ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರವೇಶ ಪರೀಕ್ಷೆ’

ಕೇಂದ್ರೀಯ ವಿ.ವಿ.ಯಲ್ಲಿ ಮತ್ತೆರಡು ವಸತಿ ನಿಲಯ ನಿರ್ಮಾಣ: ಪ್ರೊ. ಸತ್ಯನಾರಾಯಣ
Last Updated 26 ಮೇ 2022, 9:54 IST
ಅಕ್ಷರ ಗಾತ್ರ

ಕಲಬುರಗಿ: ಪ್ರಸಕ್ತ ಶೈಕ್ಷಣಿಕ ವರ್ಷದ ವಿವಿಧ ವಿಷಯಗಳ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅರಂಭಗೊಂಡಿದ್ದು, ಜೂನ್ 18ರವರೆಗೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಬಾರಿ ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಮೂಲಕ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳೂ ಎನ್‌ಟಿಎ ಮೂಲಕವೇ ಪರೀಕ್ಷೆಗಳನ್ನು ನಡೆಸಲಿದ್ದು, ವಿದ್ಯಾರ್ಥಿಗಳು ಕರ್ನಾಟಕ ಕೇಂದ್ರೀಯ ವಿ.ವಿ. ಸೇರಿದಂತೆ ದೇಶದ ಯಾವುದೇ ವಿ.ವಿ.ಗೆ ಅರ್ಜಿ ಸಲ್ಲಿಸಬಹುದು. ನಮ್ಮ ವಿ.ವಿ.ಯಲ್ಲಿ 26 ವಿಭಾಗಗಳಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು‘ ಎಂದರು.

‘ಬಿ.ಇಡಿ, ಕಾನೂನು, ಇಂಗ್ಲಿಷ್, ಭಾಷಾಶಾಸ್ತ್ರ, ಹಿಂದಿ, ಕನ್ನಡ, ಇತಿಹಾಸ, ಪ್ರದರ್ಶನ ಕಲೆಗಳು, ಅನ್ವಯಿಕ ಭೂಗೋಳ ಮತ್ತು ಜಿಯೊ ಇನ್ಫರ್ಮ್ಯಾಟಿಕ್ಸ್‌, ಅನ್ವಯಿಕ ಭೂವಿಜ್ಞಾನ, ಎಂಎಸ್‌ಡಬ್ಲು, ಜೀವ ವಿಜ್ಞಾನ, ರಸಾಯನಶಾಸ್ತ್ರ, ಎಂಸಿಎ, ಗಣಿತ, ಭೌತಶಾಸ್ತ್ರ, ವಾಣಿಜ್ಯ, ಎಂಬಿಎ, ಪ್ರವಾಸೋದ್ಯಮ ಮತ್ತು ನಿರ್ವಹಣೆ, ಜಾನಪ‍ದ ಮತ್ತು ಬುಡಕಟ್ಟು ಅಧ್ಯಯನಗಳು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸಾರ್ವಜನಿಕ ಆಡಳಿತ ಮತ್ತು ಆಡಳಿತ, ಅರ್ಥಶಾಸ್ತ್ರ ವಿಷಯದಲ್ಲಿ ಪಿ.ಜಿ. ಕಾರ್ಯಕ್ರಮಗಳು, ಎಂಬೆಡೆಡ್, ಎಂಬೆಡೆಡ್ ಮತ್ತು ರಿಯಲ್ ಟೈಮ್ ಸಿಸ್ಟಂ, ಪವರ್ ಮತ್ತು ಎಂಜಿನಿಯರಿಂಗ್ ವಿಷಯಗಳಲ್ಲಿ ಎಂ.ಟೆಕ್. ಕೋರ್ಸುಗಳಿಗೆ ಅರ್ಜಿ ಸಲ್ಲಿಸಬಹುದು’ ಎಂದು ಹೇಳಿದರು.

‘ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರವೇಶ ಪರೀಕ್ಷೆಗಳ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ವಿವಿಧ ಕಾಲೇಜುಗಳೊಂದಿಗೆ ಸಂಪರ್ಕ ಸಾಧಿಸಿ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕಲು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯವೂ ನಡೆದಿದೆ’ ಎಂದರು.

ವಿವಿಧ ಕೋರ್ಸ್‌ಗಳಿಗೆ ಅರ್ಜಿ ಹಾಕುವವರು cuet.nta.nic.in ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ www.cuk.ac.inಗೆ ಭೇಟಿ ನೀಡಬಹುದು ಎಂದು ಹೇಳಿದರು.

ಶಿಷ್ಯವೇತನ: ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಡಿ ಶಿಷ್ಯವೇತನವನ್ನು ನೀಡಲಾಗುವುದು. ಇದಕ್ಕಾಗಿ ವಿ.ವಿ.ಯಲ್ಲಿ ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಗಿದೆ ಎಂದು ಕುಲಪತಿ ಪ್ರೊ. ಸತ್ಯನಾರಾಯಣ ತಿಳಿಸಿದರು.

ಪರೀಕ್ಷಾ ನಿಯಂತ್ರಕ ಪ್ರೊ. ಚನ್ನವೀರ ಆರ್.ಎಂ, ಪ್ರವೇಶ ಸಮಿತಿ ಅಧ್ಯಕ್ಷ ಪ್ರೊ. ಹನುಮೇಗೌಡ, ಸಹಾಯಕ ಪರೀಕ್ಷಾ ನಿಯಂತ್ರಕ ಡಾ. ಭರತ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ದೀಪ್ತಿ ಗೋಷ್ಠಿಯಲ್ಲಿದ್ದರು.

‘ಎರಡು ವಸತಿ ನಿಲಯ ನಿರ್ಮಾಣ’

ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೊಸದಾಗಿ ಎರಡು ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ. ತಲಾ 500 ಸಾಮರ್ಥ್ಯದ ವಸತಿ ನಿಲಯಗಳಲ್ಲಿ ಒಂದು ವಿದ್ಯಾರ್ಥಿಗಳಿಗೆ, ಇನ್ನೊಂದು ವಿದ್ಯಾರ್ಥಿನಿಯರಿಗೆ ನೀಡಲಾಗುವುದು. ಕೆಲವೇ ತಿಂಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ ಎಂದರು.

ಅಲ್ಲದೇ, ಕಲಬುರಗಿಯಿಂದ ದೂರದಲ್ಲಿರುವ ಕಡಗಂಚಿಗೆ ನಿತ್ಯ ವಿ.ವಿ. ಬೋಧಕ ಸಿಬ್ಬಂದಿ ಬಂದು ಹೋಗುತ್ತಿದ್ದಾರೆ. ಎಲ್ಲರಿಗೂ ಆಗುವಷ್ಟು ವಸತಿಗೃಹಗಳಿಲ್ಲ. ಹೀಗಾಗಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ತಕ್ಕಂತೆ ಹೊಸದಾಗಿ ವಸತಿಗೃಹಗಳನ್ನೂ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

38 ಹುದ್ದೆಗಳಿಗೆ 1100 ಅರ್ಜಿ!

38 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದ ಬಳಿಕ 1100 ಅರ್ಜಿಗಳು ಬಂದಿವೆ ಎಂದು ಕುಲಪತಿ ಪ್ರೊ. ಸತ್ಯನಾರಾಯಣ ತಿಳಿಸಿದರು.

ಮತ್ತೆ ಹೊಸದಾಗಿ 40 ಸಹಾಯಕ ಪ್ರಾಧ್ಯಾಪಕರು ಹಾಗೂ 20 ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಶೀಘ್ರ ಅಧಿಸೂಚನರ ಹೊರಡಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT