ಬುಧವಾರ, ನವೆಂಬರ್ 25, 2020
19 °C

ಸಿಗದ ಕೋವಿಡ್‌ ವರದಿ: ನಡೆಯದ ತರಗತಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜುಗಳಲ್ಲಿ ಮಂಗಳವಾರ (ನ. 19) ವಿದ್ಯಾರ್ಥಿಗಳ ಹಾಜರಾತಿ ಕಂಡುಬರಲಿಲ್ಲ. ಕಾಲೇಜುಗಳಲ್ಲಿ ಸಕಲ ಸಿದ್ಧತೆ ಮಾಡಿಕೊಂಡು, ಸಿಬ್ಬಂದಿ ಕೂಡ ಹಾಜರಾದರು. ಆದರೆ, ವಿದ್ಯಾರ್ಥಿಗಳು ಮಾತ್ರ ಬೆರಳೆಣಿಕೆಗಿಂತ ಕಡಿಮೆ ಇದ್ದರು.

ನಗರದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿಗೆ ಬೆಳಿಗ್ಗೆ 10ರ ಸುಮಾರಿಗೆ ಕೆಲವು ವಿದ್ಯಾರ್ಥಿ– ವಿದ್ಯಾರ್ಥಿನಿಯರು ಬಂದರು. ಅವರಿಗೆ ಗೇಟ್‌ನಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ, ಕೋವಿಡ್‌ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಒಳಗೆ ಬಿಡಲಾಯಿತು. ಆದರೆ, ಬಹುಪಾಲು ವಿಭಾಗಗಳಲ್ಲಿ ಹಾಜರಾತಿ ಕಡಿಮೆ ಇದ್ದ ಕಾರಣ ತರತಿಗಳು ನಡೆಯಲಿಲ್ಲ.

ಶರಣಬಸವೇಶ್ವರ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗ, ಎನ್‌.ವಿ. ಪದವಿ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಕಾಳಗಿಯ ಸರ್ಕಾರಿ ಪದವಿ ಕಾಲೇಜು, ಜಾಜಿ ಶಿಕ್ಷಣ ಸಂಸ್ಥೆ ಗುರುಕುಲ ಪದವಿ ಕಾಲೇಜು, ಅಂಬೇಡ್ಕರ್ ಪದವಿ ಕಾಲೇಜು ಸೇರಿದಂತೆ ಎಲ್ಲ ಕಾಲೇಜುಗಳಲ್ಲೂ ಆಫ್‌ಲೈನ್‌ ಪಾಠಗಳು ನಡೆಯಲಿಲ್ಲ. ಆಗೊಬ್ಬ, ಈಗೊಬ್ಬ ವಿದ್ಯಾರ್ಥಿ ಕಾಲೇಜು ಕ್ಯಾಂಪಸ್‌ನಲ್ಲಿ ಕಂಡುಬಂದರೂ, ತರಗತರಿಗಳಲ್ಲಿ ಕೊರತೆ ಎದ್ದುಕಂಡಿತು.‌

ಕೋವಿಡ್‌ ವರದಿ ಇಲ್ಲದಿದ್ದರೆ ವಾಪ‍ಸ್‌: ಪದವಿಯ 5ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳನ್ನು ಆರಂಭಿಸಲು ಅನುಮತಿ ಸಿಕ್ಕಿದೆ. ಆದರೆ, ಇದಕ್ಕೆ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೊರೊನಾ ವೈರಾಣು (ಆರ್‌ಟಿಪಿಸಿಆರ್) ಪತ್ತೆ ಪರೀಕ್ಷೆ ವರದಿ ತರುವುದು ಕಡ್ಡಾಯವಾಗಿದೆ. ಆದರೆ, ಬಹುಪಾಲು ವಿದ್ಯಾರ್ಥಿಗಳು ಇನ್ನೂ ಗಂಟಲು ಮಾದರಿಯನ್ನೇ ಕೊಟ್ಟಿಲ್ಲ. ಹೀಗಾಗಿ, ಅವರು ಕಾಲೇಜಿನತ್ತ ಸುಳಿದಿಲ್ಲ. ಜತೆಗೆ, ಪಾಲಕರಿಂದ ಕೂಡ ‘ಸ್ವಯಂ ಪ್ರೇರಣೆಯಿಂದ ಕಾಲೇಜಿಗೆ ಕಳುಹಿಸುತ್ತಿದ್ದೇವೆ’ ಎಂಬ ದೃಢೀಕರಣ ಪತ್ರ ತರಬೇಕು. ಇವುಗಳನ್ನು ತರದ ಹಲವು ವಿದ್ಯಾರ್ಥಿಗಳನ್ನು ವಾಪಸ್‌ ಕಳುಹಿಸಲಾಯಿತು.

ನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು 5ನೇ ಸೆಮಿಸ್ಟರ್‌ನಲ್ಲಿದ್ದಾರೆ. ಆದರೆ, ಮಂಗಳವಾರ ತರಗತಿಗೆ ಹಾಜರಾಗಿದ್ದು 8 ಮಂದಿ ಮಾತ್ರ. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಂದಿದ್ದರೂ ಅವರ ಬಳಿ ಕೋವಿಡ್‌ ವರದಿ ಇಲ್ಲದ ಕಾರಣ ಮರಳಿ ಕಳುಹಿಸಲಾಯಿತು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ವಿ.ಜಿ. ಉಮೆನ್ಸ್‌ ಮಹಿಳಾ ಪದವಿ ಕಾಲೇಜಿನಲ್ಲಿ ಕೂಡ ಇಬ್ಬರು ಮಾತ್ರ ತರಗತಿಗೆ ಹಾಜರಾದರು. 60 ವಿದ್ಯಾರ್ಥಿನಿಯರ ಬಳಿ ಕೋವಿಡ್‌ ವರದಿ ಇಲ್ಲದ ಕಾರಣ ಮರಳಿ ಕಳುಹಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು