ಮಂಗಳವಾರ, ಡಿಸೆಂಬರ್ 7, 2021
24 °C

ಕಲಬುರಗಿ: ಈದ್‌ ಮೆರವಣಿಗೆಗೆ ಅರ್ಧಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಈದ್‌ ಮಿಲಾದ್‌ ಉನ್‌ ನಬಿ’ ಹಬ್ಬದ ಅಂಗವಾಗಿ ಮಂಗಳವಾರ ಆರಂಭವಾದ ಜುಲೂಸ್‌ (ಮೆರವಣಿಗೆ)ಗೆ ಪೊಲೀಸರು ತಡೆ ಒಡ್ಡಿದರು. ಈ ಸಂದರ್ಭ ಮುಸ್ಲಿಂ ಮುಖಂಡರು ಹಾಗೂ ಪೊಲೀಸ್‌ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

ಇಲ್ಲಿನ ಮುಸ್ಲಿಂಚೌಕ್‌ ಬಳಿ ಇರುವ ದರ್ಗಾದಿಂದ ಮಂಗಳವಾರ ಸ್ತಬ್ದಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಸ್ವಲ್ಪ ದೂರ ಸಾಗುತ್ತಿದ್ದಂತೆ ಮುಸ್ಲಿಂ ಚೌಕ್‌ನಲ್ಲಿ ಅಪಾರ ಜನ ಸೇರಿದರು. ಇದರಿಂದ ಎಚ್ಚರಗೊಂಡ ಪೊಲೀಸರು, ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು.

‘ಸಾಮೂಹಿಕ ಮೆರವಣಿಗೆ, ಸಭೆ, ಸಮಾರಂಭಗಳನ್ನು ನಡೆಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೇರೆಬೇರೆ ಕಡೆಯಿಂದ ಬರುವ ಹೆಚ್ಚಿನ ಜನ ಒಂದೇ ಕಡೆ ಸೇರುವುದರಿಂದ ಕೊರೊನಾ ಹರಡುವ ಸಾಧ್ಯತೆ ಇದ್ದು, ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ’ ಎಂದು ಪೊಲೀಸರು  ಮುಖಂಡರಿಗೆ ಮನವರಿಕೆ ಮಾಡಿದರು.

‘ಈ ಹಿಂದಿನ ಹಬ್ಬಗಳಿಗೆ ಅನುಮತಿ ಕೊಡಲಾಗಿದೆ. ಚುನಾವಣೆಗಳಲ್ಲೂ ಸಾವಿರಾರು ಜನರನ್ನು ಸೇರಿಸಲಾಗಿದೆ. ಆದರೆ, ಮುಸ್ಲಿಮರು ವರ್ಷಕ್ಕೆ ಒಂದೇ ಮೆರವಣಿಗೆ ಮಾಡುತ್ತಾರೆ. ಅದಕ್ಕೂ ಏಕೆ ತಡೆ ಹಾಕುತ್ತೀರಿ? ಯಾವುದೇ ಕಾರಣಕ್ಕೂ ಮೆರವಣಿಗೆ ನಿಲ್ಲಿಸುವುದಿಲ್ಲ’ ಎಂದು ಮುಖಂಡರು ಪಟ್ಟು ಹಿಡಿದರು.

ಇದರಿಂದ ತಾಸುಗಟ್ಟಲೇ ಗೊಂದಲ ಏರ್ಪಟ್ಟಿತು. ಜನರು ಹೆಚ್ಚಿಗೆ ಸೇರಿದ್ದರಿಂದ ನೇತೃತ್ವ ವಹಿಸಿದ್ದ ಮುಖಂಡರೇ ಮೆರವಣಿಗೆ ಹಿಂಪಡೆದರು. ಎಸಿಪಿ ಗಿರೀಶ, ಇನ್‌ಸ್ಪೆಕ್ಟರ್ ಎಸ್.ಆರ್. ನಾಯಕ, ಡಿಸಿಪಿ ಶ್ರೀಕಾಂತ ಕಟ್ಟಿಮನಿ ಅವರಿಗೆ ಮುಹಮ್ಮದ್‌ ಪೈಗಂಬರ ಅವರ ಕುರಿತು ಬರೆದ ಪುಸ್ತಕ ಹಾಗೂ ಹಬ್ಬದ ಸಂದೇಶ ನೀಡುವ ಕೈಪಿಡಿಗಳನ್ನು ನೀಡುವ ಮೂಲಕ ಮೆರವಣಿಗೆ ಮುಕ್ತಾಯಗೊಳಿಸಲಾಯಿತು.

ಮುಂದುವರಿದ ದೀಪಾಲಂಕಾರ: ಹಬ್ಬದ ಪ್ರಯುಕ್ತ ಇಲ್ಲಿನ ಮುಖ್ಯರಸ್ತೆ, ಮಸೀದಿ, ದರ್ಗಾಗಳಿಗೆ ಅಲಂಕಾರ ಮಾಡಿದ್ದು ಕಣ್ಣು– ಮನ ಸೆಳೆಯಿತು. ಇಳಿಸಂಜೆಗೆ ಮನೆಯಿಂದ ಹೊರಬಂದ ಮುಸ್ಲಿಮರು ಬಣ್ಣಬಣ್ಣದ ದೀಪಾಲಂಕಾರದ ಮುಂದೆ ನಿಂತು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡರು.

ನಗರದ ದರ್ಗಾ ರಸ್ತೆ, ಹೊಸ ಜೇವರ್ಗಿ ರಸ್ತೆ, ಹಳೆ ಜೇವರ್ಗಿ ರಸ್ತೆ, ಕೋರ್ಟ್‌ ಕಾರ್ನರ್, ಶಹಾಬಜಾರ್‌, ಸಾತ್‌ ಗುಂಬಜ್‌, ಮುಸ್ಲಿಂ ಚೌಕ್, ದರಿಯಾ ರಸ್ತೆ, ಈದ್ಗಾ ವೃತ್ತ, ಚುನ್ನಿ ಮಾರ್ಕೆಟ್‌, ಕಪಡಾ ಬಜಾರ್‌, ಸೂಪರ್‌ ಮಾರ್ಕೆಟ್‌, ಎಪಿಎಂಸಿ ರಸ್ತೆ, ಖೂನಿ ಹವಾಲಾ, ಇಸ್ಲಾಂ ಕಾಲೊನಿ, ಗಾಜಿ ಮೊಹಲ್ಲ, ಕೆಬಿಎನ್‌ ದರ್ಗಾ, ಎಂಎಸ್‌ಕೆ ಮಿಲ್‌ ಪ್ರದೇಶ, ಅಂತ್ರಾಸವಾಡಿ, ಗಂಜ್‌ ಪ್ರದೇಶದಲ್ಲಿ ಜನಜಂಗುಳಿ ಸೇರಿತ್ತು.

ಇನ್ನೊಂದೆಡೆ, ಹಬ್ಬದ ಕಾರಣ ಸೂಪರ್‌ ಮಾರ್ಕೆಟ್‌ನಲ್ಲಿಯೂ ಜನದಟ್ಟಣೆ ಏರ್ಪಟ್ಟಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು