ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ‘ಗಾಂಧೀಜಿಯಲ್ಲಿತ್ತು ಆಧುನಿಕ ವಿಚಾರಧಾರೆ’: ನಟರಾಜ್ ಹುಳಿಯಾರ್

‘ಎಲ್ಲರ ಗಾಂಧೀಜಿ’ ಕೃತಿ ಸಂವಾದದಲ್ಲಿ ಪ್ರೊ. ನಟರಾಜ್ ಹುಳಿಯಾರ್
Last Updated 15 ಫೆಬ್ರುವರಿ 2023, 6:58 IST
ಅಕ್ಷರ ಗಾತ್ರ

ಕಲಬುರಗಿ: ‘ಗಾಂಧೀಜಿ ಅವರು ಯಂತ್ರಗಳ ವಿರೋಧಿಯಾಗಿರಲಿಲ್ಲ. ಅವರಿಗೆ ಸಿಂಗರ್ ಎಂಬ ಸಂಶೋಧಕ ತಯಾರಿಸಿದ ಹೊಲಿಗೆ ಬಹಳ ಅಚ್ಚುಮೆಚ್ಚಿನದಾಗಿತ್ತು. ನಾವು ಯುವಜನತೆಯ ಮಧ್ಯೆ ಆಧುನಿಕ ಗಾಂಧಿಯನ್ನು ಪರಿಚಯಿಸಬೇಕಿದೆ’ ಎಂದು ಸಾಹಿತಿ, ಅಂಕಣಕಾರ ಪ್ರೊ. ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.

ನಗರದ ರಂಗಾಯಣ ಆವರಣದಲ್ಲಿ ಮಂಗಳವಾರ ಗಾಂಧಿ ವಿಚಾರ ವೇದಿಕೆ ಹಾಗೂ ಜನರಂಗ ಸಹಯೋಗದಲ್ಲಿ ಆಯೋಜಿಸಿದ್ದ ತಾವು ಸಂಪಾದಿಸಿದ ‘ಎಲ್ಲರ ಗಾಂಧೀಜಿ’ ಕೃತಿ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಬಹುತೇಕ ಗಾಂಧಿವಾದಿಗಳು ಗಾಂಧೀಜಿ ಅವರನ್ನು ರಘುಪತಿ ರಾಘವ ರಾಜಾ ರಾಮ್ ಎಂಬ ಪ್ರಾರ್ಥನೆಗಷ್ಟೇ ಸೀಮಿತಗೊಳಿಸಿಬಿಟ್ಟಿದ್ದಾರೆ. ಹೀಗಾಗಿ, ಆ ಪ್ರಾರ್ಥನೆ ಹೇಳುವಷ್ಟರಲ್ಲಿಯೇ ಬಹುತೇಕ ಸಭಿಕರು ಅಲ್ಲಿಂದ ಎದ್ದು ಹೋಗಿರುತ್ತಾರೆ. ಗಾಂಧೀಜಿ ಪ್ರಜಾಪ್ರಭುತ್ವದ ಪ್ರತೀಕ, ಸಹನೆ, ಅಹಿಂಸೆ, ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಇದನ್ನು ಇಂದಿನ ಯುವ ಪೀಳಿಗೆಗೆ ದಾಟಿಸಬೇಕಿದೆ’ ಎಂದರು.

‘ಗಾಂಧೀಜಿ ತಮಗೆ ಬರುತ್ತಿದ್ದ ಎಲ್ಲ ಪತ್ರಗಳಿಗೂ ಉತ್ತರಿಸುತ್ತಿದ್ದರು. ಅದಕ್ಕಾಗಿ ಎರಡೂ ಕೈಗಳಿಂದ ಏಕಕಾಲಕ್ಕೆ ಬರೆಯುತ್ತಿದ್ದರು. ಚರಕದ ಮೂಲಕ ನೂಲನ್ನು ನೇಯುತ್ತಿದ್ದ ಅವರು ಆಧುನಿಕ ಯಂತ್ರಗಳನ್ನು ದ್ವೇಷಿಸುತ್ತಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಈ ಬಗ್ಗೆ ವಿದೇಶಿ ಮಹಿಳೆಯೊಬ್ಬರು ಕೇಳಿದಾಗ, ಅವರಿಗೆ ಉತ್ತರಿಸಿದ್ದ ಗಾಂಧೀಜಿ ಯಂತ್ರಗಳನ್ನು ದ್ವೇಷಿಸುತ್ತೇನೆ ಎಂದು ಹೇಳಿದವರು ಯಾರು? ಸಿಂಗರ್ ಮಷಿನ್ ಎಷ್ಟೋ ಮಹಿಳೆಯರು ಸೂಜಿಯಿಂದ ಹೊಲಿಗೆ ಹಾಕುವಾಗ ಬೆರಳುಗಳಿಗೆ ತೂತು ಬೀಳುವುದನ್ನು ತಪ್ಪಿಸಿದೆ. ಇದು ಕ್ರಾಂತಿಕಾರಿ ಶೋಧನೆಯಲ್ಲವೇ ಎಂದು ಪ್ರತಿಕ್ರಿಯಿಸಿದ್ದರು’ ಎಂದು ನಟರಾಜ್ ಹುಳಿಯಾರ್ ಸ್ಮರಿಸಿದರು.

ಧಾರವಾಡದ ಗಾಂಧಿವಾದಿ ಚಿಂತಕ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ‘ಗಾಂಧೀಜಿ ಹೇಳಿದ ಸರಳ ಜೀವನಶೈಲಿಯನ್ನು ಮರೆತಿದ್ದರಿಂದಲೇ ಇಂದು ಜೋಶಿಮಠದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಕಾಣುತ್ತಿದ್ದೇವೆ. ಹೀಗಾಗಿ, ಸರಳ ಜೀವನಕ್ಕೆ ಮರಳಿದರೆ ಮನುಕುಲಕ್ಕೆ ಕ್ಷೇಮವಾಗಿರಲಿದೆ’ ಎಂದರು.

‘ಮನುಷ್ಯ ತನ್ನ ದುರಾಸೆ ಹಾಗೂ ಐಷಾರಾಮಿ ಜೀವನ ಶೈಲಿಯಿಂದ ಪ್ರಕೃತಿಗೆ ಕೇಡುಂಟು ಮಾಡುತ್ತಿದ್ದಾನೆ. ಈ ಬಗ್ಗೆ ವಿಜ್ಞಾನಿಗಳು ಹೇಳಿದ್ದನ್ನು ಗಾಂಧೀಜಿ 100 ವರ್ಷಗಳ ಹಿಂದೆಯೇ ಹೇಳಿದ್ದರು. ಗಾಂಧೀಜಿ ಪ್ರಕೃತಿ, ಆರ್ಥಿಕತೆ, ಸರಳ ಜೀವನ ಶೈಲಿ, ಲೈಂಗಿಕತೆ ಸೇರಿದಂತೆ ಜಗತ್ತಿನ ಎಲ್ಲ ವಿಚಾರಗಳ ಬಗ್ಗೆಯೂ ಹೇಳಿದ್ದಾರೆ’ ಎಂದು ತಿಳಿಸಿದರು.

ಕರ್ನಾಟಕ ಕೇಂದ್ರೀಯ ವಿ.ವಿ. ಪ್ರಾಧ್ಯಾಪಕಿ ಪ್ರೊ. ಶಿವಗಂಗಾ ರುಮ್ಮಾ ಮಾತನಾಡಿ, ‘ಗಾಂಧೀಜಿಯವರು ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ವ್ಯಾಕುಲಗೊಂಡಿದ್ದರು. ಆದರೆ, ಸಿರಿವಂತರ ಮನಃಪರಿವರ್ತನೆ ಮೂಲಕ ಅವರ ಸಂಪತ್ತನ್ನು ಬಡವರ ಕಲ್ಯಾಣಕ್ಕೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು ಎಂದಿದ್ದರು. ಆದರೆ, ಗಾಂಧೀಜಿಯವರ ಈ ಮಾತನ್ನು ಯಾರು ಕೇಳುತ್ತಾರೆ? ಪ್ರಭುತ್ವ ಮಧ್ಯಪ್ರವೇಶಿಸದ ಹೊರತು ಬಡವರಿಗೆ ಸಿರಿವಂತರಿಂದ ನೆರವು ಕೊಡಿಸುವುದು ಅಸಾಧ್ಯದ ಮಾತು’ ಎಂದರು.

ಸಾಹಿತಿ ಮಹಾಂತೇಶ ನವಲಕಲ್, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಡಾ. ವೀರಶೆಟ್ಟಿ ಗಾರಂಪಳ್ಳಿ, ಬಸಣ್ಣ ಶಿಂಗೆ, ಅಜೀಮ್ ಪಾಷಾ ಸಂವಾದದಲ್ಲಿ ಭಾಗವಹಿಸಿದ್ದರು.

ಗಾಂಧಿ ವಿಚಾರ ವೇದಿಕೆಯ ಮುಖ್ಯಸ್ಥ ಶಂಕ್ರಯ್ಯ ಘಂಟಿ ನಿರ್ವಹಣೆ ಮಾಡಿದರು. ಪ್ರೊ. ಲಕ್ಷ್ಮಿ ಶಂಕರ ಜೋಶಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ಪ್ರೊ. ವಿಕ್ರಮ ವಿಸಾಜಿ, ಪ್ರೊ. ಅಪ್ಪುಗೆರೆ ಸೋಮಶೇಖರ್, ಪ್ರೊ. ಅರುಣ ಜೋಳದಕೂಡ್ಲಿಗಿ, ಅಶ್ವಿನಿ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT