ಬುಧವಾರ, ಸೆಪ್ಟೆಂಬರ್ 29, 2021
20 °C
ಅತಿವೃಷ್ಟಿ, ಪ್ರವಾಹ ಸಾಧ್ಯತೆ ಕುರಿತು ಜಿಲ್ಲಾ ಮಟ್ಟದ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ

ಕಲಬುರ್ಗಿ: ಪ್ರವಾಹ; ಪುನರ್ವಸತಿಗೆ ನಿಖರ ಸರ್ವೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಜಿಲ್ಲೆಯಲ್ಲಿ ಪದೇಪದೇ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕುವ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ಕೂಡಲೇ ಸರ್ವೆ ಮಾಡಿ ಪಟ್ಟಿ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹ ಸಾಧ್ಯತೆ ಹಾಗೂ ಅತಿವೃಷ್ಟಿ ಹಾನಿಯ ಕುರಿತು ನಗರದಲ್ಲಿ ಶನಿವಾರ ಕರೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದಿನ ಎರಡು ವರ್ಷದಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮತ್ತು ನಗರ ಪ್ರದೇಶದಲ್ಲಿ 1 ಲಕ್ಷ ವಸತಿ ಕಲ್ಪಿಸುವ ಯೋಜನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೂಪಿಸಿದ್ದಾರೆ. ಪ್ರವಾಹದಿಂದ ಸೂರು ಕಳೆದುಕೊಂಡ ಜನರಿಗೆ ಇದನ್ನು ತಲುಪಿಸಲು ಅಧಿಕಾರಿಗಳು ನಿಖರ ಮಾಹಿತಿ ಕಲೆ ಹಾಕಬೇಕು’ ಎಂದೂ ತಾಕೀತು ಮಾಡಿದರು.

165 ಗ್ರಾ.ಪಂ.ಗಳಲ್ಲಿ ಮುಂಜಾಗ್ರತೆ: ‘ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ 150ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಮಹಾರಾಷ್ಟ್ರದಿಂದ ಇನ್ನೂ ನೀರು ಬಿಟ್ಟಿಲ್ಲದ ಕಾರಣ ಪ್ರವಾಹ ಸ್ಥಿತಿ ಎದುರಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ನದಿ ದಡದ 165 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಿದ್ದೇವೆ. ಪ್ರತಿ ಹಳ್ಳಿಗಳಲ್ಲೂ 15 ಯುವಕರ ತಂಡ ರಚಿಸಲಾಗಿದ್ದು, ಆತಂಕದ ಸಂದರ್ಭದಲ್ಲಿ ನೆರವಿಗೆ ಬರುವಂತೆ ಅವರಿಗೆ ತರಬೇತಿ ಕೂಡ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.

‘ಪ್ರವಾಹ ಪರಿಹಾರ ಕೇಂದ್ರಗಳನ್ನು ತೆರೆಯಲು ಈಗಗಲೇ ಸ್ಥಳ ಗುರುತಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿಯೂ 200 ಪ್ರವಾಹ ಪರಿಹಾರ ಕಿಟ್‌ ಸಿದ್ಧಪಡಿಸಿ ನೀಡಲಾಗಿದೆ. ಇದರಲ್ಲಿ ಬೆಡ್‌ಶೀಟ್‌, ಟವಲ್‌ ಸೇರಿದಂತೆ ದೈನಂದಿನ ಅವಶ್ಯಕತೆಗಳನ್ನು ಇಡಲಾಗಿದೆ. ಅಗತ್ಯದಷ್ಟು ಆಹಾರ ಧಾನ್ಯಗಳನ್ನೂ ಸಂಗ್ರಹಿಸಲಾಗಿದೆ’ ಎಂದೂ ಹೇಳಿದರು.

‘ಪ್ರವಾಹ ಉಂಟಾಗುವ ಗ್ರಾಮಗಳಲ್ಲಿರುವ ಎಲ್ಲ ಗರ್ಭಿಣಿಯರ ಮಾಹಿತಿ ಸಂಗ್ರಹಿಸಿದ್ದೇವೆ. ಒಂದು ವೇಳೆ ರಸ್ತೆ ಸಂಚಾರ ಬಂದ್ ಆಗುವ ಪರಿಸ್ಥಿತಿ ಬಂದರೆ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗುವುದು’ ಎಂದರು.

371(ಜೆ) ಲೋಪದೋಷ– ಶೀಘ್ರ ಸಭೆ: ‘ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ 371(ಜೆ) ಅನುಷ್ಠಾನದಲ್ಲಿ ಕೆಲವು ಲೋಪದೋಷಗಳಿವೆ. ವಿಶೇಷವಾಗಿ ಶಿಕ್ಷಕರ ಟಿ.ಇ.ಟಿ.ಯಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ‘ಗ್ರೇಸ್‌ ಮಾರ್ಕ್ಸ್’ ನೀಡಬೇಕು. ಈ ನಿಟ್ಟಿನಲ್ಲಿ ಲೋಪದೋಷ ಸರಿಪಡಿಸಲು ಕೂಡಲೇ ಸಭೆ ಕರೆಯಬೇಕು’ಎಂದು ವಿಧಾನ ಪರಿಷತ್‌ ಸದಸ್ಯ ಶಶಿಲ್ ನಮೋಶಿ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ‘ಮೊದಲು ಜಿಲ್ಲಾ ಮಟ್ಟದಲ್ಲಿ ಎಲ್ಲ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಬಳಿಕ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸೋಣ’ ಎಂದರು.

ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಪೊಲೀಸ್ ಆಯುಕ್ತ ವೈ.ಎಸ್.ರವಿಕುಮಾರ್, ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಪಾಲಿಕೆಯ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಸೇರಿದಂತೆ ಜಿಲ್ಲ ಮಟ್ಟದ ಅಧಿಕಾರಿಗಳು ಇದ್ದರು.

ಇಸ್ರೇಲ್‌ ಮಾದರಿ ಕೃಷಿ: ತಂಡದ ಭೇಟಿ ಶೀಘ್ರ
‘ಜಿಲ್ಲೆಯಲ್ಲಿ ಇಸ್ರೇಲ್‌ ಮಾದರಿಯ ಕೃಷಿ ಅಭಿವೃದ್ಧಿ ಪಡಿಸುವ ಸಂಬಂಧ ಚರ್ಚಿಸಿದ್ದೇನೆ. ದಕ್ಷಿಣ ಭಾರತದ ಕಾನ್ಸುಲೇಟ್ ಜನರಲ್ ಆಗಿರುವ ಜುನಾಥನ್ ಜೋಡ್ಕಾ ಅವರೊಂದಿಗೆ ಮಾತನಾಡಿದ್ದೇನೆ. ಅವರ ತಂಡ ಶೀಘ್ರದಲ್ಲಿಯೇ ಕಲಬುರ್ಗಿಗೆ ಭೇಟಿ ನೀಡಲು ಉತ್ಸಾಹ ತೋರಿದೆ. ಕೃಷಿ ಅಧಿಕಾರಿಗಳು ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಈಗಿನಿಂದಲೇ ಮಾಡಿಕೊಳ್ಳಬೇಕು’ ಎಂದು ಸಚಿವ ನಿರಾಣಿ ತಿಳಿಸಿದರು.

‘ವಿಜನ್‌–2050 ಅಂಗವಾಗಿ ವಿವಿಧ ಕ್ಷೇತ್ರಗಳ ತಜ್ಞರ ಸಲಹೆ ಪಡೆಯಲು ಆಗಸ್ಟ್‌ನಲ್ಲಿ ಕಾರ್ಯಾಗಾರ ಏರ್ಪಡಿಸಲಾಗುವುದು. ಡಿಪಿಆರ್‌ ಸಿದ್ಧಪಡಿಸುವುದು ಮತ್ತು ಹಣಕಾಸು ಹೊಂದಾಣಿಕೆ ಕುರಿತೂ ಚರ್ಚಿಸಲಾಗುವುದು. ಹೂಡಿಕೆ, ರಸ್ತೆ ಸುಧಾರಣೆ, ಉದ್ಯೋಗ ಸೃಷ್ಠಿ, ಶಿಕ್ಷಣ ಕ್ಷೇತ್ರ ಸುಧಾರಣೆ, ಸರಕು ಸಾಗಣೆ ಬ್ರಾಡ್‌ಗೇಜ್ ರೈಲು ಓಡಾಟ... ಹೀಗೆ ನಾನಾ ವಿಷಯಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸುವ ಗುರಿ ಇದರಲ್ಲಿ ಸೇರಿದೆ. ವಿದ್ಯಾರ್ಥಿ, ಶಿಕ್ಷಕರಿಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಅವರಿಂದಲೂ ಉಪಾಯಗಳನ್ನು ಸಂಗ್ರಹಿಸಬೇಕು’ ಎಂದರು.

‘ಕಬ್ಬು ಬೆಳೆದವರ ಬಗ್ಗೆ ಯೋಚಿಸಿ’
‘ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯುತ್ತಿದ್ದರು. ಆದರೆ, ತೀವ್ರ ಮಳೆಯ ಕಾರಣ ಈ ವರ್ಷ 50 ಸವಿರ ಹೆಕ್ಟೇರ್‌ನಷ್ಟು ಬಿತ್ತನೆ ಆಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿದ ಸಚಿವ ನಿರಾಣಿ, ‘ಕಬ್ಬು ಹೆಚ್ಚು ಬೆಳೆದಿದ್ದಾರೆ ಎಂದು ಖುಷಿಪಟ್ಟು ಮೈ ಮರೆಯಬೇಡಿ. ಅಷ್ಟು ಇಳುವರಿ ಮಾರಾಟವಾಗಬೇಕಲ್ಲ; ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ’ ಎಂದೂ ಸೂಚನೆ ನೀಡಿದರು.‌

‘ಬಿಜೆಪಿ ಶಾಸಕರ ಕ್ಷೇತ್ರಕ್ಕಷ್ಟೇ ಅನುದಾನ ಏಕೆ?’
‘ಅನುದಾನ ಹಂಚಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚು, ಕಾಂಗ್ರೆಸ್‌ನವರಿಗೆ ಕಡಿಮೆ ಅನುದಾನ ನೀಡುತ್ತೀರಿ. ಇದಕ್ಕೆ ಕಾರಣವೇನು? ನೀವೇನು ನಮ್ಮ ಮನೆಗೆ ರೊಕ್ಕ ಕೊಡುತ್ತೀರೇನು?’ ಎಂದು ಶಾಸಕ ಎಂ.ವೈ. ಪಾಟೀಲ ಅವರು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ ನಿರಾಣಿ, ‘ಸರ್‌ ಇದರ ಬಗ್ಗೆ ನನಗಿಂತ ನಿಮಗೇ ಹೆಚ್ಚು ಗೊತ್ತಿದೆ. ಮುಂದಿನ ದಿನಗಳಲ್ಲಿ ನಾನು ಸರಿ ಮಾಡುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.