ಭಾನುವಾರ, ಮಾರ್ಚ್ 7, 2021
19 °C
ಪೂರ್ಣಿಮಾ ಪಿ.ಎಂ. ಬಿರಾದಾರ ಉಚಿತ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದ ಡಾ.ಶಿವಮೂರ್ತಿ ಮುರಘಾ ಶರಣರು

‘ಭೋಗ ಜೀವನ ಕ್ರಮದಿಂದಲೇ ರೋಗ ಹೆಚ್ಚಳ’-ಡಾ.ಶಿವಮೂರ್ತಿ ಮುರಘಾ ಶರಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಮಾನವನ ವೇಗವು ಭೋಗದತ್ತಲೇ ಹೆಚ್ಚುತ್ತಿದೆ. ಈ ಭೋಗದಿಂದ ರೋಗಗಳು ಹೆಚ್ಚುತ್ತಿವೆ. ನಮ್ಮ ಭೋಗದ ವೇಗವನ್ನು ನಾವು ನಿಯಂತ್ರಣ ಮಾಡಿಕೊಂಡಾಗ ಮಾತ್ರ ಆರೋಗ್ಯ ಸಾಧ್ಯ’ ಎಂದು ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರಘಾ ಶರಣರು ನುಡಿದರು.

ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟ್‌ನಿಂದ ನಗರದಲ್ಲಿ ಸ್ಥಾಪಿಸಲಾದ ‘ಪೂರ್ಣಿಮಾ ಪಿ.ಎಂ. ಬಿರಾದಾರ ಉಚಿತ ಡಯಾಲಿಸಿಸ್ ಕೇಂದ್ರ’ಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ರೋಗ ಬುರುವುದಕ್ಕಿಂತ ಮುಂಚೆ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಒಂದು ವೇಳೆ ರೋಗ ಬಂದ ಮೇಲೆ ನಿಯಂತ್ರಣಕ್ಕೆ ಗಮನ ಹರಿಸುವುದು ಅದಕ್ಕಿಂತ ಮುಖ್ಯ’ ಎಂದು ಸಲಹೆ ನೀಡಿದರು.

‘ಆಧುನಿಕ ಭೋಗ ಜೀವನ ಹೆಚ್ಚಾದಂತೆ ಚಿಕ್ಕಮಕ್ಕಳಿಗೂ ಮಧುಮೇಹದಂಥ ರೋಗಗಳು ಕಾಡುತ್ತಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಾವು ಆಹಾರವನ್ನೇ ಔಷಧಿಯಾಗಿ ತೆಗೆದುಕೊಳ್ಳಬೇಕು. ಆದರೆ, ಈಗ ಔಷಧಿಯನ್ನೇ ಆಹಾರವಾಗಿ ಸ್ವೀಕರಿಸುವ ದಿನಗಳು ಬಂದಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸುಲಫಲ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಆಧುನಿಕ ಕಾಲಮಾನವು ‘ಟೆನ್ಷನ್‌ ಯುಗ’ ಯುಗವಾಗಿದೆ. ಅತಿಯಾದ ಒತ್ತಡದ ಜೀವನಶೈಲಿಯೇ ಹಲವು ರೋಗಗಳು ಬರಲು ಕಾರಣವಾಗಿದೆ. ಹೀಗಾಗಿ, ಕಿಡ್ನಿ ವೈಫಲ್ಯ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ರೋಗಕ್ಕೆ ಸಿಲುಕುವ ಬಡವರಿಗಾಗಿ ಉಚಿತ ಡಯಾಲಿಸಿಸ್‌ ಕೇಂದ್ರ ತೆರೆದಿದ್ದು ನಿಜಕ್ಕೂ ಸಮಾಜಕ್ಕೆ ಮಾದರಿಯಾದ ಕೆಲಸ. ಇಂಥ ಸಮಾಜ ಸೇವೆಗೆ ಮುಂದಾದ ಶರಣು ಪಪ್ಪಾ ಅವರು ಯುವ ಸಮುದಾಯಕ್ಕೆ ಮಾದರಿ’ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಮನ್‌ ದಾಕ್ಷಾಯಿಣಿ ಎಸ್. ಅಪ್ಪಾ ಅವರು, ‘ಶರಣ ತತ್ವದಡಿಯೇ ಶರಣು ಪಪ್ಪಾ ಕೆಲಸ ಮಾಡುತ್ತಿದ್ದಾರೆ. ಜನಸೇವೆ ಜನಾರ್ಧನನ ಸೇವೆ ಎಂದು ಅರಿತು ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸೇವೆ ನಿರಂತರ ನಡೆಯಲಿ’ ಎಂದು ಶುಭ ಹಾರೈಸಿದರು.

ಡಯಾಲಿಸಿಸ್ ಕೇಂದ್ರದ ಸ್ಥಾಪನೆಗೆ ಪ್ರತ್ಯಕ್ಷ, ಪರೋಕ್ಷ ಕಾರಣರಾದವರಿಗೆ ಶರಣು ಪಪ್ಪಾ ಕೃತಕ್ಞತೆ ಸಲ್ಲಿಸಿದರು. ಡಾ.ಪಿ.ಎಂ.ಬಿರಾದಾರ, ಪೂರ್ಣಿಮಾ ಬಿರಾದಾರ, ಕಲಬುರ್ಗಿ ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಎಸಿಪಿ ಕಿಶೋರಬಾಬು, ಶ್ರೀನಿವಾಸ ಸರಡಗಿ ಶಕ್ತಿಪೀಠದ ಅಪ್ಪಾರಾವ್ ದೇವಿ‌ ಮುತ್ಯಾ, ಮುಗುಳನಾಗಾಂವ ಶ್ರೀಗಳು, ಮೊಹ್ಮದ್ ರಫಿವುದ್ದೀನ್, ಆರೀಫ್ ಸೇಠ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು