ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆ

Last Updated 26 ಆಗಸ್ಟ್ 2021, 9:09 IST
ಅಕ್ಷರ ಗಾತ್ರ

ಕಲಬುರ್ಗಿ: ಸೋಮವಾರದಿಂದ ಆರಂಭವಾದ 9ರಿಂದ 12 ರ ವರೆಗಿನಭೌತಿಕ ತರಗತಿಗಳಿಗೆ ಹಾಜರಾಗುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಸಮಸ್ಯೆ ಉಂಟಾಗಿದೆ.

ಕಲಬುರ್ಗಿ ಸುತ್ತಲಿನ ನಂದೂರು ಕೆ., ಧರ್ಮಾಪುರ, ಫರಹತಾಬಾದ್, ಮರತೂರು, ಹೊನ್ನಕಿರಣಗಿ, ಮಹಾ ಗಾಂವ, ನಂದಿಕೂರು, ಖಣದಾಳ ಸೇರಿದಂತೆ ಗ್ರಾಮೀಣ ಪ್ರದೇಶಗಳ ಬಹುಪಾಲು ಮಕ್ಕಳು ಶಿಕ್ಷಣಕ್ಕೆ ನಗರ, ಪಟ್ಟಣಗಳನ್ನೇ ಅವಲಂಬಿಸಿದ್ದಾರೆ.

ಹಲವು ಗ್ರಾಮಗಳಲ್ಲಿ ಕೋವಿಡ್‌ ಕಾರಣದಿಂದ ಸ್ಥಗಿತಗೊಂಡಿದ್ದ ಬಸ್‌ ಸೇವೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿಲ್ಲ. ಸಾರಿಗೆ ಇಲಾಖೆಯಿಂದ ಬಸ್‌ ಪಾಸ್‌ ವಿತರಣೆ ಕಾರ್ಯವೂ ಶುರುವಾಗಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಟೊ ಸೇರಿದಂತೆ ಇನ್ನಿತರ ಖಾಸಗಿ ವಾಹನಗಳಲ್ಲಿ ದುಬಾರಿ ಹಣ ಕೊಟ್ಟು ಬರಬೇಕಾದ ಅನಿವಾರ್ಯತೆ ಉಂಟಾಗಿದೆ.

‌ಸಾರಿಗೆ ಸಮಸ್ಯೆಯಿಂದಾಗಿಯೇ ಜೇವರ್ಗಿ ಕಾಲೊನಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಪೋಷಕರೊಬ್ಬರು ತಮ್ಮ ಪುತ್ರಿಯ ಪ್ರವೇಶಾತಿ ಹಿಂಪಡೆದದ್ದು ಸೋಮವಾರ ಕಂಡು ಬಂತು.

‘ಪಟ್ಟಣ, ನಗರಗಳ ಮಾರ್ಗ ಗಳಲ್ಲೇ ಬಹುತೇಕ ಬಸ್‌ಗಳು ಓಡಾ ಡುತ್ತಿವೆ. ರಿಂಗ್ ರಸ್ತೆಯ ಮೂಲಕ ಅವುಗಳು ಹಾದು ಹೋಗುತ್ತಿದ್ದು, ನಗರದ ಒಳಗಿನ ಶಾಲೆ–ಕಾಲೇಜು ತಲುಪಲು ವಿದ್ಯಾರ್ಥಿಗಳು ಆಟೊಗಳ ಮೊರೆ ಹೋಗಬೇಕಿದೆ. ಬಸ್‌ ಪಾಸ್‌ ಹಾಗೂ ರೈಲ್ವೆ ರಿಯಾಯಿತಿ ಪಾಸ್‌ ಸದ್ಯ ನೀಡುತ್ತಿಲ್ಲ. ಹಾಸ್ಟೆಲ್‌ಗಳು ಕೂಡ ಆರಂಭವಾಗಿಲ್ಲ. ಇದರಿಂದ ಮಕ್ಕಳಿಗೆ ತೀವ್ರ ಸಮಸ್ಯೆ ಆಗುತ್ತಿದೆ’ ಎಂದು ವಾಡಿಯಿಂದ ಬಂದಿದ್ದ ಪಾಲಕರಾದ ತನ್ವೀರಾ ಬೇಗಂ ತಿಳಿಸಿದರು.

‘ಸೋಂಕಿನ ಆತಂಕದ ಮಧ್ಯೆಯೂ ಪೋಷಕರು ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಶಾಲೆಗೆ ಕಳುಹಿಸಲು ಮುಂದೆ ಬಂದಿದ್ದಾರೆ. ತಕ್ಷಣವೇ ಅವರಿಗೆ ಬಸ್, ರೈಲ್ವೆ ರಿಯಾಯಿತಿ ಪಾಸ್‌ಗಳ ವ್ಯವಸ್ಥೆ ಮಾಡಬೇಕು. ರಿಂಗ್ ರಸ್ತೆಯ ಮೂಲಕ ಹಾದು ಹೋಗುವ ಬಸ್‌ಗಳನ್ನು ಶಾಲೆ– ಕಾಲೇಜುಗಳ ಸಮೀಪದ ರಸ್ತೆಗಳಲ್ಲಿ ಸಂಚರಿಸಿ, ಅಲ್ಲೇ ನಿಲುಗಡೆಗೂ ಆದೇಶಿಸಬೇಕು. ವಿದ್ಯಾರ್ಥಿಗಳು ದೂರದಿಂದ ನಡೆದು ಬರುವುದು ತಪ್ಪುತ್ತದೆ. ಪೋಷಕರಿಗೂ ಆತಂಕ ದೂರವಾಗುತ್ತದೆ’ ಎನ್ನುತ್ತಾರೆ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯೆ ಸುಜಾತಾ ಎಂ.

‘ಆದೇಶ ಬಂದರೆ ಉಚಿತ ಪ್ರಯಾಣ’

ಸಾರಿಗೆ ಇಲಾಖೆಯಿಂದ ಆದೇಶ ಬಂದರೆ ನಾವು ಕೂಡ ಬಿಎಂಟಿಸಿ ಮಾದರಿಯಲ್ಲಿ ಈ ವರ್ಷದ ಶೈಕ್ಷಣಿಕ ದಾಖಲಾತಿ ಶುಲ್ಕ ಕಟ್ಟಿದ ರಶೀದಿ ಅಥವಾ ಕಾಲೇಜಿನ ಐಡಿ ಕಾರ್ಡ್‌ ತೋರಿಸಿದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಡಿಟಿಒ ರವೀಂದ್ರ ಕುಮಾರ ಪ್ರತಿಕ್ರಿಯಿಸಿದರು.

ಈ ವರ್ಷದ ಪಾಸ್ ವಿತರಣೆಯ ಆದೇಶ 2–3 ದಿನಗಳಲ್ಲಿ ಬರಬಹುದು. ಸಂಚಾರ ದಟ್ಟಣೆ ಕಡಿಮೆ ಮಾಡಲು ರಿಂಗ್ ರಸ್ತೆಗಳ ಮಾರ್ಗದಲ್ಲಿ ಬಸ್‌ ಸಂಚಾರ ಮಾಡುವಂತೆ ಸಂಚಾರಿ ಪೊಲೀಸ್‌ ಅಧಿಕಾರಿಗಳು ಆದೇಶಿಸಿದೆ. ಅವರು ಈ ಆದೇಶ ಹಿಂಪಡೆದರೆ ಶಾಲೆ, ಕಾಲೇಜುಗಳ ಸಮೀಪದಲ್ಲಿ ಬಸ್‌ಗಳು ಸಂಚರಿಸಿ ನಿಲುಗಡೆಗೆ ಅನುವು ಮಾಡಿಕೊಡುತ್ತೇವೆ ಎಂದರು.

‘ಕಳೆದ ವರ್ಷ ವಿತರಿಸಿದ ಬಸ್‌ ಪಾಸ್‌ ಅವಧಿಯ ಮಾನ್ಯತೆ ಆಗಸ್ಟ್ 31ರ ವರೆಗೆ ಇದೆ. ಸಾರಿಗೆ ಇಲಾಖೆಯಿಂದ ಆದೇಶ ಬಂದ ತಕ್ಷಣವೇ ಪಾಸ್ ವಿತರಣೆ ಆರಂಭಿಸುತ್ತೇವೆ. ಎಷ್ಟು ತಿಂಗಳಿಗೆ ಪಾಸ್ ವಿತರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ನಗರ ಬಸ್ ನಿಲ್ದಾಣದ ಟಿಕೆಟ್ ಕಾಯ್ದಿರಿಸುವಿಕೆ ವಿಭಾಗದ ಅಧಿಕಾರಿ ನಾಗಭೂಷಣ ಪಾಟೀಲ ತಿಳಿಸಿದರು.

‘ಸದ್ಯ ರೈಲ್ವೆ ಪಾಸ್‌ ವಿತರಣೆ ಇಲ್ಲ’

ಈಗಾಗಲೇ ಯಾದಗಿರಿ– ಕಲಬುರ್ಗಿ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ನಿತ್ಯ ಸಂಚರಿಸುತ್ತಿದೆ. ರೈಲ್ವೆ ಇಲಾಖೆಯು ಸಂಭವನೀಯ ಕೋವಿಡ್ 3ನೇ ಅಲೆ ನೋಡಿಕೊಂಡು ರೈಲ್ವೆ ರಿಯಾಯಿತಿ ಪಾಸ್ ಹಾಗೂ ರೈಲುಗಳ ಓಡಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಒಮ್ಮೆ ಆದೇಶ ಬಂದ ತಕ್ಷಣ ಪಾಸ್ ವಿತರಣೆಗೆ ಮುಂದಾಗುತ್ತೇವೆ. ಸದ್ಯ ಯಾವುದೇ ವಲಯದಲ್ಲಿ ಪಾಸ್‌ಗಳ ವಿತರಣೆ ನಡೆಯುತ್ತಿಲ್ಲ ಎಂದು ಕಲಬುರ್ಗಿ ರೈಲು ನಿಲ್ದಾಣದ ವ್ಯವಸ್ಥಾಪಕ ಮೋನ ರಾಮಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT