ಗುರುವಾರ , ಆಗಸ್ಟ್ 18, 2022
24 °C
ಹಣಮಂತ ಹೊಸಮನಿ ಕೊಲೆ ಪ್ರಕರಣ

‘ನ್ಯಾಯಕ್ಕಾಗಿ ಮುಖ್ಯಮಂತ್ರಿ ಬಳಿ ನಿಯೋಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕಲ್ಲೂರ–ಕೆ ಗ್ರಾಮದ ಬಳಿ ಈಚೆಗೆ ನಡೆದ ಹಣಮಂತ ಹೊಸಮನಿ ಕೂಡಲಗಿ ಅವರ ಕೊಲೆ ಪ್ರಕರಣ ಕುರಿತು ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ
ಹಾಗೂ ಗೃಹಸಚಿವರ ಬಳಿ ನಿಯೋಗ ಹೋಗಿ ಮನವಿ ಮಾಡಲಾಗುವುದು’ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ವಿಠಲ್ ದೊಡ್ಡಮನಿ ತಿಳಿಸಿದರು.

‘ತನಿಖಾಧಿಕಾರಿಯೇ ಈ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ. ಅವರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿಕೊಡಬೇಕು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮತ್ತು ಅವರ ಸಹೋದರ ಬಸವರಾಜ ಪಾಟೀಲ ಅವರ ಹೆಸರನ್ನು ಯಾವುದೇ ಕಾರಣಕ್ಕೂ ಪ್ರಕರಣದಿಂದ ಕೈಬಿಡಬಾರದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮಠಾಧೀಶರು, ವೀರಶೈವ– ಲಿಂಗಾಯತ ಮುಖಂಡರ ಒತ್ತಡಕ್ಕೆ ಮಣಿದು ಪ್ರಭಾವಿ ಮುಖಂಡರ ಹೆಸರನ್ನು ಕೈಬಿಡಬಾರದು. ತಮ್ಮದೇ ಸರ್ಕಾರವಿದೆ ಎಂಬ ಕಾರಣಕ್ಕೆ ಕೊಲೆಗೀಡಾದ ಪರಿಶಿಷ್ಟ ವ್ಯಕ್ತಿಯ ಕುಟುಂಬಕ್ಕೆ ಅನ್ಯಾಯ ಮಾಡಬಾರದು. ಸತ್ತುಹೋದ ಹಣಮಂತ ಅವರ ಕುಟುಂಬದವರಿಗೆ ರಕ್ಷಣೆ ನೀಡಬೇಕು ಎಂದೂ ನಿಯೋಗ ಆಗ್ರಹಿಸಲಿದೆ’ ಎಂದರು.

‘ಎಫ್‍ಐಆರ್‌ನಲ್ಲಿ ದೊಡ್ಡಪ್ಪಗೌಡ ಅವರ ಹೆಸರು ಕೈಬಿಡುವಂತೆ ಮಠಾಧೀಶರು ಆಗ್ರಹಿಸಿರುವುದು ಸರಿಯಲ್ಲ. ಸಮಾಜ ತಿದ್ದಬೇಕಾದ ಮಠಾಧೀಶರೇ ಆರೋಪಿಗಳ ಪರವಾಗಿ ನಿಂತರೆ ತತ್ವ ಹೇಳುವುದು ಹೇಗೆ ಸಾಧ್ಯ? ಒಂದು ವೇಳೆ ಮಠಾಧಿಪತಿಗಳ ಒತ್ತಡಕ್ಕೆ ಮಣಿದು ಹೆಸರು ಕೈಬಿಟ್ಟರೆ ಪರಿಶಿಷ್ಟ ಸಂಘಟನೆಗಳಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಮುಖಂಡ ಮಲ್ಲೇಶಿ ಸಜ್ಜನ ಹೇಳಿದರು.

ಸಂಘಟನೆಯ ಮುಖಂಡರಾದ ದೇವೇಂದ್ರ ಶೆಳ್ಳಗಿ, ಮಲ್ಲಪ್ಪ ಹೊಸಮನಿ, ಎ.ಬಿ.ಹೊಸಮನಿ, ಸೂರ್ಯಕಾಂತ ನಿಂಬಾಳಕರ, ಸುರೇಶ ಹಾದಿಮನಿ, ಸುರೇಶ ಮೆಂಗನ್, ರಾಜಕುಮಾರ ಕಪನೂರ, ವಿಶಾಲ್ ದರ್ಗಿ, ಜೈಭೀಮ ಲೆಂಗಟಿ, ಸುಭಾಷ ಚನ್ನೂರ, ಭೀಮರಾಯ ನಗನೂರ, ದೇವೇಂದ್ರ ಸಿನ್ನೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು