ಕಲಬುರಗಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಡೀಮ್ಡ್ ಅರಣ್ಯ ಪ್ರದೇಶವನ್ನು ಕಂದಾಯ, ಅರಣ್ಯ, ಭೂದಾಖಲೆಗಳ ಇಲಾಖೆಯು ಜಂಟಿಯಾಗಿ ಸರ್ವೆ ಮಾಡಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.
ಜಿಲ್ಲೆಯ ತಹಶೀಲ್ದಾರರು, ಡಿಡಿಎಆರ್, ಎಡಿಎಲ್‌ಆರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, 3–4 ತಿಂಗಳ ಒಳಗಾಗಿ ವಾಸ್ತವ ವರದಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶ ಘೋಷಣೆಗೆ ಪೂರಕವಾಗಿ ಕರ್ನಾಟಕ ಅರಣ್ಯ ಕಾಯ್ದೆ–1963 ಸೆಕ್ಷನ್ 4ರ ಪ್ರಕಾರ ಜಿಲ್ಲೆಯಲ್ಲಿ 25 ಅರಣ್ಯ ಪ್ರದೇಶಗಳನ್ನು ಅಧಿಸೂಚಿಸಿದ್ದು, ಇದರಲ್ಲಿ ಪ್ರಗತಿಯಲ್ಲಿರುವ 8 ಪ್ರದೇಶಗಳ ಕುರಿತು ಕೂಡಲೇ ಕಂದಾಯ ಉಪ ವಿಭಾಗದ ಉಪವಿಭಾಗಾಧಿಕಾರಿ ಪ್ರಸ್ತಾವ ಸಲ್ಲಿಸಿದರೆ ಸೆಕ್ಷನ್–17ರಂತೆ ಕಾಯ್ದಿಟ್ಟ ಅರಣ್ಯ ಪ್ರದೇಶ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.
ಇನ್ನು ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಸಂರಕ್ಷಣೆ ನಿಟ್ಟಿನಲ್ಲಿ ಕೆಲವು ಗ್ರಾಮಗಳಲ್ಲಿ ಪಹಣಿ, ಮೊಟೇಷನ್‍ನಲ್ಲಿ ಮಾಲೀಕತ್ವದ ಬಗ್ಗೆ ತಕರಾರು ಇದ್ದು, ಇದನ್ನು ತಹಶೀಲ್ದಾರರು, ಆರ್‌ಎಫ್‌ಓಗಳು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಉಪವಿಭಾಗಾಧಿಕಾರಿ ರೂಪಿಂದರ್ ಸಿಂಗ್ ಕೌರ್, ಪ್ರಭುರೆಡ್ಡಿ, ತಾಲೂಕಿನ ತಹಶೀಲ್ದಾರರು, ಎಡಿಎಲ್‌ಆರ್ ಭಾಗಿಯಾಗಿದ್ದರು.