ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ: ದೂಳಿಗೆ ತತ್ತರಿಸುತ್ತಿರುವ ಜನ

ಅನಾರೋಗ್ಯದ ವಾತಾವರಣದಲ್ಲಿ ಸ್ಥಳೀಯರ ಜೀವನ: ಆಕ್ರೋಶ
ಸಿದ್ದರಾಜ ಎಸ್ ಮಲ್ಕಂಡಿ
Published 26 ಜನವರಿ 2024, 6:42 IST
Last Updated 26 ಜನವರಿ 2024, 6:42 IST
ಅಕ್ಷರ ಗಾತ್ರ

ವಾಡಿ: ‘ಸಿಮೆಂಟ್ ನಗರಿ ಎಂದು ದೇಶದ ಭೂಪಟದಲ್ಲಿ ಗುರುತಿಸಿಕೊಂಡಿರುವ ವಾಡಿ ಪಟ್ಟಣ ದೂಳಿನ ನಗರಿಯೂ ಹೌದು. ದೂಳಿನ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದೆ ಸ್ಥಳೀಯ ಎಸಿಸಿ ಕಾರ್ಖಾನೆ ಹಾಗೂ ಪುರಸಭೆ ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ದೂಳಿನಿಂದ ಸಾರ್ವಜನಿಕರು ಅಕ್ಷರಶಃ ನಲುಗಿ ಹೋಗಿದ್ದಾರೆ. ಬದುಕು ಅಸಹನೀಯವೆನ್ನಿಸುವ ಮಟ್ಟಿಗೆ ದೂಳು ಹರಡುತ್ತಿದ್ದು ಗಂಭೀರ ಕಾಯಿಲೆಗಳ ಸಾಧ್ಯತೆ ಹೆಚ್ಚಿಸಿದೆ. ಅನಾರೋಗ್ಯದ ವಾತಾವರಣದಲ್ಲಿ ಜೀವನ ನಡೆಸುತ್ತಿರುವ ಸ್ಥಳೀಯರು ದೂಳು ಹರಡುತ್ತಿರುವ ಕಾರ್ಖಾನೆ ಹಾಗೂ ಹದಗೆಟ್ಟ ರಸ್ತೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯ ಎಸಿಸಿ ಸಿಮೆಂಟ್ ಕಾರ್ಖಾನೆಯಿಂದ ವಿಪರೀತ ದೂಳು ಹೊರಬರುತ್ತಿದೆ. ದೂಳಿನೊಂದಿಗೆ ಹೊರಬರುತ್ತಿರುವ ವಿಷಕಾರಿ ಕಣಗಳು ಸಾರ್ವಜನಿಕರ ಶ್ವಾಸಕೋಶ ಸೇರಿ ಅಡ್ಡ ಪರಿಣಾಮ ಬೀರುತ್ತಿದೆ. ಇದರ ಜೊತೆಗೆ ಕಾರ್ಖಾನೆ ನಿರ್ಮಿಸಿದ ರಸ್ತೆ ನಿರ್ವಹಣೆ ಮಾಡದ ಕಾರಣ ಸಂಪೂರ್ಣ ಹದಗೆಟ್ಟು ದೂಳು ಹಿಡಿದಿಟ್ಟುಕೊಂಡು ವಾಹನಗಳು ಓಡಾಡುವಾಗ ಮುಗಿಲೆತ್ತರ ಚಿಮ್ಮಿಸುತ್ತಿವೆ. ವಾಹನಗಳು ಹೋದರೆ ಪಕ್ಕದಲ್ಲಿನ ವಾಹನಗಳು ಕಾಣದಿರುವಷ್ಟರ ಮಟ್ಟಿಗೆ ದೂಳು ಹರಡುತ್ತಿದ್ದು ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳನ್ನು ಕಂಗಲಾಗಿಸಿದೆ.

ರಾವೂರಿನಿಂದ ಪಟ್ಟಣ ಸಂಪರ್ಕಿಸುವ ರಸ್ತೆ ಹಾಗೂ ಪಟ್ಟಣದ ಶ್ರೀನಿವಾಸ ಗುಡಿ ಚೌಕ್ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ದೂಳು ಹರಡುವ ಸ್ಥಳಗಳಾಗಿವೆ.

ರಸ್ತೆಗೆ ಹೊಂದಿಕೊಂಡು ಪೊಲೀಸ್ ಠಾಣೆ ಹಾಗೂ ಪೊಲೀಸ್ ವಸತಿ ಗೃಹಗಳಿದ್ದು ಸಮಾಜದ ವಾತಾವರಣ ಕಾಪಾಡಬೇಕಾದ ಪೊಲೀಸರು ಹಾಗೂ ಅವರ ಕುಟುಂಬ ಸ್ವತಃ ಅನಾರೋಗ್ಯಕ್ಕೆ ತುತ್ತಾಗುತ್ತಿದೆ.

ಪೊಲೀಸ್ ಠಾಣೆ ಹಾಗೂ ಗೃಹಗಳಿಗೆ ನುಗ್ಗುತ್ತಿರುವ ವಿಷಕಾರಿ ದೂಳು ಮಕ್ಕಳು ಹಾಗೂ ಮಹಿಳೆಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೂಳಿನಿಂದ ಕಂಗೆಟ್ಟಿರುವ ಪೊಲೀಸರು ವಸತಿ ಗೃಹಗಳ ಸಹವಾಸವೇ ಬೇಡ ಎಂದು ಬೇರೆಡೆ ಮನೆ ಮಾಡಿರುವ ಉದಾಹರಣೆಗಳಿವೆ. ನಮ್ಮ ಹಾಗೂ ನಮ್ಮ ಕುಟುಂಬದ ಅರೋಗ್ಯ ನಮಗೆ ಮುಖ್ಯ. ಆರೋಗ್ಯ ಕಳೆದುಕೊಂಡು ಗಳಿಸುವುದೇನಿದೆ ಎಂದು ಪ್ರಶ್ನಿಸುವ ಕೆಲ ಸಿಬ್ಬಂದಿ ದೂಳುಮಯ ವಾತಾವರಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹದಗೆಟ್ಟ ರಸ್ತೆ ಪುನಃ ನಿರ್ಮಾಣ ಮಾಡುವುದು ಹಾಗೂ ಪ್ರತಿನಿತ್ಯ ರಸ್ತೆ ಮೇಲೆ ನೀರು ಸಿಂಪಡಿಸಬೇಕೆನ್ನುವ ಕನಿಷ್ಠ ಕಾಳಜಿ ಎಸಿಸಿ ಕಾರ್ಖಾನೆ ಹಾಗೂ ಸ್ಥಳೀಯ ಪುರಸಭೆ ಮಾಡುತ್ತಿಲ್ಲ. ಹೀಗಾಗಿ ನಮಗೆ ಬದುಕೇ ನರಕ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುವ ಸ್ಥಳೀಯರು ದೂಳು ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ.

ಆರೋಗ್ಯದ ಕುರಿತು ಪುರಸಭೆ ಹಾಗೂ ಎಸಿಸಿ ಕಾರ್ಖಾನೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಪಟ್ಟಣದ ಪ್ರತಿಯೊಬ್ಬರ ಉಸಿರಲ್ಲಿ ವಿಷ ಕಣಗಳು ಬೆರೆತು ಅನಾರೋಗ್ಯ ಕಾಡುತ್ತಿದೆಶರಣಪ್ಪ
ವಾಡೇಕರ್, ದಲಿತ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT