ಶನಿವಾರ, ಅಕ್ಟೋಬರ್ 24, 2020
27 °C
32 ಗ್ರಾಮಗಳ ಜನತೆ ಸುರಕ್ಷಿತ ಸ್ಥಳಕ್ಕೆ ರವಾನೆ

ಮಹಾರಾಷ್ಟ್ರದ ಉಜನಿ, ವೀರ್‌ ಜಲಾಶಯದಿಂದ 8 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಹಾರಾಷ್ಟ್ರದ ಉಜನಿ ಮತ್ತು ವೀರ್‌ ಅಣೆಕಟ್ಟೆಗಳಿಂದ 8 ಲಕ್ಷ ಕ್ಯುಸೆಕ್‌ವರೆಗೆ ನೀರು ಬಿಡುವ ಸಾಧ್ಯತೆ ಇರುವುದರಿಂದ ಮೊದಲ ಹಂತದಲ್ಲಿ ಪ್ರವಾಹ ಭೀತಿ ಎದುರಾದ 32 ಗ್ರಾಮಗಳ 12,114 ಜನರನ್ನು ಸುರಕ್ಷಿತ ಸ್ಥಳಗಳಗೆ ಕಳಿಸಲಾಗಿದೆ.

ಇಷ್ಟೊಂದು ಬೃಹತ್ ಪ್ರಮಾಣದ ನೀರನ್ನು ಸೊನ್ನ ಭೀಮಾ ಬ್ಯಾರೇಜಿನಿಂದ ಬಿಟ್ಟರೆ ಅಫಜಲಪುರ, ಜೇವರ್ಗಿ, ಕಲಬುರ್ಗಿ, ಚಿತ್ತಾಪೂರ ಹಾಗೂ ಶಹಾಬಾದ್ ತಾಲ್ಲೂಕುಗಳ ಒಟ್ಟು 157 ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಅದರ ಪೈಕಿ ಮೊದಲ ಹಂತವಾಗಿ 32 ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

ಗುರುವಾರ ಸಂಜೆ 5.80 ಲಕ್ಷ ಕ್ಯುಸೆಕ್‌ ಇದ್ದ ಹೊರಹರಿವಿನ ಪ್ರಮಾಣ ಶುಕ್ರವಾರ ಸಂಜೆ ವೇಳೆಗೆ 6.30 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ. ಪ್ರವಾಹದಿಂದ ಹಾನಿ ಉಂಟಾಗುವ ಸಂಭವವಿರುವ ಎಲ್ಲಾ ಗ್ರಾಮಗಳ ಗ್ರಾಮಸ್ಥರಿಗೆ ಧ್ವನಿವರ್ಧಕ, ಡಂಗೂರ ಸಾರುವ ಮೂಲಕ ಮಾಹಿತಿ ನೀಡಲಾಗಿದೆ. ಭೀಮಾ ನದಿಯ ದಂಡೆಗಳಲ್ಲಿ ಜನ ಮತ್ತು ಜಾನುವಾರುಗಳನ್ನು ತೆಗೆದುಕೊಂಡು ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

117 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ 17,776 ಜನರನ್ನು ಇರಿಸಲಾಗಿದೆ. ಪ್ರವಾಹಕ್ಕೆ ಒಳಗಾಗುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಂತರಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ 55 ವಸತಿ ನಿಲಯಗಳನ್ನು ಗುರುತಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ ನೀರು, ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್–19 ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್, ಸ್ಯಾನಿಟೈಸರ್ ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದಿದ್ದಾರೆ.

ಭೀಮಾ ನದಿಯ ಪ್ರವಾಹ ಎದುರಿಸುವ ಪ್ರತಿ ತಾಲ್ಲೂಕಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯೆಂದು ನೇಮಕ ಮಾಡಲಾಗಿದೆ. ಭೀಮಾ ನದಿ ದಂಡೆಯಲ್ಲಿ ಬರುವ 157 ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಸಂಬಂಧವಾಗಿ ಪರಿಹಾರ ಕಾರ್ಯಗಳ ಅನುಷ್ಠಾನಕ್ಕಾಗಿ ಪ್ರತಿ 4ರಿಂದ 6 ಗ್ರಾಮಗಳಿಗೆ ಒಬ್ಬ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಜನರನ್ನು ಸ್ಥಳಾಂತರಿಸುವ ಸಂಬಂಧವಾಗಿ ಪರಿಹಾರ ಕಾರ್ಯಗಳ ಅನುಷ್ಠಾನಕ್ಕಾಗಿ ನೆರವು ನೀಡಲು ಜನ ಪ್ರತಿನಿಧಿಗಳು ಸಹ ಜಿಲ್ಲಾಡಳಿತಕ್ಕೆ ಸಂಪರ್ಕಿಸಿರುತ್ತಾರೆ ಮತ್ತು ಸಹಕರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ವರದಿ ಪ್ರಕಾರ ಜಿಲ್ಲೆಯಲ್ಲಿ ಅಂದಾಜು 10 ಸಾವಿರ ಮನೆಗಳಿಗೆ ನೀರು ನುಗ್ಗಿ ಬಟ್ಟೆ ಮತ್ತು ಪಾತ್ರೆ ಹಾನಿಯಾಗಿರುತ್ತದೆ.
ಭಾರಿ ಮಳೆಯಿಂದ ಮತ್ತು ಭೀಮಾ ನದಿಯ ಪ್ರವಾಹದಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಬಗ್ಗೆ ಬೆಳೆ ಸಮೀಕ್ಷೆ ಪ್ರಗತಿಯಲ್ಲಿರುತ್ತದೆ. ಪ್ರವಾಹ ತುರ್ತು ಸಂದರ್ಭದಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ವೈದ್ಯರ ಮತ್ತು ಅವರ ತಂಡವು ಅಂಬುಲೆನ್ಸ್‌ ಸಗಳೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.

ಮೂರು ಎನ್‌ಡಿಆರ್‌ಎಫ್‌, ಎರಡು ಹೆಲಿಕಾಪ್ಟರ್‌ ಸನ್ನದ್ಧ

ಕಲಬುರ್ಗಿ ಜಿಲ್ಲೆಯಲ್ಲಿ ಪ್ರಸ್ತುತ 3 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್) ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಪ್ರವಾಹಕ್ಕೆ ಒಳಗಾಗುವ ಗ್ರಾಮದ ಜನರ ಸುರಕ್ಷತೆಗಾಗಿ 101 ಗೃಹ ರಕ್ಷಕ ದಳದ ಈಜುಗಾರರು, ಮುಳುಗು ತಜ್ಞರು, ಬೋಟ್ ಚಾಲಕರು ಮತ್ತು ಪ್ರವಾಹ ರಕ್ಷಣಾ ತರಬೇತಿದಾರರನ್ನು ನಿಯೋಜಿಸಿಕೊಳ್ಳಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವಾಹ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಅಗ್ನಿಶಾಮಕ ದಳದ ಮತ್ತು ತುರ್ತುಸೇವೆಗಳ ಇಲಾಖೆಯಿಂದ 8 ಜಲ ವಾಹನಗಳನ್ನು ನಿಯೋಜಿಸಲಾಗಿದೆ.

ಬಾಗಲಕೋಟೆ, ಬಳ್ಳಾರಿ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಬೋಟ್‌ಗಳನ್ನು, ಚಿತ್ರದುರ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಎಸ್.ಡಿ.ಆರ್.ಎಫ್ ಸಿಬ್ಬಂದಿ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಬೀದರ ಜಿಲ್ಲೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ತರಿಸಿಕೊಳ್ಳಲಾಗುತ್ತಿದೆ.

ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣೆ ಹಾಗೂ ಅತ್ಯವಶ್ಯಕ ವಸ್ತುಗಳ ಪೂರೈಕೆಗಾಗಿ ರಾಜ್ಯ ಸರ್ಕಾರ ಎರಡು ಹೆಲಿಕಾಪ್ಟರ್‌ಗಳನ್ನು ಕಳಿಸಿಕೊಟ್ಟಿದ್ದು, ಬೀದರ್‌ ವಾಯುನೆಲೆಗೆ ಶುಕ್ರವಾರ ಬೆಳಿಗ್ಗೆಯೇ ಬಂದಿಳಿದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು