ಶುಕ್ರವಾರ, ಜುಲೈ 1, 2022
23 °C
ಕೋವೀಡ್–19 ಮೂರನೇ ಅಲೆ ಎದುರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಜ್ಞರ ಸಮಿತಿ ಸಭೆ

ತಾಲ್ಲೂಕು ಆಸ್ಪತ್ರೆ ಬಲವರ್ಧನೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೋವಿಡ್ ಸೋಂಕಿನ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಾಧಿತರಾಗಬಹುದು ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಗುರುವಾರ ತಜ್ಞರ ಸಮಿತಿ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ಪಡೆದರು.

ನಂತರ ಮಾತನಾಡಿದ ಅವರು, ‘ಜಿಲ್ಲೆಯಾದ್ಯಂತ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಘಟಕ ವಿಭಾಗ ಒಳಗೊಂಡಂತೆ ಆಸ್ಪತ್ರೆಯಲ್ಲಿನ ಮೂಲಸೌಕರ್ಯ ಬಲವರ್ಧನೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್ ಅವರಿಗೆ ಸೂಚಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಸ್ಥಾಪಿಸಬೇಕು. ಇದರ ಜೊತೆಗೆ ಜಿಲ್ಲೆಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸಹ ಬಲವರ್ಧನೆಗೊಳಿಸಬೇಕು ಎಂದರು.

ಕೋವಿಡ್ ಸೋಂಕಿನ ಮೊದಲನೇ ಅಲೆಯಲ್ಲಿ ಜಿಲ್ಲೆಯಲ್ಲಿ ಕಂಡುಬಂದ 22,007 ಕೋವಿಡ್ ಸೋಂಕಿತರ ಪೈಕಿ 3149 ಮತ್ತು ಎರಡನೇ ಅಲೆಯಲ್ಲಿ ಇದುವರೆಗೆ ಕಂಡುಬಂದ 38,266 ಕೋವಿಡ್ ಸೋಂಕಿತರ ಪೈಕಿ 5091 ಮಕ್ಕಳು ಸೋಂಕಿಗೆ ಗುರಿಯಾಗಿದ್ದಾರೆ. ಮೂರನೇ ಅಲೆಯಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು. ಹೀಗಾಗಿ ಚಿಕಿತ್ಸೆಗೆ ಬೇಕಾಗಿರುವ ಔಷಧಿಗಳು, ಕನ್ಸುಮೇಬಲ್ಸ್ ಸಾಮಗ್ರಿ, ವೈದ್ಯಕೀಯ ಉಪಕರಣಗಳ ಖರೀದಿಗೆ ಈಗಿನಿಂದಲೇ ಮುಂದಾಗಬೇಕು. ಒಂದು ತಿಂಗಳಿಗೆ ಬೇಕಾಗುವ ಔಷಧಿಗಳನ್ನು ಸಂಗ್ರಹಿಸಿಕೊಳ್ಳುವಂತೆ ಸೂಚಿಸಿದರು.

2 ವಾರದಲ್ಲಿ ಕೇಂದ್ರ ಸ್ಥಾಪಿಸಿ: ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ 2 ವಾರಗಳಲ್ಲಿ ಪೋಷಣ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಟೆಲಿ ಕನ್ಸಲ್ಟೇಷನ್ ಸೇವೆ ಪೂರೈಸಬೇಕು: ತಾಲ್ಲೂಕು ಆಸ್ಪತ್ರೆಗಳಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಇರುವುದರಿಂದ ಕಲಬುರ್ಗಿಯ ಜಿಮ್ಸ್ ಮತ್ತು ಇಎಸ್ಐಸಿ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ವೈದ್ಯರು ತಾಲ್ಲೂಕು ಆಸ್ಪತ್ರೆಗಳಲ್ಲಿ ದಾಖಲಾಗುವ ಮಕ್ಕಳಿಗೆ ಅಗತ್ಯವಿದ್ದಾಗ ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಐಇಸಿ ಚಟುವಟಿಕೆಗಳು ತೀವ್ರಗೊಳಿಸಿ: ಮಕ್ಕಳು ಮತ್ತು ಪಾಲಕರಲ್ಲಿ ಕೋವಿಡ್ 3ನೇ ಅಲೆ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಐಇಸಿ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು. ಇದರ ಜವಾಬ್ದಾರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ನಿರ್ವಹಿಸಬೇಕು ಎಂದರು.

ನಿಮ್ಹಾನ್ಸ್ ಸಂಸ್ಥೆಯು ಮಕ್ಕಳಲ್ಲಿನ ಮಾನಸಿಕ ಒತ್ತಡ ನಿವಾರಣೆಗೆ 14499 ಟೋಲ್ ಫ್ರೀ ಸಂಖ್ಯೆ ನೀಡಿದ್ದು, ಇದನ್ನು ಅರಿವಿನ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳಬೇಕು ಎಂದರು.

ಇಂಡಿಯನ್ ಪಿಡಿಯಾಟ್ರಿಕ್ ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ವಾಣಿಶ್ರೀ ಪಾಟೀಲ, ಜಿಲ್ಲೆಯಾದ್ಯಂತ 90 ಮಕ್ಕಳ ತಜ್ಞರಿದ್ದು, ಅವರೆಲ್ಲರಿಗೂ ಕೋವಿಡ್ ಮೂರನೇ ಅಲೆ ಕುರಿತು ಈಗಾಗಲೆ ವೆಬಿನಾರ್ ಮೂಲಕ ಅಗತ್ಯ ಮಾಹಿತಿ ನೀಡಲಾಗಿದೆ. ನಗರದ 15 ಮಕ್ಕಳ ಆಸ್ಪತ್ರೆಗಳ ಪೈಕಿ 7 ಆಸ್ಪತ್ರೆಗಳು ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಇನ್ನೆರಡು ದಿನಗಳಲ್ಲಿ 2–3 ಆಸ್ಪತ್ರೆಗಳು ಈ ಪಟ್ಟಿಗೆ ಸೇರಲಿವೆ ಎಂದರು.

ಡಾ.ಶರಣಬಸಪ್ಪ ಗಣಜಲಖೇಡ ಅವರು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳ ಕುರಿತು ವಿವರಿಸಿದರು.

ಕಲಬುರ್ಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್.ರವಿಕುಮಾರ, ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯಿತಿ ಸಿಇಓ ಡಾ. ದಿಲೀಷ್ ಶಶಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ಇಎಸ್ಐಸಿ ಡೀನ್ ಡಾ. ಇವಾನೋ ಲೋಬೊ, ಜಿಲ್ಲಾ ಸರ್ಜನ್ ಡಾ. ಅಂಬಾರಾಯ ರುದ್ರವಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಕನ್ಸಲ್ಟೆಂಟ್ ಡಾ.ಅನೀಲಕುಮಾರ ತಾಳಿಕೋಟಿ, ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗುರು ಪಾಟೀಲ, ಜಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಡಾ.ಸಂದೀಪ, ಬಸವೇಶ್ವರ ಆಸ್ಪತ್ರೆಯ ಡಾ.ಶರಣಗೌಡ ಪಾಟೀಲ, ಕೆ.ಬಿ.ಎನ್. ಆಸ್ಪತ್ರೆಯ ಡಾ.ಚೇಂಗಟೆ, ಡಿಡಿಪಿಐ ಅಶೋಕ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಇದ್ದರು.

ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ

ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ರಿಫಿಲ್ ಸೌಲಭ್ಯದೊಂದಿಗೆ 500 ಎಲ್.ಪಿ.ಎಂ. ದ್ರವ ರೂಪದ ಆಮ್ಲಜನಕ ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಬೇಕು. 50 ಆಮ್ಲಜನಕ ಜೊತೆ ಅಗತ್ಯ ಜಂಬೊ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.

ಮಕ್ಕಳ ಚಿಕಿತ್ಸೆಗೆ ಹಾಸಿಗೆ ಸಂಖ್ಯೆ ಹೆಚ್ಚಳ ಮಾಡಬೇಕು. ಜಿಮ್ಸ್ ಆಸ್ಪತ್ರೆಯಲ್ಲಿನ ಎಸ್ಎನ್‌ಸಿಯು ಘಟಕ ಸಂಪೂರ್ಣವಾಗಿ ಮಕ್ಕಳ ಚಿಕಿತ್ಸೆಗೆ ಮೀಸಲಿರಿಸಬೇಕು ಮತ್ತು ಅಗತ್ಯಕ್ಕನುಗುಣವಾಗಿ ಜಿಮ್ಸ್‌ನ 500 ಹಾಸಿಗೆಯ ಕೋವಿಡ್ ಕೇರ್ ಕೇಂದ್ರ ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು