ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ಶೇ 86ರಷ್ಟು ಸಾಧನೆ

ಮನೆ ಮನೆಗೆ ಹೋಗಿ ಲಸಿಕೆ ನೀಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ
Last Updated 2 ಡಿಸೆಂಬರ್ 2021, 6:01 IST
ಅಕ್ಷರ ಗಾತ್ರ

ಕಲಬುರಗಿ: ಕೋವಿಡ್ ಎರಡನೇ ಅಲೆ ಬಳಿಕ ಜನರಲ್ಲಿ ಈಗ ಕೋವಿಡ್ ಹೊಸ ತಳಿ ಓಮೈಕ್ರಾನ್ ಭೀತಿ ಆವರಿಸಿದೆ. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆಯು ಲಸಿಕೆ ನೀಡಿಕೆ ಕಾರ್ಯ ಚುರುಕುಗೊಳಿಸಿದೆ.

ಕೆಲ ಜನರು ಸ್ವಯಂಪ್ರೇರಿತವಾಗಿ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯುತ್ತಿದ್ದಾರೆ. ಆದರೆ, ಈ ಪ್ರಮಾಣ ತೀರಾ ಕಡಿಮೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಕೋವಿಡ್ ಮೊದಲನೇ ಡೋಸ್ ಲಸಿಕೆ ಪಡೆಯದವರ ಸಂಖ್ಯೆಯೂ ಹೆಚ್ಚು ಇದೆ. ಹೀಗಾಗಿ ಅರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಚಿತ್ತಾಪುರ ತಾಲ್ಲೂಕಿನಲ್ಲಿ ಶೇ 91ರಷ್ಟು ಜನ ಮೊದಲ ಡೋಸ್‌ ಪಡೆದಿದ್ದು, ಇದು ಮೊದಲ ಸ್ಥಾನದಲ್ಲಿದೆ. ಕಲಬುರಗಿ ತಾಲ್ಲೂಕಿನಲ್ಲಿ ಶೇ 74ರಷ್ಟು ಜನ ಲಸಿಕೆ ಪಡೆದಿದ್ದಾರೆ.

ಎರಡನೇ ಡೋಸ್ ಲಸಿಕೆ ನೀಡಿಕೆಯಲ್ಲಿ ಕಲಬುರಗಿ ನಗರ ತಾಲ್ಲೂಕಿನಲ್ಲಿ ಶೇ 72ರಷ್ಟು ಸಾಧನೆ ಮಾಡಲಾಗಿದೆ. ಚಿತ್ತಾಪುರ ತಾಲ್ಲೂಕಿನಲ್ಲಿ ಶೇ 34ರಷ್ಟು ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಶೇ 86ರಷ್ಟು ಮೊದಲ ಡೋಸ್ ಮತ್ತು ಶೇ 49ರಷ್ಟು ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಈವರೆಗೆ 25,08,703 ಜನರಿಗೆ ಲಸಿಕೆ ನೀಡಲಾಗಿದೆ.

‘ಮೊದಲ ಡೋಸ್ ಲಸಿಕೆ ನೀಡಲು ಆದ್ಯತೆ ನೀಡಲಾಗುತ್ತಿದೆ. ಆ ನಂತರ ಎರಡನೇ ಡೋಸ್ ನೀಡಲಾಗುವುದು. ಅಲ್ಲದೆ, ಮೊದಲ ಡೋಸ್‌ ಪಡೆದು ಕಾಲಮಿತಿ ಮುಗಿದರೂ ಎರಡನೇ ಡೋಸ್ ಪಡೆಯದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂಥವರನ್ನು ಗುರುತಿಸಿ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ತಿಳಿಸಿದರು.

‘ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಕೊರತೆ ಇಲ್ಲ. ಸಿಬ್ಬಂದಿ ಲಸಿಕೆ ಹಾಕಲು ಹೋದ ವೇಳೆ ಕೆಲವರು ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಮೊದಲ ಡೋಸ್ ಲಸಿಕೆ ಪಡೆಯದವರು ಮತ್ತು ಲಸಿಕೆ ಪಡೆಯಲು ನಿರಾಕರಿಸಿದವರನ್ನು ಗುರುತಿಸಿ ಅಂತವರ ಮನೆಗೆ ಹೋಗಿ ಲಸಿಕೆ ನೀಡಲಾಗುತ್ತಿದೆ’ ಎಂದರು.

ವಾರದಲ್ಲಿ ಮೂರು ದಿನ ವಿಶೇಷ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ, ಲಸಿಕಾ ಕೇಂದ್ರಗಳಲ್ಲಿಯೂ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ 700 ಸಿಬ್ಬಂದಿಯನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ. ಇವರು ಲಸಿಕೆ ನೀಡುವ ಜತೆಗೆ ಲಸಿಕೆ ಪಡೆಯುವಂತೆ ಜನರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 300 ಲಸಿಕಾ ಕೇಂದ್ರಗಳಿವೆ. ಲಸಿಕೆ ನೀಡಿಕೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಇಲಾಖೆ ಸಿಬ್ಬಂದಿ ಲಸಿಕೆ ಪಡೆಯುವಂತೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಜನರೇ ಮುಂದೆ ಬಂದು ಲಸಿಕೆ ಪಡೆಯಬೇಕು. ಕೋವಿಡ್‌ನಿಂದ ರಕ್ಷಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಓಮೈಕ್ರಾನ್ ಪ್ರಕರಣ ಕಂಡುಬಂದಿಲ್ಲ. ಹೀಗೆಂದು ಜನರು ಮೈಮರೆಯಬಾರದು. ಮುಂಜಾಗ್ರತಾ ಕ್ರಮ ಅನುಸರಿಸಬೇಕು’ ಎಂದರು.

‘ಕೆಲ ಜನರು ಕೆಲಸದ ನಿಮಿತ್ತ ಬೇರೆ ಕಡೆ ಹೋಗಿದ್ದ ಕಾರಣ ಲಸಿಕೆ ಪಡೆದಿಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕಡಿಮೆ ಲಸಿಕಾಕರಣ ಆಗಿದೆ. ಕಡಿಮೆ ಲಸಿಕೆ ವಿತರಣೆಯಾಗಿರುವ ಗ್ರಾಮಗಳಲ್ಲಿ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT