ಗುರುವಾರ , ಸೆಪ್ಟೆಂಬರ್ 19, 2019
29 °C

24 ಗಂಟೆ ಕಾರಿನಲ್ಲೇ ಶವ ಇಟ್ಟು ತಿರುಗಿದನು!

Published:
Updated:
Prajavani

ಕಲಬುರ್ಗಿ: ನೆರೆಯ ತೆಲಂಗಾಣದ ಪರಗಿ ಪಟ್ಟಣದ ಬಳಿ ಶವವಾಗಿ ಪತ್ತೆಯಾಗಿರುವ ಇಲ್ಲಿನ ಕುವೆಂಪು ನಗರದ ನಿವಾಸಿ ಶಿಬಾರಾಣಿ ಜಯಪ್ರಭು (22) ಕೊಲೆ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದ್ದು, ಆರೋಪಿಯು ಶವವನ್ನು 24 ಗಂಟೆ ಕಾರಿನಲ್ಲಿಟ್ಟುಕೊಂಡು ಸುತ್ತಾಡಿದ ಮಾಹಿತಿ ಲಭ್ಯವಾಗಿದೆ.

‘ನಗರದ ಕಾಲೇಜೊಂದರಲ್ಲಿ ಚಿತ್ರಕಲೆ ಅಧ್ಯಯನ ಮಾಡುತ್ತಿದ್ದ ಶಿಬಾರಾಣಿ ಹಾಗೂ ರಾಜಾಪುರದ ನಿವಾಸಿ ರವಿಕುಮಾರ ಪೂಜಾರಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ದೈಹಿಕ ಸಂಪರ್ಕವೂ ಬೆಳೆದು ಶಿಬಾರಾಣಿ ಗರ್ಭಿಣಿಯಾಗಿದ್ದರು. ಇದು ರವಿ ತಲೆನೋವಿಗೆ ಕಾರಣವಾಗಿತ್ತು. ಇಬ್ಬರೂ ನಗರದ ಖಾಸಗಿ ನರ್ಸಿಂಗ್‌ ಹೋಮ್‌ಗೆ ಸೆ.4ರಂದು ತೆರಳಿ ತಾವಿಬ್ಬರೂ ದಂಪತಿ ಎಂದು ಸುಳ್ಳು ಹೇಳಿ ಗರ್ಭಪಾತ ಮಾಡುವಂತೆ ಕೋರಿದರು. ವೈದ್ಯರು ಹೆಚ್ಚಿನ ಡೋಸ್‌ ಇಂಜೆಕ್ಷನ್‌ ಕೊಟ್ಟು ಗರ್ಭಪಾತಕ್ಕೆ ಮುಂದಾಗಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿ ಶಿಬಾರಾಣಿ ಸಾವಿಗೀಡಾದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಇದರಿಂದ ಇನ್ನಷ್ಟು ಗಾಬರಿಯಾದ ರವಿಕುಮಾರ್‌ ತನ್ನ ಕಾರಿನಲ್ಲಿ ಶವವನ್ನು 24 ಗಂಟೆ ಇಟ್ಟುಕೊಂಡಿದ್ದಾನೆ. ಇಲ್ಲಿ ಅಂತ್ಯಸಂಸ್ಕಾರ ಮಾಡಿದರೆ ಯಾರಾದರೂ ಗುರುತು ಹಿಡಿಯಬಹುದು ಎಂಬ ಆತಂಕದಿಂದ ತೆಲಂಗಾಣಕ್ಕೆ ಶವವನ್ನು ಕೊಂಡೊಯ್ದಿದ್ದಾನೆ. ಅಲ್ಲಿನ ಜಹೀರಾಬಾದ್‌ ಪಟ್ಟಣದ ಪರಗಿ ಬಳಿಯ ಅರಣ್ಯಕ್ಕೆ ಹೋಗಿ ಅಲ್ಲಿನ ತಗ್ಗಿನಲ್ಲಿ ಶವ ಬಿಸಾಕಿ ಬೆಂಕಿ ಹಚ್ಚಿ ಕಲಬುರ್ಗಿಗೆ ವಾಪಸಾಗಿದ್ದಾನೆ’ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದರು.

‘ರವಿಕುಮಾರ್‌ ನಗರದ ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರ ಪುತ್ರನಾಗಿದ್ದು, ಶಿಬಾರಾಣಿ ಅವರನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಗರ್ಭಪಾತ ಸುಗಮವಾಗಿದ್ದರೆ ಎಲ್ಲವೂ ಸುಗಮವಾಗುತ್ತಿತ್ತು. ಆದರೆ, ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಸಾವಿಗೀಡಾಗಿದ್ದರಿಂದ ಪ್ರಕರಣ ದುರಂತ ಅಂತ್ಯ ಕಂಡಿದೆ’ ಎನ್ನುವುದು ಮೂಲಗಳ ವಿವರಣೆ.

‘ಸೆ.3ರಂದು ಶಿಬಾರಾಣಿ ಮನೆಯಿಂದ ರವಿಕುಮಾರನೊಂದಿಗೆ ಹೊರಬಿದ್ದಿದ್ದರು. ಮಗಳಿಗಾಗಿ ಮೂರು ದಿನ ಹುಡುಕಾಡಿದ ಪೋಷಕರು ಅಂತಿಮವಾಗಿ ಸೆ.6ರಂದು ಬ್ರಹ್ಮಪುರ ಠಾಣೆಯಲ್ಲಿ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ತೆಲಂಗಾಣ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಅದು ನಮ್ಮ ಠಾಣೆಗೆ ವರ್ಗಾವಣೆಯಾದ ಬಳಿಕ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದೆ’ ಎಂದು ಇಲ್ಲಿಯ ಬ್ರಹ್ಮಪುರ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಮಂತ ಇಲ್ಲಾಳ ಮಾಹಿತಿ ನೀಡಿದರು.

Post Comments (+)