ಗುರುವಾರ , ಫೆಬ್ರವರಿ 25, 2021
31 °C

ಯುವಕನ ಕೊಲೆ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಮುಸ್ಲಿಂ ಸಂಘ ಪ್ರದೇಶದಲ್ಲಿ ಗುರುವಾರ ನಡೆದಿದ್ದ ಮಹ್ಮದ ರಫೀಕ್ ಕಾಸಿಮಸಾಬ್ ನಾಗೂರವಾಲೆ (29) ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜ್‌ ನಗರದ ಶೇಖ್‌ಬಾಬಾ ಅಲಿಯಾಸ್ ಬಂಡಿಬಾಬಾ ಬಂಡಿವಾಲೆ, ಮಹ್ಮದ ಸಿರಾಜ್ ಅಬ್ದುಲ್‌ಘನಿ ಧಮ್ಮೂರವಾಲೆ ಹಾಗೂ ಬಂಬೂಬಜಾರ್‌ನ ಅಜಯ ಅಂಬಾದಾಸ ಗಾಯಕವಾಡ ಬಂಧಿತರು. ಹಣಕಾಸಿನ ವಿಚಾರ ಮತ್ತು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು ಎಂದು ತಿಳಿಸಲಾಗಿದೆ.

ಎಂಎಸ್‌ಕೆ ಮಿಲ್ ಪ್ರದೇಶದ ಹುಸೇನಿ ಗಾರ್ಡನ್‌ ನಿವಾಸಿ ರಫೀಕ್‌ನನ್ನು ಮೂವರು ಸೇರಿಕೊಂಡು ಮುಸ್ಲಿಂ ಸಂಘದಲ್ಲಿ ಕೊಲೆ ಮಾಡಿ, ಶವವನ್ನು ಆಟೊದಲ್ಲಿ ಹಾಕಿಕೊಂಡು ಹೋಗಿ ಲಾರಿ ತಂಗುದಾಣದಲ್ಲಿ ಎಸೆದು ಪರಾರಿಯಾಗಿದ್ದರು. ವಿಚಾರಣೆ ವೇಳೆ ಮೂವರೂ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿಗಳಾದ ಡಿ.ಕಿಶೋರ್‌ ಬಾಬು, ಪ್ರಸನ್ನ ದೇಸಾಯಿ, ಎಸಿಪಿ ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಶಕೀಲ ಅಂಗಡಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿಸಿದ್ದಾರೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಕಳವು: ಮೂವರಿಗೆ ಶಿಕ್ಷೆ

ಮನೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳೆಯರೂ ಸೇರಿದಂತೆ ಮೂವರಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹ 15 ಸಾವಿರ ದಂಡ ವಿಧಿಸಿ, ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಇಲ್ಲಿನ ಕೋಟೆ ನಿವಾಸಿ ಸಯ್ಯದ್‌ ಅಹ್ಮದ್‌, ಬಾಪುನಗರದ ನಿವಾಸಿ ವಸಂತಾ ರಾಜೇಶ ಉಪಾಧ್ಯಾಯ, ಸರಿತಾ ಕಾಶಿನಾಥ ಪಾಟೀಲ ಶಿಕ್ಷೆಗೆ ಗುರಿಯಾದವರು. ಕುವೆಂಪು ನಗರದ ನಿವಾಸಿ ಬಸವಣ್ಣೆಪ್ಪ ಯಶವಂತರಾವ್‌ ಎಂಬುವವರ ಮನೆಯಲ್ಲಿ ₹ 1 ಲಕ್ಷ ನಗದು ಹಾಗೂ 165 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎನ್‌.ವಿ. ಅರವಿಂದ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ವಾದ ಮಂಡಿಸಿದ್ದರು.

ತಗ್ಗಿಗೆ ಇಳಿದ ಬಸ್‌

ಚಿಂಚೋಳಿ ತಾಲ್ಲೂಕಿನ ಮಾಡಬೂಳ ಠಾಣಾ ವ್ಯಾಪ್ತಿಯ ವಚ್ಯಾ ಗ್ರಾಮದ ಬಳಿ ಶುಕ್ರವಾರ, ಸರ್ಕಾರಿ ಬಸ್‌ ರಸ್ತೆ ಬದಿಯ ತಗ್ಗಿಗೆ ಇಳಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅವಘಡ ತಪ್ಪಿದೆ.

ಈ ಮಾರ್ಗದ ರಸ್ತೆ ಕೇವಲ 3.75 ಮೀಟರ್‌ ಅಗಲವಿದೆ. ಸಿಂಗಲ್‌ ರಸ್ತೆಯಾದ್ದರಿಂದ ಎದುರು– ಬದುರಾಗಿ ವಾಹನಗಳು ಸಂಚರಿಲು ಸಾಧ್ಯವಿಲ್ಲ. ಚಿಂಚೋಳಿ ಕಡೆಯಿಂದ ಹೊರಟಿದ್ದ ಬಸ್‌ ಎದುರಿಗೆ ಬರುತ್ತಿದ್ದ ಇನ್ನೊಂದು ವಾಹನಕ್ಕೆ ದಾರಿ ಕೊಡುವ ಸಲುವಾಗಿ ರಸ್ತೆ ಅಂಚಿಗೆ ಬಂದಿದೆ. ರಸ್ತೆ ಪಕ್ಕ ಹಾಕಿದ್ದ ಮರುಮ್‌ ಕುಸಿದಿದ್ದರಿಂದ ಬಸ್‌ ನೇರವಾಗಿ ತಗ್ಗಿಗೆ ಇಳಿಯಿತು. ಚಾಲಕ ಮತ್ತೆ ಅದನ್ನು ರಸ್ತೆಗೆ ತರಲು ಹೋದಾಗ ಸ್ಟೇರಿಂಗ್‌ನ ರಾಡ್‌ ತುಂಡರಿಸಿತು. ಇದರಿಂದ ಎಚ್ಚೆತ್ತ ಚಾಲಕ ತುಸು ಮುಂದಕ್ಕೆ ಹೋಗಿ ಬಸ್‌ಅನ್ನು ಸುರಕ್ಷಿತವಾಗಿ ನಿಲ್ಲಿಸಿದರು.

ಪ್ರಯಾಣಿಕರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.