ಸೋಮವಾರ, ಆಗಸ್ಟ್ 8, 2022
24 °C
ಅಸಂಘಟಿತ ಕಾರ್ಮಿಕರಿಗೆ ₹ 2000 ನೆರವು: ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಸೂಚನೆ

ಗ್ರಾ.ಪಂ ಮಟ್ಟದಲ್ಲೇ ಅರ್ಜಿಗೆ ಅವಕಾಶ: ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಲಾಕ್‌ಡೌನ್‌ ಕಾರಣ ಆರ್ಥಿಕ ಸಂಕಷ್ಟಕ್ಕೀಡಾದ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರವು ₹ 2000 ನೆರವು ಘೋಷಿಸಿದೆ. ಇದರ ಲಾಭ ಹೆಚ್ಚಿನ ಜನರಿಗೆ ಸಿಗುವಂತೆ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು’ ಎಂದಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಮಿಕ ಇಲಾಖೆ, ಕಂದಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಅವರು ಮಂಗಳವಾರ ವರ್ಚುವಲ್‌ ಸಭೆ ನಡೆಸಿದರು.

‘ಈ ಸಂಬಂಧ ಗ್ರಾಮ ಪಂಚಾಯಿತಿ ಕಚೇರಿಯಲ್ಲಿರುವ ಡಾಟಾ ಎಂಟ್ರಿ ಆಪರೇಟರ್ ಸೇವೆ ಪಡೆಯಬೇಕು. ಸಾಮಾನ್ಯ ಸೇವಾ ಕೇಂದ್ರದ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಈ ಸೇವೆಯನ್ನು ಗ್ರಾಮ ಪಂಚಾಯಿತಿಯಲ್ಲಿಯೇ ಒದಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಅವರು ಅಗತ್ಯ ಕ್ರಮ ವಹಿಸಬೇಕು’ ಎಂದರು.

‘ಲಾಕ್‌ಡೌನ್ ಪರಿಹಾರ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ದೊರಕುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಈ ಕುರಿತು ಟ್ರೇಡ್ ಯೂನಿಯನ್, ಕಾರ್ಮಿಕ ಸಂಘಟನೆಗಳ ಸಹಕಾರ ಪಡೆದು ಜಿಲ್ಲೆಯಾದ್ಯಂತ ಹೆಚ್ಚಿನ ಜಾಗೃತಿ ಮೂಡಿಸಬೇಕು. ಕಾರ್ಮಿಕ ವರ್ಗ ಹೆಚ್ಚಿರುವ ಪ್ರದೇಶದಲ್ಲಿ ಶಿಬಿರ ಆಯೋಜಿಸಿ ಸ್ಥಳದಲ್ಲಿಯೇ ಅರ್ಜಿ ಪಡೆಯಬೇಕು. ನಗರ– ಪಟ್ಟಣ ಪ್ರದೇಶದಲ್ಲಿ ಕಾರ್ಮಿಕರು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಸ್ಥಳೀಯ ಸಂಸ್ಥೆಗಳು ಕಾರ್ಯೋನ್ಮುಖರಾಗಬೇಕು’ ಎಂದೂ ಸಲಹೆ ನೀಡಿದರು.

‘ಅಸಂಘಟಿಕ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರಿಗೆ ಒಂದು ಬಾರಿ ಪರಿಹಾರ ಸಿಗಲಿದೆ. 18 ರಿಂದ 65 ವಯೋಮಾನದ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಕುಟುಂಬದ ಪೈಕಿ ಒಬ್ಬರಿಗೆ ಮಾತ್ರ ಈ ಸೌಲಭ್ಯ ಇದೆ. ಉದ್ಯೋಗ ಪ್ರಮಾಣ ಪತ್ರ, ಆಧಾರ್‌ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳನ್ನು ಸೇವಾ ಸಿಂಧು ಮೂಲಕ ಜುಲೈ 20ರೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ಹಾಕಲು ನಿಗದಿಕ್ಕಿಂತ ಹೆಚ್ಚಿನ ಹಣ ಪಡೆಯುತ್ತಾರೆ ಎಂಬ ಆರೋಪವಿದ್ದು, ಈ ಸಂಬಂಧ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದರು.

‘ಕಾರ್ಮಿಕರಿಗೆ ವೃತ್ತಿ ಪ್ರಮಾಣ ಪತ್ರ ನೀಡಲು ಪಾಲಿಕೆ, ಸ್ಥಳೀಯ ಪೌರ ಸಂಸ್ಥೆ, ತಹಶೀಲ್ದಾರ್‌, ಉಪ ತಹಶೀಲ್ದಾರ್‌, ಪಿಡಿಒ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಪರಿಸರ, ಕಾರ್ಮಿಕ ಇಲಾಖೆಯ ಸೇರಿದಂತೆ ವಿವಿಧ ಹಂತದ ಎಲ್ಲ ಅಧಿಕಾರಿಗಳು, ಪತ್ರಾಂತಿಕ ಅಧಿಕಾರಿಗಳಿಗೂ ಅಧಿಕಾರ ನೀಡಲಾಗಿದೆ. ಕಾರ್ಮಿಕರು ಪ್ರಮಾಣ ಪತ್ರ ಕೇಳಿಬಂದಲ್ಲಿ ಆದ್ಯತೆ ಮೇಲೆ ಪ್ರಮಾಣ ಪತ್ರ ನೀಡಬೇಕು’ ಎಂದೂ ಜ್ಯೋತ್ಸ್ನಾ ನಿರ್ದೇಶನ ನೀಡಿದರು.

ಶೀಘ್ರ ವಿಲೇವಾರಿ: ಕಲಬುರ್ಗಿ ಪ್ರಾದೇಶಿಕ ವಿಭಾಗದ ಕಾರ್ಮಿಕ ಉಪ ಆಯುಕ್ತ ಡಿ.ಜಿ.ನಾಗೇಶ್ ಮಾತನಾಡಿ, ‘ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಣಿಯಾದ 7000 ಫಲಾನುಭವಿಗಳು ಇದ್ದಾರೆ. ಇವರನ್ನು ಹೊರತುಪಡಿಸಿ, ಜಿಲ್ಲೆಯಲ್ಲಿ ಪರಿಹಾರಕ್ಕೆ ಇದೂವರೆಗೆ 13,323 ಅರ್ಜಿಗಳು ಬಂದಿವೆ. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದ ಕೂಡಲೇ ಕಾರ್ಮಿಕ ಅಧಿಕಾರಿಗಳ ಲಾಗಿನ್‌ಗೆ ಬಂದು ಅಲ್ಲಿಂದ ವಿಲೇವಾರಿ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಡಿಯುಡಿಸಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ, ಸಹಾಯಕ ಕಾರ್ಮಿಕ ಆಯುಕ್ತೆ ಆರತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು