ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಅನರ್ಹಗೊಳಿಸಲು ಆಯೋಗಕ್ಕೆ ದೂರು-ಡಿಕೆಶಿ

ಮಸ್ಕಿ ಉಪಚುನಾವಣೆ; ಮತದಾರರಿಗೆ ಹಣ ಹಂಚಿದ ಪ್ರಕರಣಕ್ಕೆ ಡಿ.ಕೆ.ಶಿವಕುಮಾರ್ ಕಿಡಿ
Last Updated 9 ಏಪ್ರಿಲ್ 2021, 9:32 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮುಖಂಡರೇ ಮುಂದೆ ನಿಂತು ಮತದಾರರಿಗೆ ಹಣ ಹಂಚುತ್ತಿದ್ದಾರೆ. ಅವರ ವಾಮಮಾರ್ಗಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಚುನಾವಣಾ ಆಯೋಗವು ತಕ್ಷಣವೇ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

‘ಬಿಜೆಪಿಯವರು ಮತದಾರರಿಗೆ ಹಣ ಹಂಚುತ್ತಿರುವುದನ್ನು ಜನರೇ ಬಹಿರಂಗಗೊಳಿಸಿದ್ದಾರೆ. ಇದನ್ನು ಆಧರಿಸಿ ಆ ಪಕ್ಷದ ಅಭ್ಯರ್ಥಿಯನ್ನು ಅನರ್ಹಗೊಳಿಸಲು ಕೋರಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದು ಅವರು ನಗರದಲ್ಲಿ ಶುಕ್ರವಾರ ಮಧ್ಯಮದವರ ಮುಂದೆ ಹೇಳಿದರು.

‘ಉಪ ಚುನಾವಣೆಗಳು ನಡೆಯುತ್ತಿರುವ ಎಲ್ಲ ಕಡೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಪೊಲೀಸ್‌ ಸಿಬ್ಬಂದಿ ಕೂಡ ರಾಜ್ಯ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಲ್ಲದಿದ್ದರೆ ಬಹಿರಂಗವಾಗಿಯೇ ಇಂಥ ಅಕ್ರಮ ನಡೆಸಲು ಸಾಧ್ಯವಿಲ್ಲ’ ಎಂದೂ ಅವರು ದೂರಿದರು.

‘ಉಪಚುನಾವಣೆಗಳು ಮುಗಿದ ಮೇಲೆ ರಾಜ್ಯ ಸರ್ಕಾರದ ಕಥೆಯೂ ಮುಗಿಯಲಿದೆ. ಇದನ್ನು ನಾನಲ್ಲ; ಬಿಜೆಪಿ ಶಾಸಕರು, ಮುಖಂಡರೇ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ’ ಎಂದರು.

ವೈರಲ್‌ ಆಗಿರುವ ಹಣ ಹಂಚಿಕೆ ವಿಡಿಯೊ–

‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಉಪಚುನಾವಣೆ ಫಲಿತಾಂಶದ ಮೇಲೂ ಇದರ ಪರಿಣಾಮ ಏನು ಎಂಬುದು ಬಿಜೆಪಿಗೆ ಶೀಘ್ರ ಅರ್ಥವಾಗಲಿದೆ. ರಾಜ್ಯ ಮಾತ್ರವಲ್ಲ; ದೇಶದ ಎಲ್ಲೆಡೆ ಕಾರ್ಮಿಕರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ದುಡಿಯುವ ವರ್ಗದ ನೋವು ಕೇಳುವ ಮನಸ್ಸು ರಾಜ್ಯ ಸರ್ಕಾರಕ್ಕೂ ಇಲ್ಲ, ಕೇಂದ್ರಕ್ಕೂ ಇಲ್ಲ’ ಎಂದೂ ಕಿಡಿ ಕಾರಿದರು.‌

‘ಉಪಚುನಾವಣೆ ಪ್ರಚಾರಕ್ಕೆ ನಾವು ಹೋದಲ್ಲೆಲ್ಲ ಅಪಾರ ಪ್ರೀತಿ, ವಿಶ್ವಾಸ ವ್ಯಕ್ತವಾಗುತ್ತಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸ್ವಯಂಪ‍್ರೇರಣೆಯಿಂದ ಸೇರುತ್ತಿದ್ದಾರೆ. ನಮ್ಮ ಗೆಲುವುದು ನಿಶ್ಚಿತ’ ಎಂದೂ ಅವರು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT