ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಮತ್ತೆ ಕಂಪಿಸಿದ ಭೂಮಿ; ಬೆಚ್ಚಿದ ಜನ

ಗಡಿಕೇಶ್ವಾರ: 6 ವರ್ಷಗಳಿಂದ ಬಾರಿಸುತ್ತಿದೆ ಎಚ್ಚರಿಕೆ ಗಂಟೆ; ರಿಕ್ಟರ್ ಮಾಪಕದಲ್ಲಿ 2.6ರಷ್ಟು ತೀವ್ರತೆ
Last Updated 9 ಅಕ್ಟೋಬರ್ 2021, 6:44 IST
ಅಕ್ಷರ ಗಾತ್ರ

ಚಿಂಚೋಳಿ: ಧನ್ ಧನ್.... ಗುಂಯ್ ಗುಂಯ್ ಗುರ್ ಎಂದು ಗುರ್ ಗುಟ್ಟುತ್ತಿದ್ದ ತಾಲ್ಲೂಕಿನ ಗಡಿಕೇಶ್ವಾರದ ನೆಲದಲ್ಲಿ ಕೊನೆಗೂ ಭೂಕಂಪನ ನಡೆದಿರುವುದು ದೃಢಪಟ್ಟಿದ್ದು ಜನರಲ್ಲಿ ಭೀತಿ ಆವರಿಸಿದೆ.

ಗಡಿಕೇಶ್ವಾರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಬೆಳಗಿನ ಜಾವ ಭೂಕಂಪನ ಸಂಭವಿಸಿದೆ. ಇದು ಕಲಬುರಗಿ ಬಳಿಯ ಶರಣ ಶಿರಸಗಿಯ ಭೂಕಂಪ ಮಾಪನ ಕೇಂದ್ರದಲ್ಲಿ 2.6ರಷ್ಟು ತೀವ್ರತೆ ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

6 ವರ್ಷಗಳಿಂದ ಗಡಿಕೇಶ್ವಾರ, ತೇಗಲತಿಪ್ಪಿ, ಭಂಟನಳ್ಳಿ, ಬೆನಕನಳ್ಳಿ, ಹಾಗೂ ಐಪಿಹೊಸಳ್ಳಿ, ದಸ್ತಾಪುರ ಮತ್ತು ಬುರುಗಪಳ್ಳಿ ಮೊದಲಾದ ಗ್ರಾಮಗಳಲ್ಲಿ ಭೂಮಿಯ ಒಳಗಡೆಯಿಂದ ಸ್ಫೋಟಕ ರೀತಿಯ ಸದ್ದು ಕೇಳಿ ಬರುತ್ತಿರುವುದರಿಂದ ಜನರು ಇದನ್ನು ಭೂಕಂಪನ ಎಂದೇ ಭೀತಿಗೆ ಒಳಗಾಗಿದ್ದರು.

ಭೂವಿಜ್ಞಾನಿಗಳು ನಿಖರವಾಗಿ ಏನನ್ನು ಹೇಳದೇ ಜನರಲ್ಲಿನ ಗೊಂದಲ ನಿವಾರಿಸುವಲ್ಲಿ ವಿಫಲರಾಗಿದ್ದರು. ಇದು ಭೂಕಂಪವಲ್ಲ ಭೂಗರ್ಭದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಎಂದೇ ವಾದಿಸುತ್ತಲೇ ಬಂದಿರುವ ವಿಜ್ಞಾನಿಗಳು ಜನರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳಿರುವುದು ಗಮನಾರ್ಹವಾಗಿದೆ.

(ಅ.8ರಂದು) ಶುಕ್ರವಾರ ಬೆಳಗಿನ ಜಾವ 12.44ಕ್ಕೆ ಗಡಿಕೇಶ್ವಾರ, ತೇಗಲತಿಪ್ಪಿ, ಹಲಚೇರಾ ಮೊದಲಾದ ಕಡೆ ಭೂಕಂಪನ ಸಂಭವಿಸಿದ್ದರಿಂದ ಇಲ್ಲಿನ ಜನರು ನಿದ್ದೆಗೆಟ್ಟು ಇಡೀ ರಾತ್ರಿ ಮನೆಯ ಹೊರಗೆ ಇರುಳು ಕಳೆದಿದ್ದಾರೆ.

2015ರಲ್ಲಿ ಇಲ್ಲಿ ಭೂಮಿಯಿಂದ ಸದ್ದು ಬಂದಾಗ ಗ್ರಾಮದಲ್ಲಿ ತಾತ್ಕಾಲಿಕ ಭೂಕಂಪನ ಮಾಪನ ಯಂತ್ರ ಸ್ಥಾಪಿಸಲಾಗಿತ್ತು. ಇಲ್ಲಿ ಭೂಕಂಪನದ ಯಾವುದೇ ದತ್ತಾಂಶ ದಾಖಲಾಗಲಿಲ್ಲ. ಆನಂತರ ಕೆಲವು ದಿನಗಳ ಕಾಲ ಸ್ಥಗಿತವಾಗಿದ್ದ ಭೂಗರ್ಭದ ಒಳಗಿನ ಸದ್ದು ಈಗ ಮತ್ತೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ. ಇದು ಸ್ಥಳೀಯರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ.

ಆರಂಭದಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತುಗಳ ಉಸ್ತುವಾರಿ ಕೇಂದ್ರದ ಭೂಕಂಪ ವಿಜ್ಞಾನಿಗಳು ಗಡಿಕೇಶ್ವಾರ್ ಗ್ರಾಮಕ್ಕೆ ಬಂದು ಅಧ್ಯಯನ ನಡೆಸಿದ್ದರು. ಕಳೆದ ತಿಂಗಳೂ ಇಲ್ಲಿಗೆ ವಿಜ್ಞಾನಿಗಳು ಭೇಟಿ ನೀಡಿದ್ದರು.

ಇಲ್ಲಿ ಭೂಕಂಪನದ ಲಕ್ಷಣಗಳು ಕಂಡು ಬಂದಿರಲಿಲ್ಲ. ನಂತರ ಬಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿಗಳು ಇಲ್ಲಿ ಭೂಮಿಯಿಂದ ಸದ್ದು ಬರಲು ಭೂಗರ್ಭದಲ್ಲಿನ ಸಾಮಾನ್ಯ ಪ್ರಕ್ರಿಯೆ ಎಂದೇ ಹೇಳಿದ್ದರೂ, ಜನ ಮಾತ್ರ ನಂಬಿರಲಿಲ್ಲ. ಈಗ ಜನತೆಯ ಆತಂಕವೇ ನಿಜವಾಗಿದೆ.!

2 ದಶಕಗಳ ಹಿನ್ನೆಲೆ: ತಾಲ್ಲೂಕಿನಲ್ಲಿ ಭೂಕಂಪಕ್ಕೆ 2 ದಶಕಗಳ ಹಿನ್ನೆಲೆಯಿದೆ. ತಾಲ್ಲೂಕಿನ ಹಸರಗುಂಡಗಿಯಲ್ಲಿ 2002 ಡಿಸೆಂಬರ್ 10ರಂದು ರಿಕ್ಟರ್ ಮಾಪನದಲ್ಲಿ ದಾಖಲಾದ ಭೂಕಂಪನದ ಪ್ರಮಾಣ 1.5 ರಷ್ಟಿತ್ತು. ನಂತರ ಇದು 3ರವರೆಗೆ ಹಬ್ಬಿತ್ತು. ಜತೆಗೆ ಆರಂಭದಲ್ಲಿ 1 ಕಿ.ಮೀ ವ್ಯಾಪ್ತಿ ಹೊಂದಿದ್ದ ಕಂಪನದ ತೀವ್ರತೆಯು ನಂತರದಲ್ಲಿ 10 ಕಿ.ಮೀ ವ್ಯಾಪಿಸಿತ್ತು.

ಇದಾದ ನಂತರ ತಾಲ್ಲೂಕಿನ ಇಂದ್ರಪಾಡ ಹೊಸಳ್ಳಿ ಗ್ರಾಮದಲ್ಲಿ 2016 ಅಕ್ಟೋಬರ್ 12ರಂದು ದಾಖಲಾದ ಭೂಕಂಪದ ತೀವ್ರತೆ 1.6 ಆಗಿತ್ತು. ಚಳಿಗಾಲ ಇದ್ದ ಕಾರಣಕ್ಕೆ ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಶರಣಪ್ರಕಾಶ ಪಾಟೀಲ, ಶಾಸಕರಾಗಿದ್ದ ಡಾ. ಉಮೇಶ ಜಾಧವ ಅವರ ನಿರ್ದೆಶನದ ಮೇರೆಗೆ ಗ್ರಾಮಸ್ಥರಿಗೆ ಬ್ಲಾಂಕೇಟ್‌ಗಳನ್ನು ವಿತರಿಸಲಾಗಿತ್ತು. ಜನರು ಭೂಕಂಪಕ್ಕೆ ಹೆದರಿ ಊರು ತೊರೆದಿದ್ದರು.

ಗಡಿಕೇಶ್ವಾರ ದಲ್ಲಿ 2015ರಿಂದ ಭೂಮಿಯಿಂದ ಸದ್ದು ಬರುತ್ತಿದೆ. ಆದರೆ ಭೂಕಂಪನ ದಾಖಲಾಗಿರಲಿಲ್ಲ. 2021ರ ಆ.21ರಂದು ವಿಕಾರಬಾದನಲ್ಲಿ ಸಂಭವಿಸಿದ ಭೂಕಂಪನದ ಪ್ರಭಾವ ತಾಲ್ಲೂಕಿನ ಗಡಿಕೇಶ್ವಾರ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಗೋಚರಿಸಿತ್ತು. ಆದರೆ ಈಗ ಹಲಚೇರಾ ಗ್ರಾಮದಿಂದ ಈಶಾನ್ಯ ದಿಕ್ಕಿನಲ್ಲಿ 2.2 ಕಿ.ಮೀನಲ್ಲಿ ಭೂಕಂಪದ ಕೇಂದ್ರಬಿಂದು ಇರುವ ಕುರಿತು ಶರಣಶಿರಸಗಿಯ ಭೂಕಂಪನ ಮಾಪನ ಕೇಂದ್ರ ದೃಢಪಡಿಸಿದೆ.

ಕಂದಾಯ ನಿರೀಕ್ಷಕರ ಭೇಟಿ: ಗಡಿಕೇಶ್ವಾರ ಹಾಗೂ ಸುತ್ತಲಿನ ಗ್ರಾಮಗಳಿಗೆ ಶುಕ್ರವಾರ ಸುಲೇಪೇಟ ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಭೇಟಿ ನೀಡಿ ಮಾಹಿತಿ ಪಡೆದ್ದಾರೆ ಎಂದು ತಹಶೀಲ್ದಾರ ಅಂಜುಮ ತಬಸುಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಕ್ಕೆ ಬಾರದ ಜಿಲ್ಲಾಧಿಕಾರಿ!
ಗಡಿಕೇಶ್ವಾರ ಜನರ ಅಹವಾಲು ಆಲಿಸಲು ಜನ ಪ್ರತಿನಿಧಿಗಳು, ಅಧಿಕಾರಿಗಳು, ರಾಜಕಾರಣಿಗಳು ಗ್ರಾಮಕ್ಕೆ ಬೇಟಿ ನೀಡುತ್ತಲೇ ಇದ್ದಾರೆ. ಆದರೆ ಜಿಲ್ಲಾಧಿಕಾರಿ ಮಾತ್ರ ಇದುವರೆಗೂ ಈ ಗ್ರಾಮಕ್ಕೆ ಬಂದಿಲ್ಲ ಎಂದು ಗ್ರಾಮದ ಮುಖಂಡ ರೇವಣಸಿದ್ದಪ್ಪ ಅಣಕಲ್ ದೂರುತ್ತಾರೆ.

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರು, ಸಂಸದ ಡಾ. ಉಮೇಶ ಜಾಧವ,ಮುಖಂಡ ಡಾ. ಶರಣಪ್ರಕಾಶ ಪಾಟೀಲ ಗ್ರಾಮಗಳಿಗೆ ಭೇಟಿ ನೀಡಿದ್ದರು.ಈ ನಡುವೆ ಗ್ರಾಮಸ್ಥರ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರನ್ನು ಭೇಟಿ ಮಾಡಿತ್ತು. ಆಗ ಮುರುಗೇಶ ನಿರಾಣಿ ಅವರು ಸ್ವತಃ ನಾನೇ ಗ್ರಾಮಕ್ಕೆ ಬರುತ್ತೇನೆ. ಸಾಧ್ಯವಾದರೆ ನಿಮ್ಮ ಊರಿನಲ್ಲಿಯೇ ವಾಸ್ತವ್ಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಅವರು ಭೇಟಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT