ್ಕು ಕೌಂಟರ್‌ ತೆರೆಯಲಾಗುತ್ತಿದೆ.

ಶನಿವಾರ 100 ಮಂದಿಯ ಪೈಕಿ 47 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಉಳಿದವರಿಗೆ ಮತ್ತೆ ಯಾವಾಗ ಲಸಿಕೆ ನೀಡಲಾಗುತ್ತದೆ ಎಂಬ ಬಗ್ಗೆ ಆರೋಗ್ಯಾಧಿಕಾರಿ ಮಾಹಿತಿ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT