ಚಿತ್ತಾಪುರ: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಬಿಬಿಎಂಪಿ ಗುತ್ತಿಗೆದಾರ ಚಲುವರಾಜ ಅವರೊಂದಿಗೆ ಹಣಕಾಸಿನ ವಿಚಾರವಾಗಿ ನಡೆಸಿದ ಮಾತುಕತೆಯಲ್ಲಿ ಜಾತಿ ನಿಂದನೆಯ ಹಾಗೂ ಮಹಿಳೆಯರ ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಗುರುವಾರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಮಿತಿಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ತಾಲ್ಲೂಕು ಅಧ್ಯಕ್ಷ ಲೋಹಿತ ಮುದ್ದಡಗಿ, ವಿಭಾಗೀಯ ಅಧ್ಯಕ್ಷ ಆನಂದ ಮೊಗಲಾ, ಜಿಲ್ಲಾ ಮುಖಂಡ ಶ್ರೀಕಾಂತ ಶಿಂಧೆ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು, ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರಿಗೆ ದೂರು ಸಲ್ಲಿಸಿದರು.
‘ಸಾಂವಿಧಾನಿಕ ಹುದ್ದೆಯಲ್ಲಿರುವ ಶಾಸಕ ಮುನಿರತ್ನ ನಾಯ್ಡು ಅವರು ಅಸಾಂವಿಧಾನಿಕವಾಗಿ ಮಾತುಗಳನ್ನಾಡುವ ಮೂಲಕ ಪರಿಶಿಷ್ಟ ಜಾತಿಯ ಜನರಿಗೆ ಜಾತಿಯ ಹೆಸರು ಉಲ್ಲೇಖಿಸಿ ನಿಂದನೆ ಮಾಡಿದ್ದಾರೆ. ಚಲುವರಾಜನೊಂದಿಗೆ ಮಾತನಾಡಿ ಮಹಿಳೆಗೆ ಬಹಿರಂಗವಾಗಿ ಅಪಮಾನಿಸಿದ್ದಾರೆ. ಪರಿಶಿಷ್ಟ ಜಾತಿಯ ಹೆಸರು ಹೇಳುವ ಮೂಲಕ ನಿಂದನೆ ಮಾಡಿದ್ದಾರೆ. ಮುನಿರತ್ನ ವಿರುದ್ಧ ಸಾಮಾಜಿಕ ನ್ಯಾಯ ಮತ್ತು ಮಹಿಳೆಯರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾನೂನು ಪ್ರಕಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪರಶು ಮೊಗಲಾ, ಬಸವರಾಜ ಮುಡಬೂಳ, ಶರಣು ಮರಗೋಳ, ರಾಜೇಶ ಬೂಳಕರ್, ದಯಾಸಾಗರ ಚಿತ್ತೆಕಾರ, ಕುಶಾಲ ನಾಟಿಕಾರ, ಅಂಬರೀಶ ಮತ್ತಿಮೂಡ ಇದ್ದರು.