ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮನೆ ಬಾಗಿಲಿಗೇ ಮರಣ ಪ್ರಮಾಣಪತ್ರ

ಕೋವಿಡ್‌ನಿಂದ ಸಾವಿಗೀಡಾದ ಕುಟುಂಬದವರಿಗೆ ಸ್ಪಂದಿಸಿದ ಮಹಾನಗರ ಪಾಲಿಕೆ
Last Updated 12 ಜೂನ್ 2021, 14:03 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರ ನೋವನ್ನು ಅರಿತುಕೊಂಡಿರುವ ಕಲಬುರ್ಗಿ ಮಹಾನಗರ ಪಾಲಿಕೆಯು ಅವರ ಮನೆಗಳಿಗೇ ಮರಣ ಪ್ರಮಾಣಪತ್ರವನ್ನು ವಿತರಿಸಲು ಕ್ರಮ ಕೈಗೊಂಡಿದೆ.

ಮೊದಲೇ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವವರು ಮರಣ ಪ್ರಮಾಣಪತ್ರಗಳನ್ನು ಪಡೆಯಲು ಪಾಲಿಕೆಯ ಜನನ, ಮರಣ ವಿಭಾಗಕ್ಕೆ ಎಡತಾಕಬೇಕಾಗುತ್ತದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ವಾಹನಗಳ ಓಡಾಟಕ್ಕೂ ನಿರ್ಬಂಧವಿರುವುದರಿಂದ ಕುಟುಂಬದ ಸದಸ್ಯರು ಕಚೇರಿಗೆ ಬರುವುದಕ್ಕೂ ತೊಂದರೆ. ಹೀಗಾಗಿ, ಇದಕ್ಕಾಗಿ ಪ‍್ರತ್ಯೇಕ ತಂಡವೊಂದನ್ನು ರಚಿಸಿರುವ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು, ಕಾಲಮಿತಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಕೋವಿಡ್‌ನಿಂದ ಮೃತರ ಮನೆಗಳಿಗೇ ಮರಣ ಪ್ರಮಾಣಪತ್ರ ತಲುಪಿಸುತ್ತಿದ್ದಾರೆ.

ಕಾರ್ಯಾಚರಣೆ ಹೇಗೆ?: ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗವು ವಿವಿಧ ಆಸ್ಪತ್ರೆಗಳಿಗೆ ಈ ಸಂಬಂಧ ಸೂಚನೆ ನೀಡಿದ್ದು, ಕೋವಿಡ್‌ನಿಂದ ಆ ಆಸ್ಪತ್ರೆಗಳಲ್ಲಿ ಮೃತಪಟ್ಟ ಕಲಬುರ್ಗಿ ನಗರದ ನಾಗರಿಕರ ಮಾಹಿತಿಯನ್ನು ಹಂಚಿಕೊಳ್ಳುವಂತೆ ತಿಳಿಸಿದೆ. ನಗರದ ಜಿಮ್ಸ್‌, ಇಎಸ್‌ಐಸಿ ಸರ್ಕಾರಿ ಆಸ್ಪತ್ರೆಗಳಲ್ಲದೇ ಕೋವಿಡ್‌ ವಾರ್ಡ್‌ಗಳನ್ನು ಆರಂಭಿಸಿರುವ ಖಾಸಗಿ ಆಸ್ಪತ್ರೆಗಳಿಗೂ ಈ ಬಗ್ಗೆ ತಿಳಿಸಲಾಗಿದೆ. ಮೃತಪಟ್ಟ ರೋಗಿಗಳ ಮಾಹಿತಿಯನ್ನು ಪಡೆದುಕೊಂಡು ಮರಣ ಪ್ರಮಾಣಪತ್ರವನ್ನು ತಯಾರಿಸುತ್ತಾರೆ. ನಂತರ ಅವರ ಸಂಬಂಧಿಕರಿಗೆ ಕರೆ ಮಾಡಿ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ಮನೆಗೆ ತಲುಪಿಸುತ್ತಾರೆ.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಆರಂಭವಾದಾಗಿನಿಂದ ಇಲ್ಲಿಯವರೆಗೆ 801 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಶೇ 65ರಷ್ಟು ಜನರು ಕಲಬುರ್ಗಿ ನಗರದವರೇ ಆಗಿದ್ದಾರೆ. ಅವರೆಲ್ಲರ ಮಾಹಿತಿಯನ್ನು ಆಸ್ಪತ್ರೆಯಿಂದ ಪಡೆದುಕೊಳ್ಳಲಾಗುತ್ತಿದೆ. ಬೇರೆ ರಾಜ್ಯ, ಬೇರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದರೂ ಆ ಬಗ್ಗೆ ಕುಟುಂಬ ಸದಸ್ಯರು ಮಾಹಿತಿ ನೀಡಿದರೆ ಮಾನವೀಯ ನೆಲೆಯಲ್ಲಿ ಅಂಥವರ ಮನೆಗಳಿಗೇ ಮರಣ ಪ್ರಮಾಣಪತ್ರ ತಲುಪಿಸಲಾಗುವುದು ಎಂದು ಆಯುಕ್ತ ಸ್ನೇಹಲ್ ಲೋಖಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್‌ ನಿಮಿತ್ತ ಪಾಲಿಕೆಯು ಕಡಿಮೆ ಸಿಬ್ಬಂದಿಯನ್ನು ಬಳಸಿಕೊಂಡು ಕೆಲಸ ಮಾಡಬೇಕಿದೆ. ಹೀಗಾಗಿ, ಪ್ರಮಾಣಪತ್ರ ತಲುಪುವಲ್ಲಿ ಅನಗತ್ಯವಾಗಿ ವಿಳಂಬವಾಗುವುದನ್ನು ತಡೆಯಲು ಹಾಗೂ ಮೃತರ ಮನೆ ವಿಳಾಸವನ್ನು ಪತ್ತೆ ಹಚ್ಚಲು ವಿವಿಧ ವಾರ್ಡ್‌ಗಳಲ್ಲಿನ ನೈರ್ಮಲ್ಯ ನಿರೀಕ್ಷಕರು, ಆಸ್ತಿ ತೆರಿಗೆ ಸಂಗ್ರಹಿಸುವ ಸಿಬ್ಬಂದಿಯ ನೆರವನ್ನು ಪಡೆಯಲು ಪಾಲಿಕೆ ಮುಂದಾಗಿದೆ.

ಪ್ರಮಾಣಪತ್ರದ ಅಗತ್ಯವೇನು?

ವ್ಯಕ್ತಿಯ ಮರಣ ಪ್ರಮಾಣಪತ್ರವನ್ನು ಹಾಜರುಪಡಿಸಿದ ಬಳಿಕವೇ ಅವರ ಹೆಸರಿನಲ್ಲಿದ್ದ ಬ್ಯಾಂಕ್‌ ಖಾತೆ, ಭವಿಷ್ಯನಿಧಿ, ಗ್ರಾಚ್ಯುಯಿಟಿ, ಅಪಘಾತ ವಿಮೆ, ಕೇಂದ್ರ ಸರ್ಕಾರದ ವಿಮಾ ಸೌಲಭ್ಯಗಳು ದೊರೆಯುತ್ತವೆ. ಮೃತರ ಹೆಸರಿನಲ್ಲಿದ್ದ ಆಸ್ತಿಗಳನ್ನು ಅವರ ಅವಲಂಬಿತರಿಗೆ ಹಸ್ತಾಂತರಿಸುವುದಕ್ಕೂ ಮರಣ ಪ್ರಮಾಣಪತ್ರ ಅಗತ್ಯವಾಗಿದೆ.

ಕೋವಿಡ್‌ನಿಂದ ಮೃತಪಟ್ಟವರ ಮನೆಗಳಿಗೇ ಮರಣ ಪ್ರಮಾಣಪತ್ರ ತಲುಪಿಸಲು ಪಾಲಿಕೆ ಯೋಜನೆ ರೂಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆದಿದೆ
-ಸ್ನೇಹಲ್ ಲೋಖಂಡೆ
ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT