ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ: ಕಲಬುರಗಿ ನಗರದಲ್ಲೇ ಹೆಚ್ಚು ಪ್ರಕರಣ

Published 22 ಜುಲೈ 2023, 4:44 IST
Last Updated 22 ಜುಲೈ 2023, 4:44 IST
ಅಕ್ಷರ ಗಾತ್ರ

ವಿಶ್ವರಾಧ್ಯ ಎಸ್‌.ಹಂಗನಳ್ಳಿ

ಕಲಬುರಗಿ: ಜೀವಕ್ಕೆ ಮಾರಕವಾದ ಡೆಂಗಿ ರೋಗ ಪ್ರಕರಣಗಳು ಗ್ರಾಮೀಣಕ್ಕಿಂತ ಕಲಬುರಗಿ ನಗರ ಪ್ರದೇಶದಲ್ಲೇ ಹೆಚ್ಚು ದಾಖಲಾಗುತ್ತಿವೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ದೃಢಪಟ್ಟಿರುವ ಒಟ್ಟು 52 ಪ್ರಕರಣಗಳಲ್ಲಿ ಕಲಬುರಗಿ ನಗರದಲ್ಲಿಯೇ 15 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಒಟ್ಟು 379ರ ಪೈಕಿ 126 ಪ್ರಕರಣಗಳು ದೃಢಪಟ್ಟಿದ್ದವು!

ಕಲಬುರಗಿ ನಗರದಲ್ಲಿ ಫೆಬ್ರುವರಿಯಲ್ಲಿ 2, ಏಪ್ರಿಲ್‌ 2, ಮೇ 6, ಜೂನ್‌ 4, ಜುಲೈನಲ್ಲಿ 1 ಪ್ರಕರಣ ದೃಢ‍ಪಟ್ಟಿದೆ. ಅಂದರೆ ಶೇ 28ರಷ್ಟು ಪ್ರಕರಣಗಳು ನಗರದಲ್ಲಿ ದಾಖಲಾಗಿವೆ. ಡೆಂಗಿ ಪ್ರಕರಣ ಪತ್ತೆಗೆ ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 622 ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. 2022ರಲ್ಲಿ 3,272 ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, 379 ಪ್ರಕರಣ ಪತ್ತೆಯಾಗಿದ್ದವು.

ಮಹಾನಗರ ಪಾಲಿಕೆಯಿಂದ ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಆಗುವುದರಿಂದ ಜನರು ಮನೆಯ ಹೊರಗೆ ಮತ್ತು ಒಳಗಡೆ ಬ್ಯಾರಲ್‌, ಸಿಂಟೆಕ್ಸ್‌, ಪಾತ್ರೆ ಸೇರಿದಂತೆ ಇನ್ನಿತರ ವಸ್ತುಗಳಲ್ಲಿ ನೀರು ಸಂಗ್ರಹಿಸುತ್ತಾರೆ. ಸರಿಯಾಗಿ ಮುಚ್ಚದ ಕಾರಣ ಅವುಗಳಲ್ಲಿ ಡೆಂಗಿ ರೋಗಕ್ಕೆ ಕಾರಣವಾಗುವ ಈಡಿಸ್ ಈಜಿಪ್ಟಿ ಸೊಳ್ಳೆ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ.

ಜಿಮ್ಸ್‌ನ ಡಿಪಿಎಚ್‌ಎಲ್‌ ಮತ್ತು ವಿಆರ್‌ಡಿಎಲ್‌ ಲ್ಯಾಬ್‌ನಲ್ಲಿ ಮಾತ್ರ ಡೆಂಗಿ ರೋಗದ ನಿಖರ ಪರೀಕ್ಷೆ ಆಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಡ್‌ ಮೆಥೆಡ್‌ ಮೂಲಕ ರಕ್ತಪರೀಕ್ಷೆ ನಡೆಸಿ ಸಂಶಯಾಸ್ಪದ ಎಂದು ಚಿಕಿತ್ಸೆ ನೀಡಲಾಗುತ್ತದೆ.
ಡಾ.ರಾಜಶೇಖರ ಮಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಮನೆಯ ಹೊರಗಡೆ ಮತ್ತು ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್‌ ಕಪ್‌, ಪ್ಲೇಟ್‌, ಎಳನೀರು ಮತ್ತು ತೆಂಗಿನಚಿಪ್ಪು, ಪ್ಲಾಸ್ಟಿಕ್‌ ಬ್ಯಾಗ್‌ ಇನ್ನಿತರ ನೀರು ಸಂಗ್ರಹವಾಗುವ ವಸ್ತುಗಳಲ್ಲಿ ಮಳೆನೀರು ನಿಂತು ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಹೋದಾಗ ಜನರಿಂದ ನೀರು ಸಂಗ್ರಹಕಗಳನ್ನು ತೋರಿಸಲು ಸಹಕಾರ ನೀಡದಿರುವುದು ಕೂಡ ನಗರದಲ್ಲಿ ಡೆಂಗಿ ಪ್ರಕರಣ ಹೆಚ್ಚಲು ಕಾರಣವಾಗಿದೆ.

ಯಾವುದೇ ಜ್ವರ ಇದ್ದರೂ ಸಾರ್ವಜನಿಕರು ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಸಂಶಯಾಸ್ಪದ ಇದ್ದಲ್ಲಿ ರಕ್ತಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ.
ಡಾ.ಬಸವರಾಜ ಗುಳಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

ಡೆಂಗಿ ವಿರೋಧಿ ಮಾಸಾಚರಣೆ: ಜಿಲ್ಲೆಯಾದ್ಯಂತ ಜುಲೈನಲ್ಲಿ ಡೆಂಗಿ ವಿರೋಧಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ, ಆರೋಗ್ಯ ಉಪಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ, ನೀರು ಸಂಗ್ರಹಣ ತೊಟ್ಟಿಗಳನ್ನು ಪರೀಕ್ಷಿಸಿ ಲಾರ್ವಾ ಕಂಡುಬಂದಲ್ಲಿ ವಾರಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲು ತಿಳಿಸುವ ಜೊತೆಗೆ ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ.

ಡೆಂಗಿ ಸೋಂಕಿತ ಇಡೀಸ್‌ ತಾಯಿ ಸೊಳ್ಳೆಯ ಮೊಟ್ಟೆಗಳು ನೀರಿನ ಸಂಪರ್ಕಕ್ಕೆ ಬಂದು ಜನ್ಮ ತಾಳುವ ಸೊಳ್ಳೆಗಳು ಕಚ್ಚುವುದರಿಂದಲೂ ರೋಗ ಹರಡುವ ಸಾಧ್ಯತೆ ಇರುತ್ತದೆ.
ಚಾಮರಾಜ ದೊಡ್ಡಮನಿ, ಜಿಲ್ಲಾ ಕೀಟಶಾಸ್ತ್ರಜ್ಞರು

ರೋಗಲಕ್ಷಣ: ತೀವ್ರ ಜ್ವರ, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮೌಂಸಖಂಡ ಹಾಗೂ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತ ಸ್ರಾವ, ಚರ್ಮದ ಮೇಲೆ ರಕ್ತ ಸ್ರಾವದ ಗುರುತುಗಳು ಡೆಂಗಿ ರೋಗದ ಲಕ್ಷಣಗಳಾಗಿವೆ.

‘ಡೆಂಗಿ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ತೀವ್ರಜ್ವರ ಕಂಡುಬಂದಲ್ಲಿ ಕೂಡಲೇ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ನೀಡಿದಲ್ಲಿ ರೋಗದಿಂದಾಗುವ ತೊಂದರೆ ಅಥವಾ ಸಾವನ್ನು ತಪ್ಪಿಸಬಹುದು. ರೋಗ ಖಚಿತಪಟ್ಟಲ್ಲಿ ಕೇವಲ ಪ್ಯಾರಾಸಿಟಮಲ್ ಮಾತ್ರೆಗಳನ್ನೇ ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ಆಸ್ಪಿರಿನ್, ಬ್ರೂಫೆನ್ ಮಾತ್ರೆಗಳನ್ನು ಬಳಸಬಾರದು’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಸವರಾಜ ಗುಳಗಿ ತಿಳಿಸುತ್ತಾರೆ.

ನಗರದಲ್ಲಿ ನಿಯಮಿತವಾಗಿ ಚರಂಡಿಗಳ ಸ್ವಚ್ಛ ಮಾಡದಿರುವುದು ಕಸ ವಿಲೇವಾರಿ ಆಗದ ಕಾರಣ ಸೊಳ್ಳೆಗಳು ಹೆಚ್ಚಾಗಿವೆ. ಮಹಾನಗರ ಪಾಲಿಕೆಯಿಂದ ಫಾಗಿಂಗ್‌ ಕೂಡ ಮಾಡಿಸುತ್ತಿಲ್ಲ.
ಶ್ರೀಕಾಂತ ಮಾಳಗಿ, ಬ್ರಹ್ಮಪುರ ಬಡಾವಣೆ ಕಲಬುರಗಿ

‘ಡೆಂಗಿ ರೋಗವನ್ನು ನಿಯಂತ್ರಿಸಲು ನೀರು ಶೇಖರಣಾ ತೊಟ್ಟಿಗಳನ್ನು ವಾರಕ್ಕೆ ಎರಡು ಬಾರಿ ಮತ್ತು ಚಾವಣಿ ನೀರಿನ ಟ್ಯಾಂಕ್‍ಗಳನ್ನು ವಾರಕ್ಕೊಮ್ಮೆ ತೊಳೆಯಬೇಕು. ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ಎಚ್ಚರ ವಹಿಸಿ ಪರಿಸರ ಸ್ವಚ್ಛವಾಗಿಡಬೇಕು. ತ್ಯಾಜ್ಯ ವಸ್ತುಗಳಾದ ಒಡೆದ ಬಾಟಲ್, ಪ್ಲಾಸ್ಟಿಕ್ ಗ್ಲಾಸ್ ಸೂಕ್ತ ವಿಲೇವಾರಿ ಮಾಡಬೇಕು. ಎಳನೀರು ಹಾಗೂ ತೆಂಗಿನಚಿಪ್ಪುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಅನುಪಯುಕ್ತ ಟೈರ್‌ಗಳಲ್ಲಿ ನೀರು ಸಂಗ್ರಹ ಆಗದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಹಗಲು ಮಾತ್ರ ಕಚ್ಚುವ ಸೊಳ್ಳೆ!

ಡೆಂಗಿ ರೋಗವು ‘ಈಡಿಸ್ ಈಜಿಪ್ಟಿ’ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸ್ವಚ್ಛವಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿಯನ್ನು ಬೆಳೆಸುವ ಈ ಸೊಳ್ಳೆಯು 7 ದಿನಗಳಲ್ಲಿ ಮೊಟ್ಟೆಯಿಂದ ಮರಿ ಸೊಳ್ಳೆಯಾಗಿ ಪರಿವರ್ತನೆಗೊಳ್ಳುತ್ತದೆ. ಒಟ್ಟು 28 ದಿನ ಮಾತ್ರ ಬದುಕುವ ಈಡಿಸ್ ಈಜಿಪ್ಟಿ ಸೊಳ್ಳೆಯು ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತದೆ ಎಂದು ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಡಮನಿ ತಿಳಿಸುತ್ತಾರೆ. ಹಗಲು ಹೊತ್ತು ಮನೆಯಲ್ಲಿರುವ ಗರ್ಭಿಣಿಯರು ಬಾಣಂತಿಯರು ವೃದ್ಧರು ಮತ್ತು ಮಕ್ಕಳು ಹೆಚ್ಚಾಗಿ ಡೆಂಗಿ ರೋಗಕ್ಕೆ ಒಳಗಾಗುತ್ತಾರೆ. ಹಾಗಾಗಿ ಎಚ್ಚರವಹಿಸಬೇಕು. ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು ಎಂಬುದು ಅವರ ಸಲಹೆ.

ಜಿಲ್ಲೆಯಲ್ಲಿ ಪತ್ತೆಯಾದ ಡೆಂಗಿ ಪ್ರಕರಣಗಳು

ವರ್ಷ;2022;2023

ಅಫಜಲಪುರ;8;2

ಆಳಂದ;18;2

ಚಿಂಚೋಳಿ;40;7

ಚಿತ್ತಾಪುರ;67;13

ಕಲಬುರಗಿ ಗ್ರಾಮೀಣ;45;8

ಕಲಬುರಗಿ ನಗರ;126;15

ಜೇವರ್ಗಿ;48;2 ಸೇಡಂ;27;3

ಒಟ್ಟು;379;52

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT