ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ, ಅತಿವೃಷ್ಟಿ ಮಧ್ಯೆ ಕಳೆಗಟ್ಟಿದ ‘ದೀಪಾವಳಿ’

ತಾಂಡಾಗಳಲ್ಲಿ ಸಾಂಸ್ಕೃತಿಕ ಸಂಭ್ರಮ, ಕಣ್ಮನ ಸೆಳೆಯುವ ಯುವತಿಯರ ಸಾಮೂಹಿಕ ನೃತ್ಯ
Last Updated 15 ನವೆಂಬರ್ 2020, 2:39 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ದೀಪಾವಳಿ ಹಬ್ಬ ಅತಿವೃಷ್ಟಿ ಮತ್ತು ಕೊರೊನಾ ಕಾರ್ಮೋಡದ ನಡುವೆಯೂ ಕಳೆಗಟ್ಟಿದೆ. ಇಲ್ಲಿನ ತಾಂಡಾಗಳಲ್ಲಿ ದೀಪಾವಳಿಯನ್ನು ಈ ಬಾರಿ ಎರಡು ದಿನ ಆಚರಿಸಲಾಗುತ್ತಿದೆ.

ಮೂರು ದಿನಗಳ ದೀಪಾವಳಿ ಹಬ್ಬದಲ್ಲಿ ಕೆಲವು ಕಡೆ ಶನಿವಾರ ಕಾಳಿಮಾಸ (ಅಮಾವಾಸ್ಯೆ) ಆಚರಿಸಿ ಮೇರಾ ಸಮರ್ಪಿಸಿದರೆ, ಇನ್ನೂ ಕೆಲವು ಕಡೆ ಭಾನುವಾರ ಕಾಳಿಮಾಸ ಆಚರಣೆ ಇರುವುದು ಈ ಬಾರಿಯ ವಿಶೇಷತೆಯಾಗಿದೆ.

ಬಹುತೇಕ ತಾಂಡಾಗಳಲ್ಲಿ ಯುವತಿಯರು ತಾಂಡಾದ ಶ್ರದ್ಧಾ ಕೇಂದ್ರಗಳಾದ ಸೇವಾಲಾಲ– ಮರಿಯಮ್ಮ ದೇವಿಯ ಮಂದಿರದ ಎದುರುಗಡೆ ಸಾಂಪ್ರದಾಯಿಕ ನೃತ್ಯ ಮಾಡುತ್ತಾರೆ. ಅಮವಾಸ್ಯೆಯ ರಾತ್ರಿ ಯುವತಿಯರು ಮನೆ ಮನೆಗೆ ತೆರಳಿ ದೀಪ ಬೆಳಗಿ ಕಾಣಿಕೆ ಸ್ವೀಕರಿಸುವುದು ಸಂಪ್ರದಾಯ. ಇದು ತಾಲ್ಲೂಕಿನ ಕೆಲವು ಕಡೆ ಶನಿವಾರ ನಡೆದಿದೆ.

ತೆಲಂಗಾಣದಲ್ಲಿ ಶನಿವಾರ ಆಚರಿಸುತ್ತಿರುವುದರಿಂದ ಅಲ್ಲಿನ ಪ್ರಭಾವ ಹೊಂದಿರುವ ತಾಂಡಾಗಳಲ್ಲಿ ಇದನ್ನು ಇಂದೇ ಆಚರಿಸಲಾಗುತ್ತಿದೆ. ಆದರೆ ಹೆಚ್ಚಿನ ತಾಂಡಾಗಳಲ್ಲಿ ಮಾತ್ರ ಭಾನುವಾರ ಕಾಳಿಮಾಸ, ಸೋಮವಾರ ಹಬ್ಬ ಆಚರಿಸಲಾಗುತ್ತಿದೆ.

ಕಾಳಿಮಾಸ ಮರುದಿನ ಯುವತಿಯರು ಗೆಳತಿಯರೊಂದಿಗೆ ನಾಯಕ, ಕಾರಭಾರಿ ಮೊದಲಾದವರ ಮನೆಗಳಿಗೆ ತೆರಳಿ ಅವರ ಮನೆಯಿಂದ ಬುಟ್ಟಿ ಪಡೆದುಕೊಂಡು ಸೇವಾಲಾಲ್– ಮರಿಯಮ್ಮ ಮಂದಿರದ ಎದುರು ಜಮಾಯಿಸಿ ಅಲ್ಲಿಂದ ಕಾಡಿಗೆ ಹೋಗುತ್ತಾರೆ.

ಕಾಡಿನಿಂದ ಮರಳಿ ಬರುವಾಗ ಯುವತಿಯರು ಕಾಡಿನ ಹೂವುಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಬರುತ್ತಾರೆ. ಆಗ ತಾಂಡಾದ ಪ್ರಮುಖರು ಹೊರ ವಲಯದಲ್ಲಿ ವಾದ್ಯಮೇಳದೊಂದಿಗೆ ಕಾಯುತ್ತ ನಿಂತು ಅವರು ಬಂದ ಮೇಲೆ ಅವರನ್ನು ಮೆರವಣಿಗೆ ಮೂಲಕ ಬರಮಾಡಿಕೊಂಡು ದೇವಾಲಯಕ್ಕೆ ಆಗಮಿಸಿ ನಂತರ ಮನೆ ಮನೆಗೆ ತೆರಳಿ ಮನೆಯ ಮುಂದಿನ ಗೋದನ್ ಪೂಜೆ (ಸಗಣಿಗೆ ಪೂಜೆ) ನೆರವೇರಿಸುವರು.

ಲಂಬಾಣಿಗರ ದೀಪಾವಳಿ ಎಂದರೆ ಅದು ಹೆಣ್ಣು ಮಕ್ಕಳ ಅದರಲ್ಲೂ ಯುವತಿಯರ ಹಬ್ಬ ಎಂದರೆ ಅತಿಶೋಕ್ತಿಯಲ್ಲ. ಹಬ್ಬದ ದಿನದಂದು ಮದುವೆ ನಿಶ್ಚಯವಾದ ಯುವತಿ ಧಾನ್ಯ ಅಳೆಯುವ ಸಾಧನದಲ್ಲಿ ಅರಣಿಗೆಯಲ್ಲಿ ದೀಪ ಇಟ್ಟುಕೊಂಡು ಅಕ್ಕಿ ಹಿಟ್ಟು ಬೆಲ್ಲ ಮತ್ತು ನೀರಿನೊಂದಿಗೆ ಮನೆ ಮನೆಗೆ ತೆರಳಿ ‘ನನಗೆ ತಾಂಡಾದ ಋಣ ತೀರಿದೆ. ನಾನು ಮದುವೆ ಮಾಡಿಕೊಂಡು ಹೋಗುತ್ತಿದ್ದೇನೆ, ನನ್ನ ಅಪ್ಪ, ಅಮ್ಮ, ಅಣ್ಣ ತಮ್ಮ ಮೊದಲಾದವರು ಇರುತ್ತಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಹಾಡು ಹೇಳುತ್ತ ಪ್ರಾರ್ಥಿಸುವುದು ವಿಶೇಷವಾಗಿದೆ.

ಹಬ್ಬದ ಆರಂಭವಾಗಿ ಮುಗಿಯುವವರೆಗೆ ಲಂಬಾಣಿಗರು ಸಗಣಿಯನ್ನು ಎತ್ತುವುದಿಲ್ಲ. ಸಾಂಸ್ಕೃತಿಕ ಸಿರಿ ಹಬ್ಬ ದೀಪಾವಳಿ ಆಚರಣೆಗೆ ಕೊರೊನಾ, ಮತ್ತು ಅತಿವೃಷ್ಟಿ ಸಂಕಷ್ಟ ಒಡ್ಡಿದೆ ಆದರೂ ಹಬ್ಬ ಆಚರಣೆ ಮಾತ್ರ ಜೋರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT