ಶುಕ್ರವಾರ, ಫೆಬ್ರವರಿ 21, 2020
31 °C
ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಶರತ್ ಬೇಸರ

ದುಡ್ಡು ಕೊಟ್ಟಾಗಲಷ್ಟೇ ಕನ್ನಡದ ಕೆಲಸ ಮಾಡ್ತೀರಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸೂಕ್ತ ಪ್ರಚಾರ ಕಾರ್ಯ ಹಾಗೂ ಸಿದ್ಧತೆಗಳು ನಡೆಯದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಶರತ್ ಬಿ. ಅವರು ದುಡ್ಡು ಕೊಟ್ಟಾಗಲಷ್ಟೇ ಕೆಲಸ ಮಾಡ್ತೀರಾ ಎಂದು ಬೇಸರದಿಂದ ಹೇಳಿದರು.

ಭಾನುವಾರ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಷತ್‌ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಿಮ್ಮ ಊರುಗಳಲ್ಲಿನ ಶಾಲೆಗಳಲ್ಲಿ ಮಕ್ಕಳಿಗೆ ಸಮ್ಮೇಳನದ ಬಗ್ಗೆ ತಿಳಿಸಲೂ ಸರ್ಕಾರಿ ಆದೇಶ ಹೊರಡಿಸಬೇಕೇ? ಈ ಬಗ್ಗೆ ನನಗೆ ತೀವ್ರ ನಿರಾಸೆಯಾಗಿದೆ. ಸಿದ್ಧತೆ ಹೇಗಿದೆ ಎಂದು ಜನರು ಕೇಳುತ್ತಾರೆ. ಆದರೆ, ಸಿದ್ಧತೆಯೇ ನಡೆದಿಲ್ಲದಿರುವಾಗ ಅವರಿಗೆ ಏನು ಉತ್ತರ ಕೊಡಬೇಕು’ ಎಂದು ಅಸಮಾಧಾನ ಹೊರಹಾಕಿದರು.

‘32 ವರ್ಷಗಳ ಬಳಿಕ ಜಿಲ್ಲೆಗೆ ಸಮ್ಮೇಳನ ಸಂಘಟಿಸುವ ಅವಕಾಶ ಒದಗಿ ಬಂದಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿತ್ತು. ಸಮ್ಮೇಳನ ಆರಂಭವಾಗಲು ಕೆಲವೇ ದಿನಗಳಿವೆ. ಈಗಲೂ ಯಾವುದೇ ಸಿದ್ಧತೆ ಇಲ್ಲ ಎಂದರೆ ಹೇಗೆ? ದುಡ್ಡು ಕೊಟ್ಟಾಗಲೇ ಕೆಲಸ ಮಾಡುವುದಾದರೆ ಇದೂ ಒಂದು ಸರ್ಕಾರಿ ಕಾರ್ಯಕ್ರಮವಾಗುತ್ತದೆ. ನಿಮ್ಮ ಪಾಲ್ಗೊಳ್ಳುವಿಕೆಯೂ ಇರಬೇಕಿತ್ತಲ್ಲ? ಕೊಂಚವಾದರೂ ಕನ್ನಡದ ಬಗ್ಗೆ ಕೆಲಸ ಮಾಡುವ ಕಳಕಳಿ ಇದ್ದರೆ ಹಣದ ಚಿಂತೆ ಮಾಡದೇ ಕೆಲಸ ಮಾಡುತ್ತಿದ್ದಿರಿ’ ಎಂದು ತರಾಟೆಗೆ ತೆಗೆದುಕೊಂಡರು.

‘₹250 ಕೊಟ್ಟು ನೋಂದಣಿ ಮಾಡಿಸಿಕೊಂಡಿಲ್ಲ. ಅದರ ಬದಲಾಗಿ ಒಒಡಿ ಕೇಳುತ್ತಿದ್ದೀರಿ. ಹೀಗೆ ಕೇಳಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ. ಒಒಡಿ ಆದೇಶ ಹೊರಡಿಸುವುದು ದೊಡ್ಡದಲ್ಲ. ಆದರೆ, ಮೊದಲಿನಿಂದಲೂ ನಾನು ನೋಡುತ್ತಿರುವಂತೆ ಸ್ವಯಂ ಪ್ರೇರಿತ ತೊಡಗಿಸಿಕೊಳ್ಳುವಿಕೆ ಕಾಣಿಸುತ್ತಿಲ್ಲ’ ಎಂದು ಟೀಕಿಸಿದರು.

ಕನ್ನಡಪರ ಸಂಘಟನೆಗಳ ಧೋರಣೆಗೆ ಬೇಸರ: ಮೊದಲಿನಿಂದಲೂ ಕನ್ನಡಪರ ಸಂಘಟನೆಗಳು ಸಮ್ಮೇಳನ ನಡೆಯದಂತೆ ನೋಡಿಕೊಳ್ಳುತ್ತಿವೆ. ಸಭೆ ನಡೆಯುತ್ತಿದ್ದಾಗಲೇ ಒಳಗೆ ನುಗ್ಗಿ ಕನ್ನಡ ವಿರೋಧಿ ಘೋಷಣೆ ಕೂಗುವುದು ಎಷ್ಟರ ಮಟ್ಟಿಗೆ ಸರಿ. ಇಂಥ ಸಂಘಟನೆಗಳನ್ನು ಕನ್ನಡಪರ ಎಂದು ಕರೆಯಬೇಕೇ ಎಂದು ಪ್ರಶ್ನಿಸಿದರು.

‘ಎಲ್ಲ ತಹಶೀಲ್ದಾರ್‌ಗಳೊಂದಿಗೆ ಸಮ್ಮೇಳನದ ಸಿದ್ಧತೆ ಸಂಬಂಧ ಮಾತನಾಡಿದ್ದೇನೆ. ಸೋಮವಾರ ಕಸಾಪ ಪದಾಧಿಕಾರಿಗಳ ಸಭೆ ಕರೆಯಬಹುದು. ಎಲ್ಲ ತಾಲ್ಲೂಕುಗಳಿಗೆ ಒಂದೊಂದು ಕನ್ನಡ ರಥವನ್ನು ಕಳಿಸಿಕೊಡಲಾಗಿದೆ. ಅವುಗಳು ವಿವಿಧ ಗ್ರಾಮಗಳಿಗೆ ಸಂಚರಿಸಿ ಆಹ್ವಾನ ನೀಡಲಿವೆ’ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ‘ಯಾವ ಜಿಲ್ಲೆಯಲ್ಲಿಯೂ ಆಗದಷ್ಟು ನೋಂದಣಿ ಕಲಬುರ್ಗಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಆಗಿದೆ. 21 ಸಾವಿರಕ್ಕೂ ಅಧಿಕ ನೋಂದಣಿಯಾಗಿವೆ. ಆದರೆ, ಇನ್ನಷ್ಟು ಜನ ನೋಂದಣಿ ಮಾಡಿಕೊಂಡರೆ ವ್ಯವಸ್ಥೆ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ, ನೋಂದಣಿ ದಿನಾಂಕವನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು