ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ | ಕುಡಿಯುವ ನೀರಿಗೆ ತತ್ವಾರ: ಮೇವಿಗೂ ಬರ

Published 17 ಡಿಸೆಂಬರ್ 2023, 5:26 IST
Last Updated 17 ಡಿಸೆಂಬರ್ 2023, 5:26 IST
ಅಕ್ಷರ ಗಾತ್ರ

ಅಫಜಲಪುರ: ಮಳೆ ಅಭಾವಕ್ಕೆ ಬಿತ್ತಿದ್ದ ಬೆಳೆಗಳು ಕೈಕೊಟ್ಟಿದ್ದು, ಅಂತರ್ಜಲ ಮಟ್ಟ ನೆಲಕಚ್ಚಿದೆ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಮೇವು ಕೊರತೆಯಿಂದ ರೈತರು ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ಬಂದಿದೆ.

ಮಳೆ ಕೊರತೆ ಮತ್ತು ಮಹಾರಾಷ್ಟ್ರದ ಜಲಾಶಯದಿಂದ ಭೀಮ ನದಿಗೆ ಹಕ್ಕಿನ ನೀರು ಹರಿಸದ ಕಾರಣ ಅಚ್ಚುಕಟ್ಟು ಪ್ರದೇಶದ 40 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕಷ್ಟ ಎದುರಾಗಿದೆ. ಯಾವುದೇ ಕೆರೆ-ಕಟ್ಟೆಗಳಲ್ಲಿಯೂ ಹೆಚ್ಚಿನ ನೀರು ಬಂದಿಲ್ಲ. ನರೇಗಾ ಮತ್ತು ಸಣ್ಣ ನೀರಾವರಿ ಇಲಾಖೆ ಮೂಲಕ ತೋಡಿರುವ ಕೆರೆ ಮತ್ತು ಕೃಷಿ ಹೊಂಡಗಳು ಬತ್ತಿ ಹೋಗಿವೆ. ಬೇಸಿಗೆಗು ಮುನ್ನ ಕುಡಿಯುವ ನೀರಿಗೆ ತತ್ವಾರ ಬರಲಿದೆ.

ಬರಗಾಲ ಕೃಷಿಗೆ ಮಾತ್ರ ಸಮಸ್ಯೆಯಾಗಿಲ್ಲ. ವ್ಯಾಪಾರಸ್ಥರಿಗೆ, ರಸಗೊಬ್ಬರ ಮಾರಾಟಗಾರರಿಗೆ, ಆಟೊ ಚಾಲಕರಿಗೆ, ಬಂಡಿ ತಯಾರಿಕೆ ಮತ್ತು ಖಾಸಗಿ ವಾಹನ ಮಾಲೀಕರ ಮೇಲೂ ಪರಿಣಾಮ ಬೀರಿದೆ.

ಕೃಷಿ ವಲಯದಲ್ಲಿ ಕೆಲಸ ಕಾರ್ಯಗಳು ಕಡಿಮೆಯಾಗಿವೆ. ನರೇಗಾ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಸಿಗುತ್ತಿಲ್ಲ. ಕಾಟಾಚಾರಕ್ಕೆ ಅಲ್ಲೊಂದು ಇಲ್ಲೊಂದು ನರೇಗಾ ಕೆಲಸ ಮಾಡಲಾಗುತ್ತಿದೆ.

‘ಭೀಮಾ ನದಿಯ ಬತ್ತಿ ಹೋಗಿದ್ದು, ನದಿ ತೀರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆ ಕರೆದು ಗ್ರಾಮಗಳಿಗೆ ಟ್ಯಾಂಕ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು’ ಎನ್ನುತ್ತಾರೆ ರೈತ ಮುಖಂಡ ಗುರು ಚಾಂದಕವಟೆ.

‘ಸರ್ಕಾರ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ನರೇಗಾ ಯೋಜನೆಯನ್ನು ಆರಂಭಿಸಿ ಕೃಷಿ ಕಾರ್ಮಿಕರು, ಕೂಲಿಕಾರರಿಗೆ ಕೆಲಸ ನೀಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಜನರು ಗುಳೆ ಹೋಗುತ್ತಾರೆ’ ಎನ್ನುತ್ತಾರೆ ರೈತ ಎಲ್ಲಪ್ಪ ಮ್ಯಾಕೇರಿ.

‘ನೀರಿನ ಮೂಲ ಹೊಂದಿರುವ ರೈತರಿಗೆ ಉಚಿತವಾಗಿ ಮೇವು ಬೀಜ ನೀಡಲಾಗುತ್ತದೆ. ರೈತರಿಂದ ಅಗತ್ಯವಾದ ದಾಖಲೆಗಳನ್ನು ಪಡೆದು ಮೇವು ಬೀಜವನ್ನು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಂಡುಬಂದಿಲ್ಲ’ ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ. ಕೋಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೇ 25ರಷ್ಟು ಮಧ್ಯಂತರ ಪರಿಹಾರ’

‘ಬೆಳೆ ವಿಮೆ ಮಾಡಿಸಿರುವ ರೈತರಿಗೆ ವಿಮಾ ಕಂಪನಿಯವರು ಬೆಳೆ ಹಾನಿಗೆ ಶೇ 25 ಮಧ್ಯಂತರ ಪರಿಹಾರ ನೀಡುವರು’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್. ಎಚ್. ಗಡಿಗಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬರಗಾಲದ ಪರಿಣಾಮ ಮುಂಗಾರು ಹಂಗಾಮಿನಲ್ಲಿ ತೊಗರಿ, ಹತ್ತಿ, ಕಬ್ಬು ಬೆಳೆಗಳು ಶೇ 90ರಷ್ಟು ಹಾಳಾಗಿವೆ. ಹಿಂಗಾರು ಹಂಗಾಮಿನಲ್ಲಿ ಮಳೆ ಬಾರದ ಕಾರಣ ರೈತರು ಬಿತ್ತನೆ ಮಾಡಿಲ್ಲ. ಹೀಗಾಗಿ, ರೈತ ಕಷ್ಟದಲ್ಲಿದ್ದಾರೆ. ಬೆಳೆ ವಿಮೆ ಮಾಡಿರುವ ರೈತರಿಗೆ ವಿಮಾ ಕಂಪನಿಯವರು ಶೇ 25ರಷ್ಟು ಮಧ್ಯಂತರ ಪರಿಹಾರ ನೀಡುವರು. ಬೆಳೆ ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT