ಮಂಗಳವಾರ, ಮೇ 24, 2022
30 °C

‘ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಕರ್ನಾಟಕ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಚುನಾವಣೆಯ ನೀತಿ- ಸಂಹಿತೆ ಈಗಾಗಲೇ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಯಾವುದೇ ಇಲಾಖೆಗಳು ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡುವಂತಿಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.

ನಗರದಲ್ಲಿ ಶುಕ್ರವಾರ ಚುನಾವಣೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜೊತೆಗೆ ಯಾವುದೇ ಕಾಮಗಾರಿಯ ಕ್ರಿಯಾಯೋಜನೆ ಮಾಡುವಂತಿಲ್ಲ. ಆಡಳಿತಾತ್ಮಕ ಅನುಮೋದನೆ ನೀಡುವಂತಿಲ್ಲ. ಹೊಸ ಟೆಂಡರ್ ಕರೆಯುವಂತಿಲ್ಲ. ನೀತಿ-ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಯಾವುದೇ ಸದಸ್ಯರು ಅಧಿಕೃತ ಸಭೆ ಕರೆಯುವಂತಿಲ್ಲ’ ಎಂದರು.

‘ಯಾವುದೇ ವ್ಯಕ್ತಿ ₹ 50 ಸಾವಿರ ನಗದು ಕೊಂಡೊಯ್ಯಬಹುದು. ಅದಕ್ಕಿಂತ ಹೆಚ್ಚು ನಗದು ಕೊಂಡೊಯ್ಯಬೇಕಾದರೆ ಅಗತ್ಯ ದಾಖಲೆಗಳನ್ನು ಪ್ರದರ್ಶಿಸಬೇಕು. ಫ್ಲೈಯಿಂಗ್ ಸ್ಕ್ವಾಡ್ ಟೀಮ್ ₹ 10 ಲಕ್ಷವರೆಗೆ ಅಕ್ರಮವಾಗಿ ಸಾಗಿಸುವ ನಗದು ಹಣವನ್ನು ಜಫ್ತಿ ಮಾಡಬಹುದಾಗಿದೆ. ₹ 10 ಲಕ್ಷಕ್ಕೂ ಹೆಚ್ಚಿನ ಮೊತ್ತದ ಹಣ ಇದ್ದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಲಿದ್ದಾರೆ’ ಎಂದು ಅವರು ತಿಳಿಸಿದರು.

‘ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮ ಮದ್ಯ ಸಾಗಾಟ ಬಗ್ಗೆ ಹದ್ದಿನ ಕಣ್ಣಿಡಬೇಕು. ವಶಪಡಿಸಿಕೊಂಡ ಮದ್ಯವನ್ನು ಬ್ರ್ಯಾಂಡ್‍ವಾರು ಮಾಹಿತಿ ಸಂಗ್ರಹಿಸಿಡಬೇಕು. ಅಕ್ರಮವಾಗಿ ಸಾಗಿಸುವ ನಗದು, ಮದ್ಯ, ಶಸ್ತ್ರಾಸ್ತ್ರಗಳ ವಶಪಡಿಸಿಕೊಂಡ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪ್ರತಿದಿನ ವರದಿ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕರೆನ್ಸಿ ಚೆಸ್ಟ್ ಬ್ರ್ಯಾಂಚ್‌ನಿಂದ ಇತರೆ ಬ್ಯಾಂಕ್, ಎಟಿಎಂ ಕೇಂದ್ರಗಳಿಗೆ ನಗದು ರವಾಣಿಸುವಾಗ ವಾಹನದಲ್ಲಿ ಎಲ್ಲಾ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

‘ಚುನಾವಣೆ ಸಂದರ್ಭದಲ್ಲಿ ಅಕ್ರಮಗಳು ಕುರಿತಂತೆ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಂ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು. ಪ್ರತಿ ಗ್ರಾಮ ಪಂಚಾಯಿತಿಯೂ ಕೇಂದ್ರ ಸ್ಥಾನದಲ್ಲಿ ಮತಗಟ್ಟೆಯನ್ನು ತೆರೆಯಲಾಗುವುದೆಂದು’ ಅವರು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್. ರವಿಕುಮಾರ್ ಮಾತನಾಡಿ, ‘ಹಳ್ಳಿಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಸಂಗ್ರಹ ಕುರಿತು ತಪಾಸಣೆ ಮಾಡಬೇಕಿದೆ. ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ 62 ಗ್ರಾಮಗಳು ಬರಲಿದ್ದು, ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುವುದು’ ಎಂದು ತಿಳಿಸಿದರು.

ಎಂಸಿಸಿ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ್‌ ಶಶಿ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಡಿವೈಎಸ್ಪಿ ಪ್ರಸನ್ನ ದೇಸಾಯಿ, ಉಪ ಸಾರಿಗೆ ಆಯುಕ್ತ ನೂರ ಅಹ್ಮದ್, ಅಬಕಾರಿ ಉಪ ಆಯುಕ್ತ ಶಶಿಕಲಾ ಒಡೆಯರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಇಂತೇಸಾರ್ ಹುಸೇನ್, ಎಂ.ಸಿ.ಎಂ.ಸಿ. ಸಮಿತಿಯ ನೋಡಲ್ ಅಧಿಕಾರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ ಕೆ. ಆನಂದಶೀಲ ಇತರ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು